ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ; ಮಾರುಕಟ್ಟೆಯಲ್ಲಿ ಗರಿಗೆದರಿದೆ ಅಡಕೆ ಖರೀದಿ : ಹಬ್ಬದ ಬಳಿಕ ಅಡಕೆಗೆ ಇನ್ನಷ್ಟು ಬೇಡಿಕೆ !- ಕಹಳೆ ನ್ಯೂಸ್
ಮಾರುಕಟ್ಟೆಯಲ್ಲಿ ಅಡಕೆ ಖರೀದಿ ವ್ಯಾಪಾರ ಗರಿಗೆದರಿದೆ. ಹೊಸ ಅಡಕೆ ದರ ಏರಿಕೆ ಕಂಡಿದೆ. ಮಳೆಯ ಅಬ್ಬರ ತುಸು ಕಡಿಮೆಯಾಗುತ್ತಿದ್ದಂತೆ ಅಡಕೆ ವ್ಯಾಪಾರದಲ್ಲಿ ಕಳೆ ಕಂಡು ಬಂದಿದೆ. ಈ ಬಾರಿಯ ಅನಿಯಮಿತ ಮಳೆಯಿಂದ ಭಾರಿ ಪ್ರಮಾಣದ ಕೊಳೆರೋಗ ಆವರಿಸಿ ಕಂಗಾಲಾಗಿದ್ದ ಅಡಕೆ ಬೆಳೆಗಾರನಿಗೆ ಅಡಕೆ ಧಾರಣೆ ಏರಿಕೆ ಅಲ್ಪಮಟ್ಟಿನ ಖುಷಿ ನೀಡಿದೆ ಎಂದೇ ಹೇಳಬಹುದು.
ಅಷ್ಟು ಮಾತ್ರವಲ್ಲದೇ, ಕಳೆದ ಐದಾರು ತಿಂಗಳಿನಿಂದ ಕಿಲೋ ಒಂದಕ್ಕೆ 450 ರೂ. ದರವಿದ್ದ ಹೊಸ ಅಡಕೆ ಧಾರಣೆ, ಈಗ ಎರಡು ವಾರದಿಂದ ಏರಿಕೆ ಕಂಡಿದೆ. ಮಳೆ ಕಡಿಮೆಯಾಗುತ್ತಿದ್ದಂತೆ, ಅಡಕೆ ಮಾರಟಕ್ಕೆ ಸಿದ್ಧವಾಗಿದೆ. ಜೊತೆಗೆ ಬೆಲೆ ಏರಿಕೆಯ ಪೈಪೋಟಿ ಕೂಡಾ ಪ್ರಾರಂಭವಾಗಿದೆ.
ಸಹಕಾರಿ ರಂಗದ ಕ್ಯಾಂಪ್ಕೋದಲ್ಲಿ ಹೊಸ ಅಡಕೆ ಧಾರಣೆ ಕೆಜಿಗೆ 465ರೂ. ಕ್ಕೆ ತಲುಪಿದ್ದು, ಕಳೆದ ಎರಡು ವಾರದಲ್ಲಿ 15 ರೂ. ನಷ್ಟು ಏರಿಕೆ ಮಾಡಲಾಗಿದೆ. ಇದೇ ವೇಳೆ ಹೊಸ ಅಡಕೆ ಖರೀದಿಯಲ್ಲಿ ಪೈಪೋಟಿಗೆ ಬಿದ್ದ ಖಾಸಗಿ ವಲಯ ಧಾರಣೆಯಲ್ಲಿ ಧಾರಣೆ ದಿಢೀರ್ ಏರಿಕೆ ಮಾಡಿದ್ದು, ಬುಧವಾರ ಖಾಸಗಿ ವಲಯದಲ್ಲಿ 485 ರೂ. ವರೆಗೂ ಖರೀದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಅಡಕೆ ಧಾರಣೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 400 ರೂ. ಗಡಿ ದಾಟಿತ್ತು. ಅನಂತರ ಹಂತ ಹಂತವಾಗಿ ಅಡಕೆ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ನಾಲ್ಕೈದು ತಿಂಗಳಲ್ಲಿ 450 ರೂ. ದರದಲ್ಲಿ ಧಾರಣೆ ತಟಸ್ಥವಾಗಿಯೇ ಇತ್ತು. ಈ ನಡುವೆ ಮಳೆಗಾಲ ಪ್ರಾರಂಭ ವಾದ ನಂತರ, ಮಾರುಕಟ್ಟೆಯಲ್ಲಿ ಖರೀದಿ ವ್ಯವಹಾರ ಕಡಿಮೆಯಾಗಿತ್ತು ಎಂದೇ ಹೇಳಬಹುದು. ಇದೀಗ ಹಬ್ಬಗಳ ಋತು ಪ್ರಾರಂಭವಾಗಿದೆ. ಬೆಳೆಗಾರರು ಹೊಸ ಅಡಕೆಯನ್ನು ಮಾರಾಟಕ್ಕೆ ತರುತ್ತಿದ್ದಾರೆ. ಸದ್ಯ ಬೆಲೆ ಏರಿಕೆ ಹೀಗೆಯೇ ಮುಂದುವರಿದರೆ ಇನ್ನು ಒಂದೆರಡು ವಾರದಲ್ಲಿ ಹೊಸ ಅಡಕೆ ಧಾರಣೆ 500 ರೂ. ಗಡಿ ದಾಟುವ ಸಾಧ್ಯತೆ ಇದೆ.
ಹಳೆ ಅಡಕೆ ಧಾರಣೆಯೂ ಕೂಡಾ ಕೆಜಿಗೆ 550 ರೂ ದರದಲ್ಲಿ ಸ್ಥಿರವಾಗಿತ್ತು. ಕಳೆದ ಎರಡು ವಾರಗಳಿಂದ ನಿಧಾನವಾಗಿ ಏರಿಕೆ ಕಂಡ ಧಾರಣೆ ಇದೀಗ ಖಾಸಗಿ ಮಾರುಕಟ್ಟೆಯಲ್ಲಿ 15 ರೂ. ಹೆಚ್ಚಳವಾಗಿ 560 ರೂ.ಗೆ ತಲುಪಿದೆ. ಖಾಸಗಿ ವಲಯದಲ್ಲಿ 575 ರೂ. ದರದಲ್ಲಿ ಖರೀದಿಯಾಗುತ್ತಿದೆ. ಹೊಸ ಅಡಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದ್ದಂತೆ ಇತ್ತ ಹಳೆ ಚಾಲಿ ಅಡಕೆ ಧಾರಣೆಗೂ ಡಿಮ್ಯಾಂಡ್ ಬಂದಿದೆ ಎಂದೇ ಹೇಳಬಹುದು. ಚೌತಿ ಹಬ್ಬದ ಬಳಿಕ ಹಳೆ ಅಡಕೆಗೆ ಇನ್ನಷ್ಟು ಬೇಡಿಕೆ ಬರಲಿದ್ದು, ಆ ಸಂದರ್ಭದಲ್ಲಿ ಧಾರಣೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಈ ಬಾರಿಯ ಬೇಸಿಗೆ ಹಾಗೂ ವರುಣಾರ್ಭಟ ಹೆಚ್ಚಿದ್ದರಿಂದ, ಈ ಪ್ರತಿಕೂಲ ಹವಾಮಾನ ಅಡಕೆ ಬೆಳೆ ಮೇಲೆ ದೊಡ್ಡ ಮಟ್ಟಿನಲ್ಲಿ ಪರಿಣಾಮ ಬೀರಿತ್ತು. ಹಾಗಾಗಿ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿತ್ತು.ಹಾಗಾಗಿ ಈಗ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಧಾರಣೆ ಸಹಜವಾಗಿಯೇ ಏರಿಕೆ ಕಾಣುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಧಾರಣೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.