ಕಲಿಯುಗ ಕರ್ಣ ಖ್ಯಾತಿಯ ರವಿ ಕಟಪಾಡಿ ಅಷ್ಟಮಿ ಬಣ್ಣ ಹಚ್ಚೋ ಕಾರ್ಯಕ್ಕೆ ವಿದಾಯ ಹೇಳಿಲ್ಲ – ಕಹಳೆ ನ್ಯೂಸ್ ಜೊತೆ ರವಿ ಕಟಪಾಡಿ ಹೇಳಿದ್ದೇನು..? –ಕಹಳೆ ನ್ಯೂಸ್
ಉಡುಪಿ : ಕಳೆದ ೭ ವರ್ಷಗಳಿಂದ ಪ್ರತಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶೇಷ ರೀತಿಯ ವೇಷ ಧರಿಸಿ ಅದರಿಂದ ಸಂಗ್ರಹವಾಗುವ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಬಡ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಮೂಲಕ ದೇಶದೆಲ್ಲೆಡೆ ಅಪಾರ ಜನ ಮನ್ನಣೆ ಗಳಿಸಿರುವ ಉಡುಪಿಯ ರವಿ ಕಟಪಾಡಿಯವರು ಅಷ್ಟಮಿ ವೇಷಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲ ಸುದ್ದಿಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಏಳು ವರ್ಷಗಳಲ್ಲಿ ಸುಮಾರು ೯೦ ಲಕ್ಷ ಹಣ ಸಂಗ್ರಹಿಸಿ ವಿವಿಧ ಭಾಗದ ಒಟ್ಟು ೬೬ ಮಕ್ಕಳ ಚಿಕಿತ್ಸೆಗೆ ನೆರವಾಗಿರುವ ರವಿ ಕಟಪಾಡಿಯವರು ತಾವು ಗುರಿ ಹೊಂದಿದ್ದ ೧ ಕೋಟಿ ದೇಣಿಗೆ ಸಂಗ್ರಹವನ್ನು ಈ ವರ್ಷ ಈಡೇರಿಸಿದ್ದಾರೆ. ಹೀಗಾಗಿ ಮುಂದಿನ ವರ್ಷದಿಂದ ಅವರು ಅಷ್ಟಮಿಗೆ ಯಾವುದೇ ವೇಷ ಧರಿಸುವುದಿಲ್ಲ ಎಂದು ಎಂಬ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಬಂದ ಬಳಿಕ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಆದರೆ ಈ ಈ ಬಗ್ಗೆ ರವಿ ಕಟಪಾಡಿಯವರು ಏನು ಹೇಳಿದ್ದಾರೆ ತಿಳಿಯೋಣ ಬನ್ನಿ.
ಈ ಬಗ್ಗೆ ಕಹಳೆ ನ್ಯೂಸ್ ತಂಡ ಸ್ವತಃ ರವಿ ಕಟಪಾಡಿಯವರನ್ನು ಸಂಪರ್ಕಿಸಿದ್ದು ಈ ಬಗ್ಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ನನ್ನ ಮಿತ್ರರ ಹಾಗೂ ಸಹೃದಯಿ ದಾನಿಗಳ ಸಹಾಯದಿಂದ ಕಳೆದ ಏಳು ವರ್ಷಗಳಲ್ಲಿ ಅದೆಷ್ಟೋ ಬಡ ಮಕ್ಕಳಿಗೆ ಸಹಾಯ ಮಾಡುವ ಯೋಗವನ್ನು ದೇವರು ನನಗೆ ಕೊಟ್ಟಿದ್ದಾನೆ. ನಮಗೆ ೧ ಕೋಟಿ ದೇಣಿಗೆ ಸಂಗ್ರಹ ಮಾಡುವ ಗುರಿ ಇತ್ತು. ಅದು ಈ ಬಾರಿ ಈಡೇರಿದ್ದು, ನಮ್ಮಿಂದ ಪ್ರೇರಿತರಾಗಿ ಅನೇಕ ಯುವಕರು ವೇಷಹಾಕಲು ಶುರುಮಾಡಿದ್ದಾರೆ.
ಯುವಕರ ಇಂತಹ ಬದಲಾವಣೆ ನಮಗೆ ಖುಷಿಕೊಟ್ಟಿದೆ. ಹೀಗಾಗಿ ೧ ಕೋಟಿ ದೇಣಿಗೆ ದಾನ ಸಂಗ್ರಹದ ಗುರಿ ತಲುಪಿದ ಬಳಿಕ ನಾನು ವೇಷ ಧರಿಸುವುದನ್ನು ನಿಲ್ಲಿಸೋಣ ಎಂದು ಗೆಳೆಯರ ಬಳಿ ಹೇಳಿದ್ದೆ. ಆದರೆ ನಿತ್ಯ ನನಗೆ ಬಡ ಮಕ್ಕಳ ಚಿಕಿತ್ಸೆಗೆ ನೆರವು ಬೇಡಿ ಅನೇಕ ಅರ್ಜಿಗಳು ಬರುತ್ತಿದ್ದು ಅವರಿಗೆ ಸಹಾಯ ಮಾಡಲು ನನ್ನ ಮನಸು ಹಂಬಲಿಸುತ್ತಿದೆ. ಹೀಗಾಗಿ ನಾನು ವೇಷಧರಿಸುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಈ ವರ್ಷ ವೇಷ ಧರಿಸಿದ್ದ ವೇಳೆ ನನ್ನ ಅರೋಗ್ಯ ಸರಿಯಿರಲಿಲ್ಲ, ಆದರೂ ಸತತ ೩೨ ಮಾತ್ರೆ ಸೇವಿಸಿ ವೇಷ ಧರಿಸಿದ್ದೆ. ವೇಷ ಧರಿಸಿದ್ದ ಸಂದರ್ಭ ತುಂಬಾ ಕಷ್ಟವಾಗುತ್ತದೆ. ಆದರೆ ಬಡ ಮಕ್ಕಳಿಗೆ ಧನ ಸಹಾಯ ಮಾಡುವ ಸಂದರ್ಭದಲ್ಲಿ ಇಷ್ಟು ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಎಂದೆನಿಸುತ್ತದೆ ಎಂದು ಅವರು ತಿಳಿಸಿದರು.
ಈ ವರ್ಷ ಸಂಗ್ರಹವಾದ ಹಣವನ್ನು ೮ ಮಕ್ಕಳಿಗೆ ಆಗಸ್ಟ್ ೩೦ ರಂದು ಜಿಲ್ಲಾಧಿಕಾರಿಗಳ ಮೂಲಕ ವಿತರಿಸಲಾಗುವುದು, ಸಹೃದಯಿ ದಾನಿಗಳ ಸಹಕಾರ ಹಾಗೂ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದವರ ಸಹಕಾರ ನಮ್ಮ ತಂಡದ ಮೇಲೆ ಹೀಗೆಯೇ ಇರಬೇಕು ಎಂದು ವಿನಯದಿಂದ ನುಡಿದಿದ್ದಾರೆ.