ಮದ್ವೆ ನಂತರ ಹೆಚ್ಚಾಯಿತು ಪತ್ನಿ ನಜ್ಮಾ ತೂಕ – ದೈಹಿಕವಾಗಿ ಹಿಂಸಿಸಿ, ತಲಾಖ್ ನೀಡಿದ ಪತಿ ಸಲ್ಮಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ನಿ ನಜ್ಮಾ – ಕಹಳೆ ನ್ಯೂಸ್
ಮೀರತ್: ಮದುವೆಯ ನಂತರ ಪತ್ನಿಯ ತೂಕ ಹೆಚ್ಚಾಯಿತು ಎನ್ನುವ ಕಾರಣಕ್ಕೆ ಪತಿ ಮಹಾಶಯನೊಬ್ಬ ತಲಾಖ್ ನೀಡಿ, ಪತ್ನಿಯನ್ನು ಮನೆಯಿಂದ ಹೊರಹಾಕಿರುವ ಘಟನೆ ಮೀರತ್‌ನ ಝಾಕಿರ್ ಕಾಲೋನಿಯಲ್ಲಿ ನಡೆದಿದೆ.
ತಾನು ಮದುವೆಯ ನಂತರ ದಪ್ಪ ಆಗಿರುವ ಕಾರಣಕ್ಕೆ ಪತಿ ನಿಂದಿಸುತ್ತಿದ್ದ, ದೈಹಿಕವಾಗಿ ಹಿಂಸಿಸುತ್ತಿದ್ದ ಎಂದು ಪತಿಯ ಸಲ್ಮಾನ್ ವಿರುದ್ಧ ನಜ್ಮಾ ಆರೋಪಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು, ಮದುವೆಯ ನಂತರ ನಜ್ಮಾ ದಪ್ಪಗಾಗಿದ್ದಾರೆ. ತಾನು ದಪ್ಪ ಆಗಿರುವ ಕಾರಣಕ್ಕೆ ಒಂದು ತಿಂಗಳ ಹಿಂದೆ ತನ್ನ ಗಂಡ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ, ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಅವರು ದೂರಿದ್ದಾರೆ.
ತಮಗೆ 7 ವರ್ಷದ ಮಗ ಇದ್ದಾನೆ. ಈ ಹಂತದಲ್ಲಿ ನನ್ನನ್ನು ಹೊರಕ್ಕೆ ಹಾಕಿದರೆ ನಾನು ಏನು ಮಾಡಲಿ ಎಂದು ನಜ್ಮಾ ದೂರಿನಲ್ಲಿ ತಿಳಿಸಿದ್ದಾರೆ. ನನಗೆ ತಲಾಖ್ ಕೊಡಲು ಇಷ್ಟವಿಲ್ಲ ಎಂದು ಪತಿಗೆ ಹೇಳಿದೆ. ಮನೆಯಿಂದ ಹೊರಕ್ಕೆ ಹಾಕಿದ ಮೇಲೆ ಸದ್ಯ ತಾಯಿಯ ಮನೆಯಲ್ಲಿ ಇದ್ದೇನೆ. ಆಗಸ್ಟ್ 28 ರಂದು ನನ್ನ ಪತಿ ಇತರ ಐದು ಮಂದಿಯೊಂದಿಗೆ ಅಲ್ಲಿಗೂ ಬಂದು ಥಳಿಸಿದ್ದಾನೆ. ಬಳಿಕ ತ್ರಿವಳಿ ತಲಾಖ್ ಹೇಳಿ ಅಲ್ಲಿಂದ ತೆರಳಿದ್ದ ಎಂದೂ ನಜ್ಮಾ ಹೇಳಿದ್ದಾರೆ.
ಸದ್ಯ ಸಲ್ಮಾನ್ ವಿರುದ್ಧ ಪೊಲೀಸರು ವಿವಿಧ ಕಾಯ್ದೆಗಳಡಿ ಕೇಸು ದಾಖಲು ಮಾಡಿಕೊಂಡಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕೊತ್ವಾಲಿ ಮೀರತ್ ವೃತ್ತದ ಅಧಿಕಾರಿ ಅರವಿಂದ್ ಕುಮಾರ್ ಚೌರಾಸಿಯಾ ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಪದ್ಧತಿಯನ್ನು ಭಾರತೀಯ ಸಂಸತ್ತು ಜುಲೈ 2019 ರಲ್ಲಿ ನಿಷೇಧಿಸಿದೆ. ಅಪರಾಧಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. (ಏಜೆನ್ಸೀಸ್)