ಕೆಟ್ಟ ಮೇಲೆ ಬುದ್ಧಿ: ವಿವಾದಿತ ಪಠ್ಯ ವಾಪಸ್ ಪಡೆದ ಮಂಗಳೂರು ವಿ.ವಿ. ; ಪಠ್ಯ ರಚನಾ ಸಮಿತಿಯ ಮೇಲೆ ಸೂಕ್ತ ಕ್ರಮಕ್ಕೆ ಮಾಜಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ ಆಗ್ರಹ – ಕಹಳೆ ನ್ಯೂಸ್
ಮಂಗಳೂರು: ದ್ವಿತೀಯ ಬಿಕಾಂ ವಿದ್ಯಾರ್ಥಿಗಳ ಕನ್ನಡ ಪಠ್ಯಪುಸ್ತಕದಲ್ಲಿ ಸೆಕ್ಸ್ ಕಥೆಯನ್ನು ಅಳವಡಿಸಿದ್ದ ಮಂಗಳೂರು ವಿವಿ ಕೊನೆಗೂ ಎಚ್ಚೆತ್ತುಕೊಂಡಿದೆ. ಅನೈತಿಕ ಪಠ್ಯದ ವಿಚಾರ ವಿವಾದಕ್ಕೀಡಾಗುತ್ತಿರುವಂತೆ ಮಂಗಳೂರು ವಿಶ್ವವಿದ್ಯಾನಿಲಯವು ಪಠ್ಯವನ್ನು ವಾಪಸ್ ಪಡೆದುಕೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಬಿಕಾಂ ತರಗತಿಯ ಕನ್ನಡ ಪಠ್ಯ ’ನುಡಿ ನೂಪುರ’ ಪಠ್ಯ ಪುಸ್ತಕದಲ್ಲಿ ದಿವಂಗತ ಮಟ್ಟಾರು ವಿಠಲ ಹೆಗ್ಡೆಯವರು ರಚಿಸಿದ ‘ಮಗುವಿನ ತಂದೆ’ ಎನ್ನುವ ಅಧ್ಯಾಯವಿತ್ತು. ಮಂಗಳೂರು ವಿವಿ ಪ್ರಸಾರಂಗ ಹೊರ ತಂದಿರುವ ಪುಸ್ತಕದಲ್ಲಿ ಅನೈತಿಕ ಪಾಠದ ಬಗ್ಗೆ ಅತಿರಂಜನೀಯ ಕಥೆಯಿದೆ ಎನ್ನುವ ಆರೋಪಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಕೇಳಿಬಂದಿತ್ತು.
ಇದೀಗ ಮಂಗಳೂರು ವಿವಿ ವಿವಾದಕ್ಕೀಡಾಗಿದ್ದ ‘ಮಗುವಿನ ತಂದೆ’ ಎನ್ನುವ ಪಠ್ಯವನ್ನು ವಾಪಸ್ ಪಡೆದಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪಠ್ಯ ಪುಸ್ತಕ ರಚನಾ ಸಮಿತಿಯು ಪ್ರತಿ ಶೈಕ್ಷಣಿಕ ವರ್ಷದಲ್ಲಿಯೂ ಗೊಂದಲವನ್ನು ಮಾಡುತ್ತಿದೆ. ಈ ಬಾರಿ ದ್ವಿತೀಯ ಬಿ.ಕಾಮ್. ಪದವಿಯ ಕನ್ನಡ ಭಾಷಾ ಪಠ್ಯವು ಪುಸ್ತಕ ‘ನುಡಿ ನೂಪುರ’ ದ ‘ಮಗುವಿನ ತಂದೆ’ ಕಥೆಯನ್ನು ಹೇಳಲು ಬಳಸಿದ ಸಾಹಿತ್ಯ ಪಠ್ಯ ಯೋಗ್ಯವಾಗಿಲ್ಲ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇಲ್ಲಿ ಬಳಸಿದ ಸಾಹಿತ್ಯದಿಂದ ತರಗತಿಯಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ. ಆದುದರಿಂದ ವಿಶ್ವವಿದ್ಯಾಲಯದ ಆಡಳಿತವು ‘ ನುಡಿ ನೂಪುರ’ ಪಠ್ಯದ ಭಾಗದಿಂದ ಈ ಕಥೆಯನ್ನು ತೆಗೆದು ಹಾಕಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ವಿ.ವಿ.ಯ ಕನ್ನಡ ವಿಭಾಗದ ಪಠ್ಯ ರಚನಾ ಸಮಿತಿಯು ಇದೇ ರೀತಿಯ ಗೊಂದಲಕ್ಕೆ ಕಾರಣವಾಗಿದ್ದು ‘ಯುದ್ಧ ಒಂದು ಉದ್ಯಮ’ ಕೃತಿಯನ್ನು ಪಠ್ಯ ಮಾಡಿ ಸಾಹಿತ್ಯದ ಹೆಸರಿನಲ್ಲಿ ಸೈನಿಕರನ್ನು ಅವಹೇಳನ ಮಾಡುವ ಭಾಗಗಳನ್ನು ಪಠ್ಯದ ಭಾಗವನ್ನಾಗಿ ಮಾಡಿ ಗೊಂದಲ ಉಂಟುಮಾಡಿತ್ತು. ‘ಗಾಂಧಿ ಬಂದ’ ಪುಸ್ತಕವನ್ನೂ ಪಠ್ಯ ಮಾಡಿ ಕೊನೆಗೆ ವಿ.ವಿ.ಗೆ ಮುಜುಗರ ಉಂಟಾಗಿ ಕೊನೆಗೆ ವಾಪಾಸು ಪಡೆಯುವ ಮುಜುಗರಕ್ಕೆ ಈಡಾಗಿತ್ತು. ಆದುದರಿಂದ ವಿಶ್ವವಿದ್ಯಾಲಯದ ಆಡಳಿತವು ಕನ್ನಡ ವಿಭಾಗದ ಪಠ್ಯ ರಚನಾ ಸಮಿತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಹರೀಶ್ ಆಚಾರ್ಯ
ಮಾಜಿ ಸಿಂಡಿಕೇಟ್ ಸದಸ್ಯ ಮಂಗಳೂರು ವಿ. ವಿ.