Recent Posts

Monday, January 20, 2025
ಬೆಂಗಳೂರುಸಿನಿಮಾಸುದ್ದಿ

ಚಿರು ಸಾವಿನ ಎರಡು ವರ್ಷಗಳ ನಂತರ 2ನೇ ಮದುವೆಯ ಬಗ್ಗೆ ನಟಿ ಮೇಘನಾ ರಾಜ್ ನಿರ್ಧಾರ ..!? – ಕಹಳೆ ನ್ಯೂಸ್

ಬೆಂಗಳೂರು: ಅದು 2020ರ ಜೂನ್​ 7. ಚಿತ್ರರಂಗ, ಸಿನಿ ಪ್ರಿಯರು ಸೇರಿದಂತೆ ಹಲವು ಮಂದಿಗೆ ಆಘಾತ ಕೊಟ್ಟ ದಿನವಿದು. ಸೂಪರ್​ ಸ್ಟಾರ್​ ಚಿರಂಜೀವಿ ಸರ್ಜಾ, ಎಲ್ಲರ ಪ್ರೀತಿಯ ಚಿರು ಅವರು 36ರ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿ ಹೋದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರೂ ಊಹಿಸದ ರೀತಿಯಲ್ಲಿ ಚಿಕ್ಕ ಪ್ರಾಯದಲ್ಲಿಯೇ ಇವರು ಎಲ್ಲರನ್ನೂ ಅಗಲಿ ಹೋದಾಗ ಪತ್ನಿ ಮೇಘನಾ ರಾಜ್​ ಐದು ತಿಂಗಳ ಗರ್ಭಿಣಿ. ಎಂಟು ವರ್ಷಗಳ ಕಾಲದ ಇವರ ಪ್ರೀತಿ, ದಾಂಪತ್ಯಕ್ಕೆ ಕಾಲಿಟ್ಟು ಇನ್ನು ಎರಡು ವರ್ಷವಷ್ಟೇ ಆಗಿದ್ದಾಗಲೇ ಈ ಬರಸಿಡಿಲು ಬಂದೆರಗಿತ್ತು.

ಇದೀಗ ಚಿರು ಅವರು ನಿಧನರಾಗಿ ಎರಡು ವರ್ಷಗಳೇ ಕಳೆದು ಹೋಗಿವೆ. ಪತ್ನಿ ಮೇಘನಾ ರಾಜ್​, ಒಂದೂವರೆ ವರ್ಷಗಳ ಅವರ ಪುಟ್ಟ ಕಂದ ರಾಯನ್ ರಾಜ್ ಸರ್ಜಾ ಹಾಗೂ ಕುಟುಂಬಸ್ಥರು ಈ ಅಗಲಿಕೆಯ ನೋವಿನಿಂದ ಆಚೆ ಬರುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸಿ ಹೆಸರು ಮಾಡಿರುವ ನಟಿ ಮೇಘನಾ ಪುನಃ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ, ಜತೆಗೆ ‘ಡ್ಯಾನ್ಸಿಂಗ್ ಚಾಂಪಿಯನ್’ ಎಂಬ ರಿಯಾಲಿಟಿ ಷೋಗೆ ಜಡ್ಜ್ ಆಗಿದ್ದಾರೆ.

32 ವರ್ಷ ವಯಸ್ಸಿನ ಮೇಘನಾ ರಾಜ್​ ಅವರ ಮುಂದೆ ಈಗ ಎರಡನೆಯ ಮದುವೆಯ ಪ್ರಸ್ತಾಪ ಮಾಡಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು ಒಂಟಿಯಾಗಿರುವ ಮೇಘನಾ ಅವರು ಮತ್ತೊಂದು ಮದುವೆ ಮಾಡಿಕೊಳ್ಳಬೇಕು ಎನ್ನುವುದು ಅವರ ಹಲವು ಅಭಿಮಾನಿಗಳ ಆಶಯ. ಇದೇ ಕಾರಣಕ್ಕೆ ಸಂದರ್ಶನವೊಂದರಲ್ಲಿ ಎರಡನೆಯ ಮದುವೆಯ ಪ್ರಸ್ತಾಪವನ್ನು ಅವರ ಮುಂದೆ ಇಟ್ಟಾಗ, ಈ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ ನಟಿ ಮೇಘನಾ.

ನೀವು ಎರಡನೆಯ ಮದುವೆಯಾಗಲು ಇಷ್ಟಪಡುವಿರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮೇಘನಾ, ‘ಅದರ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಹಲವರು ನನಗೆ ಇನ್ನೊಂದು ಮದುವೆಯಾಗು ಎಂದು ಹೇಳುತ್ತಿದ್ದಾರೆ, ಮತ್ತೆ ಕೆಲವರು ಮಗನ ಮುಖ ನೋಡಿ, ಚಿರುವಿನ ನೆನಪಿನಲ್ಲಿಯೇ ಬದುಕು ಮುಂದುವರೆಸು ಎನ್ನುತ್ತಿದ್ದಾರೆ. ನನಗೆ ಯಾರ ಮಾತು ಕೇಳಲಿ ಎಂದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ.

ಇದೇ ವೇಳೆ ಪತಿ ಹೇಳುತ್ತಿದ್ದ ಮಾತನ್ನು ನೆನಪಿಸಿಕೊಂಡ ನಟಿ, ‘ಚಿರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ಅದೇನೆಂದರೆ ಯಾರು ಏನೇ ಹೇಳಿದರೂ, ಕೊನೆಗೆ ನಿರ್ಧಾರ ನಿನ್ನದು. ಯಾವ ವಿಷಯದಲ್ಲಿಯೂ ಯಾರ ಮಾತನ್ನೂ ಕೇಳಬೇಡ. ನಿನ್ನ ಮನಸ್ಸಿನ ಮಾತನ್ನಷ್ಟೇ ಕೇಳಬೇಕು ಅಷ್ಟೇ ಎನ್ನುತ್ತಿದ್ದರು. ಆ ಮಾತನ್ನು ಈಗ ನಾನು ಪಾಲಿಸಬೇಕಿದೆ. ಸದ್ಯ ಎರಡನೆಯ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಮುಂದೆ ಏನಾಗುವುದೋ ತಿಳಿದಿಲ್ಲ. ಮರು ಮದುವೆಯ ಬಗ್ಗೆ ಯೋಚನೆ ಮಾಡಿದರೆ ಖಂಡಿತವಾಗಿಯೂ ತಿಳಿಸುತ್ತೇನೆ’ ಎಂದಿದ್ದಾರೆ.

‘ನಾಳೆ ಏನಾಗುತ್ತೆ ಅನ್ನೋದರ ಬಗ್ಗೆ ಆಗಲೀ, ಇನ್ನೊಂದಿಷ್ಟು ದಿನಗಳಾದ ಮೇಲೆ ನನ್ನ ಬದುಕು ಏನಾಗಬಹುದು ಅನ್ನೋದರ ಬಗೆಗಾಗಲಿ ತಲೆ ಕೆಡಿಸಿಕೊಳ್ಳುವವಳು ನಾನಲ್ಲ. ನಾನು ಈ ಕ್ಷಣದಲ್ಲಿ ಜೀವಿಸುವವಳು. ಚಿರು ಹೇಳಿದಂತೆಯೇ ಕೇಳುತ್ತೇನೆ. ನಾಳೆ ನನ್ನ ಮನಸ್ಸು ಏನು ಹೇಳುವುದೋ ಗೊತ್ತಿಲ್ಲ. ಆದರೆ ನನ್ನ ಬದುಕಿನ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಶಕ್ತಿ ನನ್ನಲ್ಲಿ ಇದೆ. ಚಿರು ಹೇಳಿದಂತೆ ನನ್ನ ಮನಸ್ಸಿನ ಮಾತನ್ನು ನಾನು ಕೇಳುತ್ತೇನೆ. ಎರಡನೆಯ ಮದುವೆಯ ಬಗ್ಗೆ ನಾನು ಏನೇ ನಿರ್ಧಾರ ತೆಗೆದುಕೊಂಡರೂ ಚಿರು ನನ್ನ ಜತೆ ಕೊನೆಯವರೆಗೂ ಇರುತ್ತಾರೆ ಎಂದು ನಂಬಿದ್ದೇನೆ’ ಎಂದಿದ್ದಾರೆ ಮೇಘನಾ ರಾಜ್​.

‘ಸದ್ಯ ನಾನು ನನ್ನ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿದೆ. ಆತನಿಗೆ ಉತ್ತಮ ಭವಿಷ್ಯ ಕಲ್ಪಿಸಿ ಕೊಡಬೇಕಾಗಿದೆ. ಹಾಗಾಗಿ ಚಿತ್ರರಂಗಕ್ಕೆ ಮರಳಿ ಬಂದಿದ್ದೇನೆ. ಒಳ್ಳೆಯ ಸಿನಿಮಾವನ್ನು ನೀಡಬೇಕು ,ಒಳ್ಳೆಯ ಬದುಕನ್ನು ನನ್ನ ಮಗನಿಗೆ ಕಟ್ಟಿಕೊಡಬೇಕು ಎಂಬುದಷ್ಟೇ ಸದ್ಯ ನನಗಿರುವ ಆಶಯ. ಉಳಿದದ್ದು ನಂತರ ಯೋಚಿಸುವೆ ಎಂದಿದ್ದಾರೆ. (ಏಜೆನ್ಸೀಸ್​)