ಯಶಸ್ವಿ ಕಾರ್ಯಕ್ರಮ ಆಯೋಜನೆ, ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಶಹಬ್ಬಾಸ್ ” ಮೇರಾ ದಿಲ್ ಖುಷ್ ಹೋಗಯಾ ” ಎಂದ ಪ್ರಧಾನಿ ಮೋದಿ ; ಬಿಜೆಪಿಯ 17 ನಾಯಕರ ಜೊತೆ ಸುಮಾರು 45 ನಿಮಿಷಗಳ ಕಾಲ ಮೋದಿ ಗಂಭೀರ ಚರ್ಚೆ – ಕಹಳೆ ನ್ಯೂಸ್
ಮಂಗಳೂರು: “ಕರ್ನಾಟಕದಲ್ಲಿ ಇದು ಚುನಾವಣಾ ವರ್ಷವಾಗಿರುವುದರಿಂದ ಶಾಸಕರು ಮತ್ತು ಮಂತ್ರಿಗಳು ರಾಜ್ಯ, ಕೇಂದ್ರ ಸರ್ಕಾರದ ಯೋಜನೆ ಮನೆಮನೆಗೂ ತಲುಪಿಸಬೇಕು. ಪಕ್ಷ ಸಂಘಟನೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು ಗ್ರಾಮದಿಂದ ಮಹಾನಗರ ತನಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ” ಇದು ಕರ್ನಾಟಕ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳು
ಪ್ರಧಾನಿ ಮೋದಿ ಗೋಲ್ಡ್ ಫಿಂಚ್ ಹೋಟೆಲ್ ಮೈದಾನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಬಳಿಕ ಬಿಜೆಪಿ ನಾಯಕರ ಜೊತೆ ಎನ್ಎಂಪಿಎಯಲ್ಲಿ ಕೋರ್ ಕಮಿಟಿ ಸಭೆ ನಡೆಸಿದರು. ಬಿಜೆಪಿಯ 17 ಸದಸ್ಯರ ಜೊತೆ ಸುಮಾರು 45 ನಿಮಿಷಗಳ ಕಾಲ ಮೋದಿ ಚರ್ಚೆ ನಡೆಸಿದರು. ರಾಷ್ಟ್ರೀಯ ವಿಚಾರಗಳು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ನರೇಂದ್ರ ಮೋದಿ ಗಂಭೀರ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಪಕ್ಷಗಳ ಶೇ.40 ಭ್ರಷ್ಟಾಚಾರ ಆರೋಪಕ್ಕೆ ನಾವು ತಕ್ಕ ಉತ್ತರ ನೀಡಬೇಕು. ಮಿಷನ್ ಬೆಂಗಳೂರು ವಿಚಾರವಾಗಿ ವಿಶೇಷ ಗಮನ ಕೊಡಬೇಕು. ಮೂಲಭೂತ ಸೌಕರ್ಯದ ಕಡೆ ನಿರ್ಲಕ್ಷ್ಯ ಬೇಡ ಎಂದು ಹೇಳಿದರು.
ಬಿಜೆಪಿಯ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯದಲ್ಲಿ 150 ಸ್ಥಾನ ಬರುತ್ತದೆ ಎಂಬ ವಿಶ್ವಾಸ ನಮಗಿದೆ. ಪ್ರತಿ ತಿಂಗಳು ನಾನು ರಾಜ್ಯಕ್ಕೆ ಬರುತ್ತೇನೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡಿ ಎಂದು ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ನಮಗೆ ಶ್ರೀರಕ್ಷೆ. ಕರ್ನಾಟಕ ಮತ್ತು ದೇಶದಲ್ಲಿ ಬಿಜೆಪಿಯ ಪರ ವಾತಾವರಣ ಇದ್ದು ವಿಪಕ್ಷಗಳ ಅಪಪ್ರಚಾರಕ್ಕೆ ಯಾರು ಮಣೆ ಹಾಕಬೇಡಿ. ನಾವು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ. ವಿಪಕ್ಷಗಳ ದಾಖಲೆಯಿಲ್ಲದ ಟೀಕೆಗಳಿಗೆ ದೃತಿಗೇಡಬೇಡಿ. ಹಿಂದೆಂದೂ ಆಗದ ಅಭಿವೃದ್ಧಿ ಬಿಜೆಪಿ ಕಾಲದಲ್ಲಿ ಆಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ವಿಶ್ವಾಸ್ ಇದು ಕೇವಲ ಬಾಯಿ ಮಾತಲ್ಲ ನಾವು ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಸಭಾಂಗಣ ಮೈದಾನದಲ್ಲಿ ನೆರೆದಿದ್ದ ಜನರನ್ನು ಕಂಡು ಮೋದಿ ಮೇರಾ ದಿಲ್ ಖುಷ್ ಹೋಗಯಾ ಎಂದಿದ್ದಾರೆ. ಯಶಸ್ವಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ ಬಗ್ಗೆ ಪ್ರಧಾನಿ ಮೋದಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಶಹಬ್ಬಾಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.