Tuesday, January 21, 2025
ಸುದ್ದಿ

ಸೇವಾ ಕಾರ್ಯಗಳ ಮಹಾಪೂರ : ಸೆ.17- ಅ.2 ಬಿಜೆಪಿ ‘ಸೇವಾ ಪಾಕ್ಷಿಕ’ ಅಭಿಯಾನ: ಉಡುಪಿ ಜಿಲ್ಲಾ ಬಿಜೆಪಿ ಪತ್ರಿಕಾ ಗೋಷ್ಠಿ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿಯವರ ಅಪ್ರತಿಮ ನಾಯಕತ್ವದಲ್ಲಿ ಕೇಂದ್ರ ಸರಕಾರವು ‘ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ’ಕ್ಕೆ ಬದ್ಧವಾಗಿದೆ. ಸರಕಾರದ ಅನೇಕ ಜನಪರ ಯೋಜನೆಗಳನ್ನು ಸ್ವೀಕರಿಸಿ ಫಲಾನುಭವಿಗಳಾಗುವ ಮೂಲಕ ದೇಶವಾಸಿಗಳು ಇದನ್ನು ಅನುಮೋದಿಸಿದ್ದಾರೆ.
ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಸೆ.25ರಂದು ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜನ್ಮದಿನ, ಅ.2ರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಸೂಚನೆಯಂತೆ, ರಾಜ್ಯ ಬಿಜೆಪಿ ಮಾರ್ಗದರ್ಶನದಲ್ಲಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸೆ.17ರಿಂದ ಅ.2ರ ವರೆಗೆ ಜಿಲ್ಲೆಯಾದ್ಯಂತ ವೈಶಿಷ್ಟ್ಯಪೂರ್ಣ ಸೇವಾ ಚಟುವಟಿಕೆಗಳೊಂದಿಗೆ ‘ಸೇವಾ ಪಾಕ್ಷಿಕ’ ಅಭಿಯಾನವನ್ನು ಆಚರಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದರು.
ಅವರು ಗುರುವಾರ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅಭಿಯಾನದ ಪ್ರಮುಖ 13 ಸೇವಾ ಕಾರ್ಯಗಳು:
ಸೆ.17-18 ರಕ್ತದಾನ ಶಿಬಿರ
ಸೆ.17 – ಅ.2 ಜೀವ ರಕ್ಷಕ ಲಸಿಕಾ ಅಭಿಯಾನ
ಸೆ.20 – 21 ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಪ್ರದರ್ಶಿನಿ
ಸೆ.21 – 22 ಆರೋಗ್ಯ ತಪಾಸಣಾ ಶಿಬಿರ
ಸೆ.22 – 23 ಅರಳಿ ಮರ ನೆಡುವ ಅಭಿಯಾನ
ಸೆ.24 – 25 ಕಮಲೋತ್ಸವ (ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ)
ಸೆ.25 – 29 ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ
ಸೆ.26 – 27 ಅಮೃತ ಸರೋವರ ನಿರ್ಮಾಣ
ಸೆ.28 – 29 ಅಂಗನವಾಡಿ ಸೇವಾ ದಿವಸ್
ಸೆ.30 ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ
ಸೆ.30 ಕ್ಷಯರೋಗ ನಿರ್ಮೂಲನಾ ಅಭಿಯಾನ
ಅ.2 ಸ್ವಚ್ಛತಾ ಅಭಿಯಾನ
ಅ.2 ಖಾದಿ ಉತ್ಸವ (ಗಾಂಧಿ ಜಯಂತಿ)

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಸೇವಾ ಪಾಕ್ಷಿಕ’ ಅಭಿಯಾನದ ಜಿಲ್ಲಾ ಸಂಚಾಲಕರಾಗಿ ಮನೋಹರ್ ಎಸ್. ಕಲ್ಮಾಡಿ ಹಾಗೂ ಜಿಲ್ಲಾ ಸಹ ಸಂಚಾಲಕರಾಗಿ ಸದಾನಂದ ಉಪ್ಪಿನಕುದ್ರು ಮತ್ತು ಶಿವಕುಮಾರ್ ಅಂಬಲಪಾಡಿ ನೇಮಕಗೊಂಡಿದ್ದು, ಅಭಿಯಾನದ ಮಂಡಲ ಸಂಚಾಲಕರು, ಸಹ ಸಂಚಾಲಕರು ಮತ್ತು ಅಭಿಯಾನದ 13 ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮಿಸಲಾಗಿದೆ. ಈ ತಂಡವು ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ವರೆಗೆ ನಡೆಯಲಿರುವ ‘ಸೇವಾ ಪಾಕ್ಷಿಕ’ ಅಭಿಯಾನದ ವ್ಯವಸ್ಥಿತ ಸಂಯೋಜನೆ ಹಾಗೂ ವರದಿ ಸಲ್ಲಿಕೆಯ ಬಗ್ಗೆ ಗಮನ ಹರಿಸಲಿದೆ.

ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ನೀಡಿರುವ ಎಲ್ಲಾ ಅಭಿಯಾನಗಳನ್ನು ಬದ್ಧತೆಯಿಂದ ನಿರ್ವಹಿಸಿರುವ ಹಿರಿಮೆಗೆ ಪಾತ್ರವಾಗಿದ್ದು ‘ಸೇವಾ ಪಾಕ್ಷಿಕ’ ಅಭಿಯಾನವನ್ನೂ ಅತ್ಯಂತ ಯಶಸ್ವಿಯಾಗಿ ಆಚರಿಸಲಿದೆ. ಎಲ್ಲಾ ಮಂಡಲ ಕೇಂದ್ರಗಳಲ್ಲೂ ಪತ್ರಿಕಾ ಗೋಷ್ಠಿ ನಡೆಯಲಿದ್ದು ಅಭಿಯಾನದ ಮಂಡಲವಾರು ಸೇವಾ ಕಾರ್ಯಗಳ ವಿವರಗಳನ್ನು ಪ್ರಕಟಿಸಲಾಗುವುದು.

ಸೆ.17ರಂದು ಯುವ ಮೋರ್ಚಾ ಹಾಗೂ ಇತರ ಮೋರ್ಚಾಗಳ ವತಿಯಿಂದ ರಕ್ತದಾನ ಶಿಬಿರಗಳು ನಡೆಯಲಿದ್ದು, ಉಚಿತ ಆರೋಗ್ಯ ಶಿಬಿರಗಳನ್ನೂ ಆಯೋಜಿಸಲಾಗುವುದು.

‘ಆಜಾದಿ ಕಾ ಅಮೃತ ಮಹೋತ್ಸವ’ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ 75 ಕೆರೆಗಳ ನಿರ್ಮಾಣಕ್ಕೆ ಸರಕಾರ ನಿರ್ದೇಶನ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅಮೃತ ಸರೋವರ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವರು ಹಾಗೂ ಸಸಿಗಳನ್ನು ನೆಡಲಿದ್ದಾರೆ.

2025ಕ್ಕೆ ಭಾರತವು ಕ್ಷಯ ರೋಗದಿಂದ ಮುಕ್ತ ಆಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಅಂತಹ ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆಗೆ ಪೂರಕ ಬೆಂಬಲ ಕೊಡಲಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಜೀವನ ಮತ್ತು ಗುರಿ’ಯ ಕುರಿತಾಗಿ ಒಂದು ಪ್ರದರ್ಶಿನಿಯನ್ನು ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಆಯೋಜಿಸಲಾಗುವುದು.
ಜನ ಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ ಇರಲಿದೆ. ವಿಶೇಷವಾಗಿ ‘ಮೋದಿ 20 Dream Meet Delivery’ ಪುಸ್ತಕಕ್ಕೆ ಅತಿ ಹೆಚ್ಚು ಪ್ರಚಾರ ನೀಡಲಾಗುವುದು.

ಕೋವಿಡ್ ಲಸಿಕಾ ಅಭಿಯಾನವು ಐತಿಹಾಸಿಕವಾಗಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ 200 ಕೋಟಿಗಿಂತಲೂ ಹೆಚ್ಚು ಲಸಿಕೆಗಳನ್ನು ದೇಶದಲ್ಲಿ ನೀಡಕಾಗಿದ್ದು, ಜನತೆ ಪ್ರಸ್ತುತ ಬೂಸ್ಟರ್ ಡೋಸ್ ಲಸಿಕೆ ಪಡೆಯುತ್ತಿದ್ದಾರೆ. ಅಂತಹ ಲಸಿಕಾ ಕೇಂದ್ರಗಳ ಮುಂದೆ ಸೇವಾ ಚಟುವಟಿಕೆಯ ಕೇಂದ್ರ ಸ್ಥಾಪಿಸಿ ಇನ್ನೂ ಲಸಿಕೆ ಪಡೆಯದೇ ಇರುವವರನ್ನು ಗುರುತಿಸಿ ಲಸಿಕೆ ಕೊಡಿಸಲಾಗುವುದು.

ಜಿಲ್ಲೆಯ ಪ್ರತಿ ಬೂತ್ ವ್ಯಾಪ್ತಿಯಲ್ಲಿಯೂ ನಿರ್ದಿಷ್ಟ ಗುರಿಯೊಂದಿಗೆ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗುವುದು. ಎಲ್ಲಾ ಮಂಡಲಗಳಲ್ಲಿ ಎರಡು ದಿನಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗುವುದು. ಮೊದಲ ದಿನ ಸಾರ್ವಜನಿಕ ಸ್ಥಳಗಳಲ್ಲಿ ‘ಸ್ವಚ್ಚತಾ ಅಭಿಯಾನ’ ಹಾಗೂ ಎರಡನೇ ದಿನ ನದಿ, ಕೆರೆಗಳ ಸಹಿತ ಪ್ರಸ್ತುತ ಇರುವ ಮತ್ತು ನಿರ್ಮಾಣ ಹಂತದಲ್ಲಿರುವ ಅಮೃತ ಸರೋವರಗಳ ಸ್ವಚ್ಛತೆ ನಡೆಯಲಿದೆ. “Catch the Rain” ಅಭಿಯಾನದಡಿಯಲ್ಲಿ ಮಳೆ ನೀರಿನ ಶೇಖರಣೆಯ ಬಗ್ಗೆ ಅರಿವು ಮೂಡಿಸಲಾಗುವುದು.

‘ವೋಕಲ್ ಫಾರ್ ಲೋಕಲ್’ ಅಭಿಯಾನದಡಿ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯನ್ನು ಜಾಗೃತಗೊಳಿಸಲಾಗುವುದು. ಪ್ರಧಾನಿ ಮೋದಿ ಜೀವನ ಮತ್ತು ಗುರಿಯ ಕುರಿತು ಲೇಖನಗಳನ್ನು ಬರೆಸಲಾಗುವುದು.

ಪಕ್ಷದ ನಿರಂತರ ಸ್ಪೂರ್ತಿಯ ಚಿಲುಮೆಯಾದ ಪಂಡಿತ್ ದೀನ ದಯಾಳ್ ಉಪಾಧ್ಯಾಯರವರ ಜನ್ಮ ದಿನಾಚರಣೆಯನ್ನು ಸೆ.25ರಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಆಚರಿಸಲಾಗುವುದು. ಜೊತೆಗೆ ಅಂದೇ ಸೆ.25 ರವಿವಾರ ಬೆಳಿಗ್ಗೆ ಗಂಟೆ 11.09ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರತೀ ಬೂತ್‌ನಲ್ಲಿ ಸಾಮೂಹಿಕವಾಗಿ ಆಲಿಸುವ ಕಾರ್ಯ ನಡೆಯಲಿದೆ.

ಅ.2ರಂದು ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಮಹಾತ್ಮಾ ಗಾಂಧೀಜಿ ಜೀವನದ ಗುರಿಯನ್ನು ತಿಳಿಸುವ ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಹಾಗೂ ಖಾದಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.