Recent Posts

Friday, November 22, 2024
ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರೀಯಸುದ್ದಿ

ಭಾರತಕ್ಕೆ ಭರ್ಜರಿ ಜಯ ; ಮಣ್ಣು ಮುಕ್ಕಿದ ಪಾಕಿಸ್ತಾನ – ಕಹಳೆ ನ್ಯೂಸ್

ದುಬಾೖ: ರವಿವಾರದ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಹೈ ವೋಲ್ಟೇಜ್ ಪಂದ್ಯದಲ್ಲಿ ರವೀಂದ್ರ ಜಡೇಜ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತಿಮ ಓವರಿನಲ್ಲಿ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಬಾರಿಸುವ ಮೂಲಕ ತಂಡದ ಗೆಲುವು ಸಾರಿದರು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ಥಾನ 19.5 ಓವರ್‌ಗಳಲ್ಲಿ 147ಕ್ಕೆ ಸರ್ವಪತನ ಕಂಡರೆ, ಭಾರತವು ಕೊಹ್ಲಿ, ಜಡೇಜ ಮತ್ತು ಪಾಂಡ್ಯ ಅವರ ಸಮಯೋಚಿತ ಆಟದಿಂದಾಗಿ 19.4 ಓವರ್‌ಗಳಲ್ಲಿ 148 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಭಾರತದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ದ್ವಿತೀಯ ಎಸೆತದಲ್ಲೇ ರಾಹುಲ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ನಸೀಮ್‌ ಶಾ ಎಸೆತದಲ್ಲಿ ಅವರು ಬೌಲ್ಡ್‌ ಆದರು. ಶಾ ಅವರ ಪದಾರ್ಪಣ ಪಂದ್ಯ ಇದಾಗಿತ್ತು. ರೋಹಿತ್‌ ಶರ್ಮ-ವಿರಾಟ್‌ ಕೊಹ್ಲಿ ದ್ವಿತೀಯ ವಿಕೆಟಿಗೆ 49 ರನ್‌ ಒಟ್ಟುಗೂಡಿಸಿ ಪರಿಸ್ಥಿತಿಯನ್ನು ಸುಧಾರಿಸಿದರು. ಆದರೆ ಇಬ್ಬರೂ 3 ರನ್‌ ಅಂತರದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಪೆವಿಲಿಯನ್‌ ಸೇರಿಕೊಂಡರು. ಕೊಹ್ಲಿ 34 ಎಸೆತಗಳಿಂದ 35 ರನ್‌ ಹೊಡೆದರೆ (3 ಬೌಂಡರಿ, 1 ಸಿಕ್ಸರ್‌), ರೋಹಿತ್‌ ಗಳಿಕೆ ಕೇವಲ 12 ರನ್‌.

4ನೇ ವಿಕೆಟಿಗೆ ಜತೆಗೂಡಿದ ರವೀಂದ್ರ ಜಡೇಜ-ಸೂರ್ಯಕುಮಾರ್‌ ಯಾದವ್‌ 36 ರನ್‌ ಒಟ್ಟುಗೂಡಿಸಿದರು. ಜಡೇಜ ಮತ್ತು ಪಾಂಡ್ಯ ಐದನೇ ವಿಕೆಟಿಗೆ 52 ರನ್‌ ಪೇರಿಸಿ ತಂಡದ ಗೆಲುವು ಖಚಿತಪಡಿಸಿದರು.

ಮೊದಲ ಓವರ್‌ನಲ್ಲೇ ಪಾಕಿಸ್ಥಾನ ಎರಡು ರೀವ್ಯೂಗಳಿಂದ ಪಾರಾಯಿತು. ಒಂದು ಲೆಗ್‌ ಬಿಫೋರ್‌, ಮತ್ತೊಂದು ಕಾಟ್‌ ಬಿಹೈಂಡ್‌. ಎರಡೂ ಸಲ ಬಚಾವಾದವರು ಮೊಹಮ್ಮದ್‌ ರಿಜ್ವಾನ್‌.

ಆದರೆ ಭುವನೇಶ್ವರ್‌ ತಮ್ಮ ದ್ವಿತೀಯ ಓವರ್‌ನಲ್ಲೇ ಪಾಕ್‌ ಕಪ್ತಾನನನ್ನು ಪೆವಿಲಿಯನ್‌ಗೆ ಅಟ್ಟಲು ಯಶಸ್ವಿಯಾದರು. ಬಾಬರ್‌ ಆಜಂ (10) ಬ್ಯಾಟ್‌ಗೆ ಟಾಪ್‌ ಎಜ್‌ ಆದ ಚೆಂಡು ಸುಲಭದಲ್ಲಿ ಆರ್ಷದೀಪ್‌ ಕೈಸೇರಿತು. ಪಾಕ್‌ ಆಗ 15 ರನ್‌ ಗಳಿಸಿತ್ತು.

4ನೇ ಬೌಲರ್‌ ರೂಪದಲ್ಲಿ ದಾಳಿಗಿಳಿದ ಆವೇಶ್‌ ಖಾನ್‌ ಆರಂಭದಲ್ಲಿ ದಂಡಿಸಿಕೊಂಡರೂ 5ನೇ ಎಸೆತದಲ್ಲಿ ದೊಡ್ಡ ಬೇಟೆಯಾಡುವಲ್ಲಿ ಯಶಸ್ವಿಯಾದರು. ಅಪಾಯಕಾರಿ ಫ‌ಕರ್‌ ಜಮಾನ್‌ ಅವರನ್ನು ಕೀಪರ್‌ ಕಾರ್ತಿಕ್‌ ಕೈಗೆ ಕ್ಯಾಚ್‌ ಕೊಡಿಸಿದರು. ಫ‌ಕರ್‌ ಗಳಿಕೆ ಕೂಡ 10 ರನ್‌. ಆಗ ಪಾಕಿಸ್ಥಾನ 42 ರನ್‌ ಮಾಡಿತ್ತು. ಪವರ್‌ ಪ್ಲೇಯಲ್ಲಿ ಪಾಕ್‌ ಸ್ಕೋರ್‌ 2 ವಿಕೆಟಿಗೆ 43 ರನ್‌.

ಇನ್ನೊಂದೆಡೆ ಓಪನರ್‌ ರಿಜ್ವಾನ್‌ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. ಇಫ್ತಿಕಾರ್‌ ಅಹ್ಮದ್‌ ಇವರಿಗೆ ಜತೆಯಾದರು. ಪಾಕ್‌ ಮೊತ್ತ ನಿಧಾನ ಗತಿಯಲ್ಲಿ ಏರತೊಡಗಿತು. ಅರ್ಧ ಹಾದಿ ಕ್ರಮಿಸುವಾಗ ಸ್ಕೋರ್‌ 2 ವಿಕೆಟಿಗೆ 68 ರನ್‌ ಆಗಿತ್ತು.

10 ಓವರ್‌ ಬಳಿಕ ರಿಜ್ವಾನ್‌-ಇಫ್ತಿಕಾರ್‌ ಮೈ ಚಳಿ ಬಿಟ್ಟು ಬೀಸತೊಡಗಿದರು. ರನ್‌ರೇಟ್‌ ನಿಧಾನವಾಗಿ ಏರತೊಡಗಿದ ಹೊತ್ತಿನಲ್ಲೇ ಹಾರ್ದಿಕ್‌ ಪಾಂಡ್ಯ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 22 ಎಸೆತಗಳಿಂದ 28 ರನ್‌ ಮಾಡಿದ ಇಫ್ತಿಕಾರ್‌ ಕೀಪರ್‌ ಕಾರ್ತಿಕ್‌ ಕೈಗೆ ಕ್ಯಾಚಿತ್ತರು. ರಿಜ್ವಾನ್‌-ಇಫ್ತಿಕಾರ್‌ 38 ಎಸೆತಗಳಿಂದ 45 ರನ್‌ ಒಟ್ಟುಗೂಡಿಸಿದರು.

ವಿರಾಟ್‌ಕೊಹ್ಲಿ: ಟಿ20 ಪಂದ್ಯಗಳ “ಶತಕ’
ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದೆ ಅದೆಷ್ಟೋ ಸಮಯ ಆಗಿರಬಹುದು. ಆದರೆ ಪಾಕಿಸ್ಥಾನ ವಿರುದ್ಧದ ಪಂದ್ಯವನ್ನು ಆಡಲಿಳಿಯುವ ಮೂಲಕ ಅವರು ವಿಶಿಷ್ಟ “ಶತಕ’ವೊಂದನ್ನು ದಾಖಲಿಸಿದರು.

ಇದು ಕೊಹ್ಲಿ ಅವರ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಕೊಹ್ಲಿ ಈ ಮೈಲುಗಲ್ಲು ನೆಟ್ಟ ಭಾರತದ ಮೊದಲ ಕ್ರಿಕೆಟಿಗ.

ಇದರೊಂದಿಗೆ ವಿರಾಟ್‌ ಕೊಹ್ಲಿ ಮೂರೂ ಮಾದರಿಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದಂತಾಯಿತು. 102 ಟೆಸ್ಟ್‌ ಹಾಗೂ 261 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಾಧನೆಗೈದ ಮತ್ತೋರ್ವ ಆಟಗಾರನೆಂದರೆ ನ್ಯೂಜಿಲ್ಯಾಂಡಿನ ರಾಸ್‌ ಟೇಲರ್‌. ಅವರು 112 ಟೆಸ್ಟ್‌, 236 ಏಕದಿನ ಹಾಗೂ 102 ಟಿ20 ಪಂದ್ಯಗಳನ್ನಾಡಿದ್ದಾರೆ.

ಪಂತ್‌ ಬದಲು ಕಾರ್ತಿಕ್‌
ಈ ಪಂದ್ಯದಿಂದ ಕೀಪರ್‌ ಹಾಗೂ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ ರಿಷಭ್‌ ಪಂತ್‌ ಅವರನ್ನು ಹೊರಗಿರಿಸಿದ್ದು ಅಚ್ಚರಿಯಾಗಿ ಕಂಡಿತು. ಇವರ ಬದಲು ಅನುಭವಿ ದಿನೇಶ್‌ ಕಾರ್ತಿಕ್‌ ಅವಕಾಶ ಪಡೆದರು.

ಕಪ್ಪು ಪಟ್ಟಿ ಧರಿಸಿದ ಪಾಕ್‌ ಕ್ರಿಕೆಟಿಗರು
ಭಾರತ ವಿರುದ್ಧದ ಏಷ್ಯಾ ಕಪ್‌ ಪಂದ್ಯದಲ್ಲಿ ಪಾಕಿಸ್ತಾನಿ ಕ್ರಿಕೆಟಿಗರು ಕಪ್ಪುಪಟ್ಟಿ ಧರಿಸಿ ಆಡಲಿಳಿದದ್ದು ಕಂಡಬಂತು. ನೆರೆ ಪ್ರಕೋಪದಿಂದ ತತ್ತರಿಸಿ ಅಪಾರ ಸಂಖ್ಯೆಯಲ್ಲಿ ನಿರಾಶ್ರಿತರಾದ ಹಾಗೂ ಸಾವಿಗೀಡಾದ ಜನತೆಗೆ ಸಂತಾಪ ಸೂಚಿಸುವ ಸಲುವಾಗಿ ಪಾಕ್‌ ಕ್ರಿಕೆಟಿಗರು ಈ ಪಟ್ಟಿ ಕಟ್ಟಿದ್ದರು. ಪಾಕಿಸ್ತಾನದಲ್ಲೀಗ ಕಂಡುಕೇಳರಿದಂಥ ಮಳೆ ಸುರಿಯುತ್ತಿದ್ದು, ದೇಶದ 110 ಜಿಲ್ಲೆಗಳ 3.3 ಕೋಟಿ ಜನತೆಗೆ ಸಂಕಷ್ಟ ಎದುರಾಗಿದೆ. 7 ಲಕ್ಷದಷ್ಟು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾವಿನ ಪ್ರಮಾಣ ಸಾವಿರದ ಗಡಿ ದಾಟಿದೆ.

ಸ್ಕೋರ್‌ ಪಟ್ಟಿ
ಪಾಕಿಸ್ಥಾನ
ಮೊಹಮ್ಮದ್‌ ರಿಜ್ವಾನ್‌ ಸಿ ಆವೇಶ್‌ ಬಿ ಪಾಂಡ್ಯ 43
ಬಾಬರ್‌ ಆಜಂ ಸಿ ಆರ್ಷದೀಪ್‌ ಬಿ ಭುವನೇಶ್ವರ್‌ 10
ಫ‌ಕರ್‌ ಜಮಾನ್‌ ಸಿ ಕಾರ್ತಿಕ್‌ ಬಿ ಆವೇಶ್‌ 10
ಇಫ್ತಿಕಾರ್‌ ಅಹ್ಮದ್‌ ಸಿ ಕಾರ್ತಿಕ್‌ ಬಿ ಪಾಂಡ್ಯ 28

ಖುಷ್ದಿಲ್ ಶಾ ಸಿ ಜಡೇಜ ಬಿ ಪಾಂಡ್ಯ 2 ಶದಾಬ್‌ ಖಾನ್‌ ಎಲ್‌ಬಿಡಬ್ಲ್ಯು ಭುವನೇಶ್ವರ್‌ 10 ಆಸಿಫ್ ಅಲಿ ಸಿ ಯಾದವ್‌ ಬಿ ಭುವನೇಶ್ವರ್‌ 9 ಮೊಹಮ್ಮದ್‌ ನವಾಜ್‌ ಸಿ ಕಾರ್ತಿಕ್‌ ಬಿ ಆರ್ಷದೀಪ್‌ 1 ಹ್ಯಾರಿಸ್‌ ರವೂಫ್ ಔಟಾಗದೆ 13 ನಸೀಮ್‌ ಶಾ ಎಲ್‌ಬಿಡಬ್ಲ್ಯು ಭುವನೇಶ್ವರ್‌ 0 ಶಹನವಾಜ್‌ ದಹಾನಿ ಬಿ ಆರ್ಷದೀಪ್‌ 16 ಇತರ 5 ಒಟ್ಟು (19.5 ಓವರ್‌ಗಳಲ್ಲಿ ಆಲೌಟ್‌) 147 ವಿಕೆಟ್‌ ಪತನ: 1-15, 2-42, 3-87, 4-96, 5-97, 6-112, 7-114, 8-128, 9-128. ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-26-4 ಆರ್ಷದೀಪ್‌ ಸಿಂಗ್‌ 3.5-0-33-2 ಹಾರ್ದಿಕ್‌ ಪಾಂಡ್ಯ 4-0-25-3 ಆವೇಶ್‌ ಖಾನ್‌ 2-0-19-1 ಯಜುವೇಂದ್ರ ಚಹಲ್‌ 4-0-32-0 ರವೀಂದ್ರ ಜಡೇಜ 2-0-11-0 ಭಾರತ ರೋಹಿತ್‌ ಶರ್ಮ ಸಿ ಇಫ್ತಿಕಾರ್‌ ಬಿ ನವಾಜ್‌ 12 ಕೆ.ಎಲ್‌. ರಾಹುಲ್‌ ಬಿ ನಸೀಮ್‌ 0 ವಿರಾಟ್‌ ಕೊಹ್ಲಿ ಸಿ ಇಫ್ತಿಕಾರ್‌ ಬಿ ನವಾಜ್‌ 35 ರವೀಂದ್ರ ಜಡೇಜ ಬಿ ನವಾಜ್‌ 35 ಸೂರ್ಯಕುಮಾರ್‌ ಬಿ ನಸೀಮ್‌ 18 ಹಾರ್ದಿಕ್‌ ಪಾಂಡ್ಯ ಔಟಾಗದೆ 33 ದಿನೇಶ್‌ ಕಾರ್ತಿಕ್‌ ಔಟಾಗದೆ 1 ಇತರ 14 ಒಟ್ಟು (19.4 ಓವರ್‌ಗಳಲ್ಲಿ 5 ವಿಕೆಟಿಗೆ) 148 ವಿಕೆಟ್‌ ಪತನ: 1-1, 2-50, 3-53, 4-89, 5-141 ಬೌಲಿಂಗ್‌: ನಸೀಮ್‌ ಶಾ 4-0-27-2 ಶಹನವಾಜ್‌ ದಹಾನಿ 4-0-29-0 ಹ್ಯಾರಿಸ್‌ ರವೂಫ್ 4-0-35-0 ಶಾದಾಬ್‌ ಖಾನ್‌ 4-0-19-0 ಮೊಹಮ್ಮದ್‌ ನವಾಜ್‌ 3.4-0-33-3