ಅಪರಿಚಿತ ವಾಹನ ಡಿಕ್ಕಿಯಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್ ಪೊದ್ದರವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಮಗ ಸಮರ್ಥ್ ಪೊದ್ದಾ ಗುರುವಾರ ಬೆಳಿಗ್ಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಿಂದ ಗಣೇಶನ ಹಬ್ಬಕ್ಕೆ ರಜೆಯಲ್ಲಿ ಊರಿಗೆ ತೆರಳಿದ್ದ ಏಳನೇ ತರಗತಿಯ ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ ನಿವಾಸಿ ತಂದೆ ಪ್ರಭಾಕರ್ ಅವರೊಂದಿಗೆ ಹೊರಟವರು ಉಚ್ಚಿಲಕ್ಕೆ ಬುಧವಾರ ಬೆಳಿಗ್ಗೆ ಸರಕಾರಿ ಬಸ್ಸಿನಲ್ಲಿ ಆಗಮಿಸಿದ್ದರು.
ಬಸ್ಸಿನಿಂದ ಇಳಿದು ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಭಾಕರ್ ಪೊದ್ಧಾರವರು ಸ್ಥಳದಲ್ಲಿ ಮೃತಪಟ್ಟಿದ್ದರು.
ಸಮರ್ಥ್ ತೀವ್ರ ಗಾಯಗೊಂಡು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಆನೆಗುಂದಿ ಸರಸ್ವತಿ ಪೀಠ ಸಂಚಾಲಿತ ಸೂರ್ಯ ಚೈತನ್ಯ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಸಮರ್ಥ್ ನಿಧಾನದ ಪ್ರಯುಕ್ತ ಶಾಲೆಗೆ ರಜೆ ಘೋಷಿಸಲಾಗಿದೆ.