Saturday, November 23, 2024
ಸುದ್ದಿ

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಶಿಕ್ಷಕರ ದಿನ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರ್ಥಿಗಳ ವತಿಯಿಂದ ಶಿಕ್ಷಕರ ದಿನಾಚರಣೆಯು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ಪ್ರತಿ ವಿದ್ಯಾರ್ಥಿಗಳ ಏಳಿಗೆಯಲ್ಲಿ ಪ್ರಮುಖ ಪಾತ್ರ ಶಿಕ್ಷಕರದ್ದು, ಶಿಕ್ಷಕರದ್ದು ಸಾಟಿಯಿಲ್ಲದ ಪರಿಶ್ರಮ. ಅಂತಹ ಎಲ್ಲಾ ಶಿಕ್ಷಕರನ್ನು ನೆನೆಯುವ ಹಾಗೆಯೇ ಭಾರತದ ಆದರ್ಶ ಶಿಕ್ಷಕರಾದ ಸರ್ವಪಲ್ಲಿ ರಾಧಾಕೃಷ್ಣನ್‍ರವರನ್ನು ನೆನೆಯುವ ಈ ಸುದಿನದಂದು ನಮ್ಮ ಅಧ್ಯಾಪಕರ ಜೊತೆ ಶಿಕ್ಷಕರ ಜೊತೆ ಆಚರಿಸುವುದು ಸಂತಸ ತಂದಿದೆ. ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಆದ್ದರಿಂದ ಅವರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾಜಿಕ ಚಿಂತನೆ ಕಳಕಳಿ ಹೊಂದಿದವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮಹತ್ವವಾದದ್ದು. ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವವರು ಶಿಕ್ಷಕರು. ಸದ್ಗುಣಗಳನ್ನು ಕಲಿಸುವ ಶಿಕ್ಷಕರು ನಮ್ಮ ಏಳಿಗೆಯ ಬೆನ್ನೆಲುಬು ಆಗಿದ್ದಾರೆ. ಅವರಿಗೆ ನಾವು ನಮ್ಮ ಜೀವನ ಪರ್ಯಂತ ಚಿರಋಣಿಯಾಗಿರಬೇಕೆಂದು” ಶ್ರೀರಾಮ ಶಾಲೆಯ ವಾರ್ತಾಮಂತ್ರಿಯಾದ ಅಮೃತ್ ಶಿಕ್ಷಕ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದ ಮೊದಲಿಗೆ ಅಧ್ಯಾಪಕರೆಲ್ಲರೂ ಭಾರತಮಾತೆಗೆ ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಏಳನೇ ತರಗತಿಯ ವಿದ್ಯಾರ್ಥಿಗಳು ಗೀತೆ ಹಾಡಿದರು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವ ನಾಣ್ಣುಡಿಯಂತೆ ಗುರುವಿನ ಮಹತ್ವವನ್ನು 7ನೇ ತರಗತಿಯ ಅನನ್ಯ ತಿಳಿಸಿಕೊಟ್ಟರು.

ನಂತರ ಕಾರ್ಯಕ್ರಮದಲ್ಲಿ ಅಧ್ಯಾಪಕರು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ತಮ್ಮ ಶಾಲಾ ದಿನಗಳ ಗುರುಗಳನ್ನು ಸ್ಮರಿಸಿದರು.

ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು “ಅಜ್ಞಾನದ ಕತ್ತಲಿನಿಂದ ಪ್ರಕಾಶಮಾನವಾದ ಬೆಳಕಿನತ್ತ ಕರೆತರುವವನೆ ಶಿಕ್ಷಕ. ಜ್ಞಾನವಿಲ್ಲದೆ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವಿಲ್ಲ. ಅದನ್ನು ನೀಡುವ ಮೂಲಕ ಮನುಷ್ಯನಿಗೆ ಉತ್ತಮ ಮೌಲ್ಯಗಳನ್ನು ತಂದುಕೊಟ್ಟು, ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುವವರು ಶಿಕ್ಷಕರು. ಪ್ರತಿಯೊಂದು ಮಗುವೂ ತಾಯಿಯನ್ನು ಬಿಟ್ಟರೆ ಹೆಚ್ಚು ಸಮಯ ಕಳೆಯುವುದು ಶಿಕ್ಷಕರ ಜೊತೆಗೆ 1314 ವಿದ್ಯಾರ್ಥಿಗಳು 50 ಅಧ್ಯಾಪಕರನ್ನು ಒಳಗೊಂಡ ಈ ಶ್ರೀರಾಮ ಶಾಲೆಯಲ್ಲಿ 25 ವರ್ಷಗಳಿಂದ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆ ಇದೆ. ವಿದ್ಯಾರ್ಥಿಗಳೇ ನಡೆಸಿಕೊಟ್ಟ ಈ ಕಾರ್ಯಕ್ರಮ ತುಂಬಾ ಖುಷಿಕೊಟ್ಟಿದೆ. ಮುಂದೆ ನೀವುಗಳು ಕೂಡ ಶಿಕ್ಷಕರಾಗಿ ಶಾಲೆ ಕೀರ್ತಿ ತನ್ನಿ” ಎಂದು ತಮ್ಮ ಗುರುಗಳನ್ನು ಸ್ಮರಿಸುತ್ತಾ, ಕಥೆಯ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನಂತರ ವಿದ್ಯಾರ್ಥಿಗಳು ಅಧ್ಯಾಪಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದರು. ವಿಜೇತರಾದ ಅಧ್ಯಾಪಕರಿಗೆ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮ ಪೂರ್ವ ತಯಾರಿಯಿಂದ ಹಿಡಿದು ಪೂರ್ತಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟಿದ್ದು, ವಿಶೇಷವಾಗಿತ್ತು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರು, ಬೋಧಕರು ಹಾಗೂ ಬೋಧಕೇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪವನ್ ನಾಯಕ್ ನಿರೂಪಿಸಿ, ವೈದೇಹಿ ಸ್ವಾಗತಿಸಿ, ಮೋನಿಷಾ ವಂದಿಸಿದರು.