Monday, January 20, 2025
ಸುದ್ದಿ

ಬೃಹತ್ ಅವಳಿ ಕಟ್ಟಡಗಳ ನೆಲಸಮಕ್ಕೆ ಕೌಂಟ್‍ಡೌನ್ : ಏಕೆ ಕಟ್ಟಡಗಳನ್ನು ಧ್ವಂಸ ಮಾಡಲಾಗುತ್ತಿದೆ? ಯಾವ ರೀತಿ ಧ್ವಂಸ ಕಾರ್ಯ ನಡೆಯುತ್ತೆ ಗೊತ್ತಾ..? – ಕಹಳೆ ನ್ಯೂಸ್

ದೇಶದಲ್ಲಿ ತಲೆ ಎತ್ತಿದ್ದ ಮತ್ತೊಂದು ಅಕ್ರಮ ಕಟ್ಟಡದ ನೆಲಸಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆಗಸ್ಟ್ 28, ಮಧ್ಯಾಹ್ನ 2.30 ಕ್ಕೆ ಉತ್ತರ ಪ್ರದೇಶದ ನೋಯ್ಡಾದ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಗೋಪುರಗಳನ್ನು ಸ್ಪೋಟಕಗಳನ್ನು ಬಳಸಿ ಕೆಡವಲು ಈಗಾಗಲೇ ನಿರ್ಧರಿಸಿದ್ದು, ಅದಕ್ಕೆ ಬೇಕಾದ ತಯಾರಿ ಭರದಿಂದ ಸಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುರಕ್ಷತೆ, ಕಟ್ಟಡ ಅವಶೇಷಗಳ ಸ್ಥಳಾಂತರ, ಕಟ್ಟಡ ನೆಲಸಮದ ಉಪಕರಣಗಳು, ವಸ್ತುಗಳು ಹೀಗೆ ಎಲ್ಲಾ ಯೋಜನೆಗಳನ್ನು ಈಗಾಗಲೇ ರೂಪಿಸಿಕೊಳ್ಳಲಾಗಿದೆ. ಈ ಎರಡೂ ಕಟ್ಟಡಗಳ ಧ್ವಂಸ ದುಬಾರಿಯಾಗಿದ್ದು, ಸುಮಾರು 20 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಕಟ್ಟಡ ನೆಲಸಮಕ್ಕೆ 20 ಕೋಟಿ ವೆಚ್ಚ
ಅವಳಿ ಗೋಪುರಗಳಲ್ಲಿ ಒಂದು ಕಟ್ಟಡವು 103 ಮೀಟರ್ ಎತ್ತರ ಮತ್ತು ಇನ್ನೊಂದು ಕಟ್ಟಡವು ಸುಮಾರು 97 ಮೀಟರ್ ಎತ್ತರವಿದೆ. ಅವಳಿ ಗೋಪುರ ಕೆಡವಲು ಅಂದಾಜು 20 ಕೋಟಿ ರೂಪಾಯಿ ವೆಚ್ಚವಾಗಲಿದೆ, ಪ್ರತಿ ಚದರ ಅಡಿ ನಿರ್ಮಾಣಕ್ಕೆ ಸರಾಸರಿ 933 ರೂಪಾಯಿ ವೆಚ್ಚವಾಗಿತ್ತು. ಈಗ ಕೆಡವಲು ಪ್ರತಿ ಚದರಡಿಗೆ ಸರಾಸರಿ 267 ರೂಪಾಯಿ ವೆಚ್ಚ ಮಾಡಬೇಕಾಗಿದೆ. ಸೂಪರ್ ಟೆಕ್ ರಿಯಲ್ ಎಸ್ಟೇಟ್ ಕಂಪನಿಯು ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಕಂಪನಿಯ ಬಳಿ ಈ ಅವಳಿ ಗೋಪುರ ಕೆಡವಲು ಕೂಡ ಹಣವಿಲ್ಲ ಎನ್ನಲಾಗಿದೆ.
ಅವಳಿ ಕಟ್ಟಡಗಳು
ಸೂಪರ್ ಟೆಕ್ ಕಂಪನಿಯು ಸುಮಾರು ಐದು ಕೋಟಿ ರೂಪಾಯಿ ಹಣವನ್ನು ಮಾತ್ರ ಎಡಿಫೈಸ್ ಇಂಜಿನಿಯರಿಂಗ್ ಕಂಪನಿಗೆ ನೀಡಿದೆ. ಉಳಿದ 15 ಕೋಟಿ ಹಣವನ್ನು ಅವಳಿ ಗೋಪುರದ ಕಬ್ಬಿಣ, ಸ್ಟೀಲ್, ಅವಶೇಷಗಳ ಮಾರಾಟದಿಂದ ಸಂಗ್ರಹಿಸಿಕೊಳ್ಳಲು ಎಡಿಫೈಸ್ ಕಂಪನಿಯು ನಿರ್ಧರಿಸಿದೆ. ಕಟ್ಟಡದಲ್ಲಿ ಸುಮಾರು 4,000 ಟನ್ ಉಕ್ಕು ಸೇರಿದಂತೆ ಸುಮಾರು 55,000 ಟನ್ ಲಭ್ಯವಾಗಲಿದೆ.
ಸುತ್ತಮುತ್ತಲಿನ ಕಟ್ಟಡ ಹಾನಿಗೆ 100 ಕೋಟಿ ರೂ.ವಿಮೆ
ಇದಲ್ಲದೇ, ಕಟ್ಟಡಗಳನ್ನು ಉರುಳಿಸುವ ಜವಾಬ್ದಾರಿ ಹೊತ್ತಿರುವ ಎಡಿಫೈಸ್ ಇಂಜಿನಿಯರಿಂಗ್ ಕಂಪನಿಯು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾನಿ ಸಂಭವಿಸಿದಲ್ಲಿ 100 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ.
3,700 ಕೆಜಿ ಸ್ಫೋಟಕಗಳ ಬಳಕೆ
ಸ್ಫೋಟಕಗಳನ್ನು ಸಿಡಿಸಿ ಕಟ್ಟಡಗಳನ್ನು ಕೆಡವಲು ಯೋಜನೆ ಹಾಕಿಕೊಳ್ಳಲಾಗಿದೆ. ಪಲ್ವಾಲ್ (ಹರಿಯಾಣ) ನಿಂದ ತರಿಸಿಕೊಳ್ಳಲಾಗಿರುವ 3,500 ಕೆಜಿ ಸ್ಫೋಟಕಗಳನ್ನು ಬಳಸಿ ಧ್ವಂಸ ಮಾಡಲಾಗುತ್ತೆ. ಇದು ಡೈನಮೈಟ್, ಎಮಲ್ಷನ್ ಮತ್ತು ಪ್ಲಾಸ್ಟಿಕ್ ಸ್ಫೋಟಕಗಳ ಮಿಶ್ರಣವಾಗಿರುತ್ತದೆ.
‘ಜಲಪಾತ’ದ ಸ್ಫೋಟ ತಂತ್ರ ಬಳಕೆ
ಗೋಪುರಗಳನ್ನು ಕೆಡವಲು ‘ಜಲಪಾತದ ಸ್ಫೋಟ’ ತಂತ್ರವನ್ನು ಬಳಸಲಾಗುತ್ತಿದೆ. ಇದರರ್ಥ ನೆಲಮಾಳಿಗೆಯು ಮೊದಲು ಕುಸಿಯುತ್ತದೆ, ಮತ್ತು ನಂತರ ಮೇಲಿನ ಮಹಡಿಗಳು ಒಂದೊಂದಾಗಿ ಕುಸಿಯುತ್ತವೆ. ಈ ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತರಲು ದಕ್ಷಿಣ ಆಫ್ರಿಕಾದಿಂದ ತಜ್ಞರನ್ನು ಕರೆಸಲಾಗುತ್ತಿದೆ. ಅಲ್ಲದೇ ಗೋಪುರದ ಧ್ವಂಸವಾದ ಬಳಿಕ 55,000 ಟನ್‍ಗಳಷ್ಟು ಶಿಲಾಖಂಡರಾಶಿ ಸೃಷ್ಟಿಯಾಗಲಿದೆ. ನಂತರ ಇದನ್ನು 5 ರಿಂದ 6 ಹೆಕ್ಟೇರ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಹಾಕಲಾಗುತ್ತದೆ. ಕುತೂಹಲಕಾರಿಯಾಗಿ, ಅವಶೇಷಗಳನ್ನು ತೆರವುಗೊಳಿಸಲು ಸುಮಾರು ಮೂರು ತಿಂಗಳು ತೆಗೆದುಕೊಳ್ಳಬಹುದು ಎನ್ನಲಾಗಿದೆ.

ತಂಡದಲ್ಲಿ 100 ಕಾರ್ಮಿಕರು
ಸುಮಾರು 100 ಕಾರ್ಮಿಕರು ಡೆಮಾಲಿಷನ್ ತಂಡದ ಭಾಗವಾಗಿದ್ದಾರೆ. ಭಾರತದ ಬ್ಲಾಸ್ಟರ್ ಚೇತನ್ ದತ್ತಾ ಆಗಸ್ಟ್ 28 ರಂದು ಮಧ್ಯಾಹ್ನ 2.30 ಕ್ಕೆ ಸ್ಫೋಟಕವನ್ನು ಸಿಡಿಸಲಿದ್ದಾರೆ. ಗೋಪುರಗಳನ್ನು ಕೆಡವಲು ಸುಮಾರು 9 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂಪರ್ ಟೆಕ್ ಕಂಪನಿಗೆ ಭಾರಿ ನಷ್ಟ
ಸೂಪರ್ ಟೆಕ್ ಕಂಪನಿಯು ಈ ಅವಳಿ ಗೋಪುರಗಳನ್ನು ನಿರ್ಮಾಣ ಮಾಡಲು 70 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಅವಳಿ ಗೋಪುರಗಳಲ್ಲಿ 915 ಫ್ಲ್ಯಾಟ್ ಗಳಿದ್ದವು. 20 ಕಮರ್ಷಿಯಲ್ ಅಂಗಡಿಗಳಿದ್ದವು. ಈ ಅವಳಿ ಗೋಪುರಗಳ ಪಕ್ಕದಲ್ಲೇ ಎಮರಾಲ್ಡ್ ಕೋರ್ಟ್ ಎಂಬ ಅಪಾರ್ಟ್ ಮೆಂಟ್ ಇದೆ. ಈ ಅಪಾರ್ಟ್ ಮೆಂಟ್ ನಲ್ಲಿ ಪ್ರತಿ ಚದರ ಅಡಿಗೆ 7,500 ರೂಪಾಯಿ ಬೆಲೆ ಇದೆ. ಅವಳಿ ಗೋಪುರದ ಒಂದು ಪ್ಲ್ಯಾಟ್ ಅನ್ನು 1.13 ಕೋಟಿ ರೂಪಾಯಿಗೆ ಮಾರಬಹುದಾಗಿತ್ತು. ಹೀಗೆ 915 ಪ್ಲ್ಯಾಟ್ ಹಾಗೂ ಕಮರ್ಷಿಯಲ್ ಅಂಗಡಿಗಳನ್ನು ಮಾರಿದ್ದರೇ, ಸೂಪರ್ ಟೆಕ್ ಕಂಪನಿಗೆ ಬರೋಬ್ಬರಿ 1,198 ಕೋಟಿ ರೂಪಾಯಿ ಹಣ ಸಿಗುತ್ತಿತ್ತು .
ಫ್ಲ್ಯಾಟ್ ಖರೀದಿದಾರರಿಂದ 180 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಲಾಗಿತ್ತು. 633 ಪ್ಲ್ಯಾಟ್ ಗಳನ್ನು ಖರೀದಿದಾರರು ಹಣ ನೀಡಿ ಬುಕ್ ಮಾಡಿದ್ದರು. ಪ್ಲ್ಯಾಟ್ ಖರೀದಿದಾರರಿಗೆ ಶೇ.12ರ ಬಡ್ಡಿದರವನ್ನು ಸೇರಿಸಿ ಅವರ ಹಣವನ್ನು ವಾಪಸ್ ನೀಡಲು ಸುಪ್ರೀಂಕೋರ್ಟ್, ಸೂಪರ್ ಟೆಕ್ ಕಂಪನಿಗೆ ಆದೇಶಿಸಿದೆ.
ಕೆಡವಲು ಸುರಕ್ಷತಾ ಕ್ರಮಗಳು
ಅವಳಿ ಗೋಪುರಗಳು ನೆಲಸಮವಾಗುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳನ್ನು ಆಗಸ್ಟ್ 28 ರಂದು ಬೆಳಿಗ್ಗೆ 7 ಗಂಟೆಯ ಮೊದಲು ಈ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರವಾಗುವಂತೆ ಆದೇಶಿಸಲಾಗಿದೆ. ಸೈಟ್‍ನಿಂದ 450 ಮೀಟರ್‍ವರೆಗಿನ ಪ್ರದೇಶ ಅಂದರೆ ಗ್ರೇಟರ್ ನೋಯ್ಡಾ ಎಕ್ಸ್‍ಪ್ರೆಸ್‍ವೇ ಭಾಗಗಳನ್ನು ಒಳಗೊಂಡಂತೆ ವಾಹನಗಳಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲಾ ಸಂಚಾರವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಸ್ಫೋಟದ 15 ನಿಮಿಷಗಳ ಮೊದಲು ಧೂಳು ನೆಲೆಗೊಳ್ಳುವವರೆಗೆ ಸುಮಾರು ಅರ್ಧ ಘಂಟೆಯವರೆಗೆ ವಿಮಾನ ಹಾರಾಟ ನಿμÉೀಧ ವಲಯವನ್ನು ವಿಧಿಸಲಾಗಿದೆ. “
“ಸ್ಥಳದ ಸಮೀಪ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಯಾವುದೇ ಅಹಿತಕರ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಯೋಜನೆಯನ್ನು ಸಿದ್ಧಪಡಿಸಲಾಗಿದೆ” ಎಂದು ನೋಯ್ಡಾ ಡಿಸಿಪಿ ಟ್ರಾಫಿಕ್ ಗಣೇಶ್ ಶಾ ತಿಳಿಸಿದ್ದಾರೆ.
ಏಕೆ ಕಟ್ಟಡಗಳನ್ನು ಧ್ವಂಸ ಮಾಡಲಾಗುತ್ತಿದೆ?
ಒಂದು ಗೋಪುರದಿಂದ ಮತ್ತೊಂದು ಗೋಪುರಕ್ಕೆ 9 ಮೀಟರ್ ಅಂತರ ಮಾತ್ರ ಇದೆ. ಇದು ನಿಯಮದ ಉಲಂಘನೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ ಉಲಂಘಿಸಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಕಟ್ಟಡಗಳ ನಿರ್ಮಾಣವು ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕಟ್ಟಡಗಳನ್ನು ಕೆಡವಲು ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತು.