ಯಾರಿಗೆ ಒಲಿಯಲಿದೆ…!! ಬ್ರಿಟನ್ ಪ್ರಧಾನಿ ಪಟ್ಟ…?? : ರಿಷಿ-ಟ್ರಾಸ್ ಪೈಪೋಟಿಗೆ ಸಿಗಲಿದೆ… ಇಂದು ಉತ್ತರ – ಕಹಳೆ ನ್ಯೂಸ್
ಲಂಡನ್: ರಿಷಿ ಸುನಕ್ ಅಥವಾ ಲಿಜ್ ಟ್ರಾಸ್? ಬ್ರಿಟನ್‍ನ ನೂತನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಈ ಹುದ್ದೆಗೆ ಕೆಲವು ತಿಂಗಳುಗಳಿಂದ ಮಾಜಿ ಸಚಿವರಾದ ರಿಷಿ ಸುನಕ್ ಮತ್ತು ಲಿಜ್ ಟ್ರಾಸ್ ನಡುವೆ ತುರುಸಿನ ಪೈಪೋಟಿ ನಡೆದಿದೆ.
ದೇಶಾದ್ಯಂತ ಪ್ರಯಾಣ, ಟಿವಿ ಚರ್ಚೆಗಳು, ಸಮೀಕ್ಷೆಗಳ ಬಳಿಕ ಕೊನೆಗೆ ಬ್ರಿಟಿಶ್ ನಾಗರಿಕರು ಇವರಿಬ್ಬರಲ್ಲಿ ಯಾರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ ಎಂಬ ಕುತೂಹಲಕ್ಕೆ ಸೋಮವಾರ ತೆರೆ ಬೀಳಲಿದೆ.
ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಮಾಜಿ ಸಚಿವ ರಿಷಿ ಸುನಕ್ ಆರಂಭಿಕ ಹಂತದಲ್ಲಿ ಹೆಚ್ಚಿನ ಬೆಂಬಲ ಪಡೆದರಾದರೂ ಅನಂತರದ ದಿನಗಳಲ್ಲಿ ಕ್ರಮೇಣ ಅವರ ಪರ ಒಲವು ಕುಗ್ಗುತ್ತ ಹೋಯಿತು. ಪ್ರತಿಸ್ಪರ್ಧಿ ಲಿಜ್ ಟ್ರಾಸ್ ಅವರ ಬೆಂಬಲದ ಗ್ರಾಫ್ ಮೇಲಕ್ಕೆದ್ದಿದ್ದು, ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಬ್ರಿಟನ್‍ನಲ್ಲಿ 10 ಡೌನಿಂಗ್ ಸ್ಟ್ರೀಟ್‍ನ ಚುಕ್ಕಾಣಿ ಹಿಡಿಯುವ ಅದೃಷ್ಟ ಟ್ರಾಸ್ ಅವರಿಗೇ ಒಲಿಯಲಿದೆ ಎಂಬ ಮಾತುಗಳು ಕೇಳಿಬರತೊಡಗಿವೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಇಂಧನದ ದರ ಗಗನಕ್ಕೇರಿ, ಜೀವನವೆಚ್ಚವು ತೀವ್ರವಾಗಿ ಹೆಚ್ಚಳವಾದ ಕಾರಣ ಬ್ರಿಟನ್ ತತ್ತರಿಸಿಹೋಗಿದೆ. ಈ ಬಾರಿಯ ಪ್ರಧಾನಿ ಸ್ಪರ್ಧೆಯುದ್ದಕ್ಕೂ ಇದೇ ವಿಚಾರ ಪ್ರಧಾನವಾಗಿ ಚರ್ಚೆಗೆ ಬಂದಿದೆ. ಒಟ್ಟಿನಲ್ಲಿ ಹೊಸ ಪ್ರಧಾನಿ ಯಾರಾದರೂ ಬ್ರಿಟನ್‍ನ ಹದಗೆಟ್ಟಿರುವ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ದೊಡ್ಡ ಜವಾಬ್ದಾರಿ ಅವರ ಹೆಗಲೇರಲಿದೆ.