ನೈಜಘಟನೆ ಆಧಾರಿತ ಚಿತ್ರ ತನುಜಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಅವರು ಸಹ ನಟಿಸಿದ್ದಾರೆ. 2020ರಲ್ಲಿ ಕೊರೊನಾ ಕಠಿಣ ಸಮಯದಲ್ಲಿ ಇಡೀ ದೇಶವೇ ತತ್ತರಿಸಿ ಹೋಗಿತ್ತು.
ಈ ವೇಳೆ ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿದ್ದು ಒಂದು ಸಾಹಸ, ಈ ಕಥೆಯನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗ್ತಿದೆ.
ತನುಜಾ ಚಿತ್ರದ ಮೋಷನ್ ಪೋಸ್ಟರ್
ಕೊರೋನಾ ಸಮಯದಲ್ಲಿ ತನುಜಾ ಅವರಿಗೆ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದು, ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್, ವಿಶ್ವೇಶ್ವರ್ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರು. ಇದೀಗ ಇದೇ ಘಟನೆಯನ್ನೇ ಮುಖ್ಯವಾಗಿಟ್ಟುಕೊಂಡು ಹರೀಶ್ ಎಂ.ಡಿ ಹಳ್ಳಿ ಅವರು ತನುಜಾ ಎಂಬ ಶೀರ್ಷಿಕೆಯಡಿಯಲ್ಲೇ ಸಿನಿಮಾ ಮಾಡಿದ್ದಾರೆ. ಈಚೆಗೆ ತನುಜಾ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಪತ್ರಕರ್ತ ವಿಶ್ವೇಶ್ವರ ಭಟ್ ಬಿಡುಗಡೆ ಮಾಡಿದರು.
ಈ ಚಿತ್ರದ ಪೋಸ್ಟರ್ ರಿಲೀಸ್ ಬಳಿಕ ಮಾತಾಡಿದ ನಿರ್ದೇಶಕ ಹರೀಶ್,ನೀಟ್ ಪರೀಕ್ಷೆ ಬರೆಯಲು ಸುಮಾರು 350ಕಿ.ಮೀ. ದೂರ ಪ್ರಯಾಣ ಮಾಡಿ, ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಕಥೆಯೇ ರೋಚಕವಾಗಿದೆ. ಈ ಕಥೆಯನ್ನೇ ತೆರೆ ಮೇಲೆ ತರೋ ಪ್ರಯತ್ನ ನಮ್ಮದು ಎಂದಿದ್ದಾರೆ. ಒಂದು ದಿನದಲ್ಲಿ ನಡೆಯುವ ಕಥೆ ಇದು. ತನುಜ ಚಿತ್ರಕ್ಕೆ ನನ್ನ ಹಲವು ಸ್ನೇಹಿತರು ಬಂಡವಾಳ ಹಾಕಿದ್ದಾರೆ ಎಂದು ನಿರ್ದೇಶಕ ಹರೀಶ್ ಹೇಳಿದ್ದಾರೆ.
ವಿಶೇಷ ಪಾತ್ರದಲ್ಲಿ ಗಣ್ಯರು
ಈ ವಿಚಾರ ಎಲ್ಲರ ಕುತೂಹಲ ಕೆರಳಿಸಿತ್ತು. ಈ ಒನ್‌ಲೈನ್ ಸ್ಟೋರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ಮುಂತಾದ ಗಣ್ಯರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ.
ಅಂಕಣದ ಬಳಿಕ ರೆಡಿಯಾಯ್ತು ಕಥೆ
ಪೋಸ್ಟರ್ ರಿಲೀಸ್ ಮಾಡಿದ ಬಳಿಕ ಮಾತಾಡಿ ಪತ್ರಕರ್ತರಾದ ವಿಶ್ವೇಶ್ವರ ಭಟ್, ನನ್ನ ಅಂಕಣ ಕೆಲವರು ಸಿನಿಮಾ ಮಾಡುವುದಾಗಿ ಹೇಳಿದರು. ಅದರಲ್ಲಿ ಹರೀಶ್ ಕೂಡ ಒಬ್ಬರು. ಅವರ ಸಿನಿಮಾ ಮೇಲಿನ ಆಸಕ್ತಿ ಹಾಗೂ ಶ್ರದ್ದೆ ನಿಜಕ್ಕೂ ನನಗೆ ಆಶ್ಚರ್ಯ ಉಂಟು ಮಾಡಿತು ಚಿತ್ರ ಮಾಡುವಲ್ಲಿ ಹರೀಶ್ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಬಹಳ ಕನಸುಗಳನ್ನು ಭರವಸೆ ಇಟ್ಟುಕೊಂಡಿರುವ ನಿರ್ದೇಶಕ ಅವರು. ‘ತನುಜಾ’ ಚಿತ್ರವನ್ನು ಅವರು ಚೆನ್ನಾಗಿ ನಿರ್ದೇಶಿಸಿದ್ದಾರೆ ಎಂದ್ರು.
ನಾನು ಕೂಡ ಅಭಿನಯಿಸಿದ್ದೇನೆ. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಗೂ ಸಚಿವ ಸುಧಾಕರ್ ಅವರು ಸಹ ತನುಜಾ ಪರೀಕ್ಷೆ ಬರೆಯಲು ಮಾಡಿದ್ದ ಉಪಕಾರ ಸ್ಮರಣೀಯ. ಈ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದು, ಚಿತ್ರದ ಕೊನೆಯಲ್ಲಿ ಅವರು ಕೆಲವು ಸೆಕೆಂಡ್ ಗಳ ಕಾಲ ಅವರು ಮಾತನಾಡುವ ಸಾಧ್ಯತೆ ಇದೆ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ತಿಳಿಸಿದರು.