ಕನ್ನಡ ಅಂಕಿ ಸಂಖ್ಯೆಯ ಚೆಕ್ ತಿರಸ್ಕರಿಸಿ ದಂಡ ಹಾಕಿದ ಎಸ್‌ಬಿಐ : ಭಾರತೀಯ ಸ್ಟೇಟ್ ಬ್ಯಾಂಕ್ ನಡೆಗೆ 85,177 ರೂ. ದಂಡ –ಕಹಳೆ ನ್ಯೂಸ್
ಹುಬ್ಬಳ್ಳಿ: ಚೆಕ್‌ನಲ್ಲಿ ಕನ್ನಡ ಭಾಷೆ ಬಳಸಿದ್ದಕ್ಕೆ ಗ್ರಾಹಕನಿಗೆ ದಂಡ ಹಾಕಿ ಚೆಕ್ ಅಮಾನ್ಯ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 85,177 ರೂ. ದಂಡ ವಿಧಿಸಿದೆ. ಧಾರವಾಡದ ಕಲ್ಯಾಣ ನಗರ ನಿವಾಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ವಾದಿರಾಚಾರ್ಯ ಇನಾಮಾದಾರ ಅವರ ಚೆಕ್ ಅನ್ನು ಅಮಾನ್ಯ ಮಾಡಲಾಗಿತ್ತು. ಈ ಬಗ್ಗೆ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿ ಎ ಬೋಳಶೆಟ್ಟಿ ಮತ್ತು ಪಿ ಸಿ ಹಿರೇಮಠ ಅವರ ನೇತೃತ್ವದ ಪೀಠ 85,177 ರೂ. ದಂಡ ವಿಧಿಸಿ ಆದೇಶ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಹೋಗಿದ್ದ ವಾದಿರಾಚಾರ್ಯ ಇನಾಮಾದಾರ ಅವರ 6 ಸಾವಿರ ಮೌಲ್ಯದ ಚೆಕ್ ಅನ್ನು ಕನ್ನಡ ಭಾಷೆ ಅಂಕಿ-ಸ0ಖ್ಯೆಯಲ್ಲಿ ಚೆಕ್ ಬರೆದು ವಿದ್ಯುತ್ ಶುಲ್ಕ ಪಾವತಿಯ ಭಾಗವಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಗೆ ನೀಡಿದ್ದಾರೆ.
ಆದ್ರೆ ಎಸ್‌ಬಿಐ ಆ ಚೆಕ್‌ನಲ್ಲಿ ಕನ್ನಡ ಭಾಷೆ ಬಳಸಿದ್ದನ್ನು ಅರ್ಥಮಾಡಿಕೊಳ್ಳದೇ ಮತ್ತು ಕನ್ನಡ ಭಾಷೆಯ ಬಗ್ಗೆ ತೀರಾ ಅಸಡ್ಡೆ ತೋರಿಸಿ ಅಮಾನ್ಯ ಮಾಡಿದ್ದಾರೆ. ಅಲ್ಲದೆ ಎಸ್‌ಬಿಐ 177 ರೂ ದಂಡ ವಿಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆದು ಇದೀಗ ವಾದಿರಾಚಾರ್ಯ ಇನಾಮಾದಾರ ಅವರಿಗೆ ಆಗಿರುವ ಮುಜುಗರ, ಮಾನಸಿಕ ಮತ್ತು ದೈಹಿಕ ನೋವಿಗೆ 50,000 ರೂ ದಂಡ, ತಮ್ಮದೇ ದಾಖಲೆಗಳಿಗೆ ವ್ಯತಿರಿಕ್ತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಪ್ರತಿರಕ್ಷಣೆ ಮೂಲಕ ದೂರುದಾರರ ಪ್ರಕರಣವನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ 25,000 ರೂ, ಹಾಗೂ ಪ್ರಕರಣದ ಖರ್ಚು-ವೆಚ್ಚದ ಬಾಬ್ತಿನ ರೂಪದಲ್ಲಿ 10,000 ರೂ, ಹಾಗೂ ಅವರಿಗೆ ಎಸ್‌ಬಿಐ ವಿಧಿಸಿದ 177 ರೂ ದಂಡ ಒಳಗೊಂಡು ಒಟ್ಟು 85,177ರೂ ಅನ್ನು ಸೆಪ್ಟೆಂಬರ್ 1ರಿಂದ ಮುಂದಿನ ಒಂದು ತಿಂಗಳಲ್ಲಿ ಎಸ್‌ಬಿಐ ಪಾವತಿಸಬೇಕು ಎಂದು ಆದೇಶ ನೀಡಿದೆ.
ಇಲ್ಲವಾದಲ್ಲಿ ಚೆಕ್ ಅಮಾನ್ಯ ಮಾಡಲಾದ 2020ರ ಸೆಪ್ಟೆಂಬರ್ 5ರಿಂದ ದಂಡದ ಹಣ ಪಾವತಿ ಮಾಡುವವರೆಗೆ ಶೇ. 8ರಷ್ಟು ಬಡ್ಡಿ ದರ ಸೇರಿ ಹಣವನ್ನು ಪಾವತಿಸಬೇಕು” ಎಂದು ಆಯೋಗ ಆದೇಶಿಸಿದೆ.