ನವದೆಹಲಿ: ಶಾಲಾ ಮತ್ತು ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.
ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಯು.ಯು. ಲಲಿತ್ ಅವರ ಮೊದಲ ಕೆಲಸದ ದಿನವಾದ ಇಂದು ಈ ಮಹತ್ವದ ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿರುವ ನ್ಯಾಯ ಪೀಠ ವಿಚಾರಣೆ ನಡೆಸಲಿದೆ.
ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ಅಂದಿನ ಸಿಜೆಐ ಎನ್.ವಿ. ರಮಣ ಹಲವು ಬಾರಿ ಸೂಚಿಸಿದ್ದರು. ಆದರೆ ಈ ಪ್ರಕರಣ ವಿಚಾರಣೆಗೆ ಲಿಸ್ಟ್ ಆಗಿರಲಿಲ್ಲ. ಸರ್ಕಾರಿ ಅಧಿಕಾರಿಗಳ ಮಲತಾಯಿ ಧೋರಣೆಯಿಂದಾಗಿ ವಿದ್ಯಾರ್ಥಿಗಳ ನಂಬಿಕೆಯ ಆಚರಣೆಗೆ ಅಡ್ಡಿಯಾಗಿದೆ. ಇದರಿಂದ ಅನಗತ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂದು ಒಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.