Monday, November 25, 2024
ಸುದ್ದಿ

ಮಾನಸಿಕ ಅಸ್ಪಸ್ಥತೆಗೆ ಜಾರಿದ ವಿಚ್ಛೇಧಿತ ಮಹಿಳೆಯ ರಕ್ಷಣೆ : ಮಂಜೇಶ್ವರದ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ವಿಶು ಶೆಟ್ಟಿ – ಕಹಳೆ ನ್ಯೂಸ್

ಉಡುಪಿ : ಗಂಡನಿಂದ ವಿಚ್ಛೇಧನಗೊಂಡ ಮಹಿಳೆಯೋರ್ವಳು ಮಾನಸಿಕ ಅಸ್ವಸ್ಥೆಗೆ ಜಾರಿ ಉಡುಪಿಯ ರಥಬೀದಿಯಲ್ಲಿ ಅಮಾನವೀಯವಾಗಿ ದಿನ ಕಳೆಯುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ನಗರದ ಮಹಿಳಾ ಠಾಣೆ ಹಾಗೂ ಸಖಿ ಸೆಂಟರ್‌ನ ಸಿಬ್ಬಂದಿಗಳ ನೆರವಿನಿಂದ ರಕ್ಷಿಸಿ, ಕಾಸರಗೋಡು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮಕ್ಕೆ ಮಂಗಳವಾರ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯನ್ನು ಸಾಗರ ಮೂಲದ ದೀಪಾ ಕಾಮತ್ (38) ಎಂದು ಗುರುತಿಸಲಾಗಿದ್ದು, ಮದುವೆಯಾಗಿ ವಿಚ್ಛೇಧನಗೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಬೀದಿ ಪಾಲಾಗಿದ್ದ ಇವರನ್ನು ವಿಶು ಶೆಟ್ಟಿ ಅವರು ಉಡುಪಿ ಪೊಲೀಸರ ಸಹಾಯದಿಂದ ಎರಡು ಬಾರಿ ರಕ್ಷಿಸಿ, ಆಕೆಯ ತಂದೆಯ ವಶಕ್ಕೆ ಒಪ್ಪಿಸಿದ್ದರು. ಆದರೆ ಇದೀಗ ಮಹಿಳೆಯ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರ ಜೊತೆಗೆ ಜಗಳ ಕಾಯುತ್ತಿರುವುದು ನಡೆದಿದೆ. ನನ್ನ ಗಂಡ ಉಡುಪಿಯಲ್ಲಿದ್ದಾನೆ. ಅವನನ್ನು ಹುಡುಕಿಕೊಂಡು ಬಂದಿದ್ದೇನೆ, ನನಗೊಂದು ಕೆಲಸಕೊಡಿ ಎನ್ನುವ ದೀಪಾ ಕಾಮತ್ ಅವರು ಸರಿಯಾಗಿ ಸ್ನಾನ, ಸ್ವಚ್ಛತೆಗೆ ಗಮನ ಕೊಡದಿರುವುದರಿಂದ ತಲೆಕೂದಲು ಜಡೆಗಟ್ಟಿದ್ದರೆ, ಮೈಯೆಲ್ಲಾ ದುರ್ನಾತ ಬೀರುತ್ತಿತ್ತು. ಮಹಿಳೆ ಸುಶಿಕ್ಷಿತೆಯಾಗಿದ್ದು, ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವಾಗ ಮದುವೆ ಮಾಡಿಕೊಡಲಾಗಿತ್ತು ಎಂಬ ಮಾಹಿತಿಯಿದೆ.

ಈಕೆಯ ಅಸಹಾಯಕತೆಯನ್ನು ಗಮನಿಸಿದ ವ್ಯಕ್ತಿಯೋರ್ವ ಕೆಲಸ ಕೊಡಿಸುವ ನೆಪದಲ್ಲಿ ತನ್ನ ಕಾರಿನಲ್ಲಿ ಕೊಂಡೊಯ್ದು ದೌರ್ಜನ್ಯ ಎಸಗಲು ಪ್ರಯತ್ನಿಸಿದ ಕಳವಳಕಾರಿ ಮಾಹಿತಿ ಕೂಡಾ ಲಭಿಸಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ರಕ್ಷಣೆಗೆ ವಿರೋಧ : ಮಹಿಳೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಮಹಿಳಾ ಠಾಣೆಯ ಎಚ್‌ಸಿ ಜ್ಯೋತಿ ನಾಯಕ್ ಹಾಗೂ ಸಖಿ ಸೆಂಟರ್‌ನ ಸಿಬ್ಬಂದಿಗಳು ಮಹಿಳೆಯ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಮಹಿಳೆ ಸಾಕಷ್ಟು ಪ್ರತಿರೋಧ ತೋರಿದ ಘಟನೆ ನಡೆಯಿತು. ಕೊನೆಗೂ ಆಕೆಯ ಮನವೊಲಿಸಿ, ವಿಶು ಶೆಟ್ಟಿ ಅವರು ತಮ್ಮ ಸ್ವಂತ ವಾಹನದಲ್ಲಿ ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದಾರೆ.
ಮಹಿಳೆಯ ಸಂಬಧಿಕರು ಉಡುಪಿ ಜಿಲ್ಲೆಯಲ್ಲಿರುವ ಬಗ್ಗೆ ಮಾಹಿತಿ ಮೇರೆಗೆ ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿದರೂ, ಸೂಕ್ತ ಸ್ಪಂದನೆ ಸಿಗಲಿಲ್ಲ. ಕೊನೆಗೆ ಮಹಿಳೆಯ ಭವಿಷ್ಯ ಹಾಗೂ ಪುನರ್ವಸತಿಯ ದೃಷ್ಟಿಯಿಂದ ವಿಶು ಶೆಟ್ಟಿ ಅವರು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದ ಮುಖ್ಯಸ್ಥ ಉದಯ ಕುಮಾರ್ ಅವರಿಗೆ ಮನವಿ ಮಾಡಿದಾಗ, ಅವರು ದೀಪಾ ಕಾಮತ್ ಅವರಿಗೆ ಆಶ್ರಯ ನೀಡಲು ಒಪ್ಪಿದ್ದಾರೆ.

ಮಹಿಳೆಯ ಸಂಭಂದಿಕರು ಉಡುಪಿ ಮಹಿಳಾ ಠಾಣೆ, ಸಖಿ ಸೆಂಟರ್ ಅಥವಾ ಮಂಜೇಶ್ವರದ ಸೇವಾಶ್ರಮವನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಉಡುಪಿಯಲ್ಲಿ ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ ಕೇಂದ್ರವಿಲ್ಲ : ಉಡುಪಿಯಲ್ಲಿ ಮಾನಸಿಕ ಅಸ್ವಸ್ಥರಿಗೆ ಸರಕಾರಿ ಪುನರ್ವಸತಿ ಕೇಂದ್ರವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಮಾನಸಿಕ ಅಸ್ವಸ್ಥರನ್ನು ರಕ್ಷಿಸಿದರೂ, ಅವರಿಗೆ ಸೂಕ್ತ ಚಿಕಿತ್ಸೆ, ಆಶ್ರಯ ನೀಡಲು ಖಾಸಗಿ ಸೇವಾಶ್ರಮಗಳನ್ನೇ ಆಶ್ರಯಿಸಬೇಕಾಗಿದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿಯೂ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ಮೂಲಭೂತ ಸೌಕರ್ಯಗಳ ಕೊರತೆಯಿದೆ . ಆದ್ದರಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳು ತುರ್ತಾಗಿ ಈ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸಬೇಕು . ಮಾನಸಿಕ ಅಸ್ವಸ್ಥರು ಪ್ರಮುಖವಾಗಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗದಂತೆ ರಕ್ಷಣೆ, ಸೂಕ್ತ ಚಿಕಿತ್ಸೆ, ಆಶ್ರಯ ನೀಡಲು ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ವಿಶು ಶೆಟ್ಟಿ ಅವರು ಆಗ್ರಹಿಸಿದ್ದಾರೆ.