Sunday, January 19, 2025
ಸುದ್ದಿ

Exclusive : ಖಾಸಗಿ ಶಾಲೆಗಳ ಭರಾಟೆಯ ಮಧ್ಯದಲ್ಲೂ ದಕ್ಷಿಣ ಕನ್ನಡದ ಈ ಸರಕಾರಿ ಶಾಲೆ ಪ್ರವೇಶಕ್ಕೆ ಸಾಲು ನಿಲ್ಲುವ ಪೋಷಕರು – ಕಹಳೆ ನ್ಯೂಸ್

ಮಂಗಳೂರು, ಜುಲೈ 13 : ಖಾಸಗಿ ಶಾಲೆಗಳ ಭರಾಟೆ ಮಧ್ಯೆ ಸರಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುವ ಪೋಷಕರೇ ಹೆಚ್ಚು. ಸಾಲ- ಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದಲ್ಲಿರುವ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಸಾಲುಗಟ್ಟೆ ನಿಲ್ಲುತ್ತಾರೆ.

ಪ್ರತಿ ವರ್ಷವೂ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರುತ್ತಿದ್ದು, ಶಿಸ್ತಿನ ಕಾರಣಕ್ಕಾಗಿ ಇಲ್ಲಿಯ ಶಿಕ್ಷಕರೂ ಸಮವಸ್ತ್ರ ಧರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಲಂಕಾರಿನಲ್ಲಿ ಈ ಅಪರೂಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಶತಮಾನೋತ್ಸವದ ಹೊಸ್ತಿಲಲ್ಲಿರುವ ಈ ಶಾಲೆ ಸಂಪೂರ್ಣ ಭಿನ್ನ. ಅಲಂಕಾರಿನ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಸುತ್ತಮುತ್ತಲ ಪ್ರದೇಶದ ಜನ ಸಾಲಲ್ಲಿ ನಿಲ್ಲುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ವರ್ಷಕ್ಕೆ 30 ರಿಂದ 40 ಮಕ್ಕಳು ಇಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುತ್ತಾರೆ. ಈ ಶಾಲೆಯಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ಈ ಶಾಲೆ ಯಾವ ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗೂ ಕಮ್ಮಿ ಇಲ್ಲದಂತೆ ಶಿಕ್ಷಣ ನೀಡುತ್ತಿದೆ. ಯೂನಿಸೆಫ್ ಅನುದಾನದಡಿಯಲ್ಲಿ ಈ ಶಾಲೆಗೆ ಸುಮಾರು 1.50 ಲಕ್ಷ ರುಪಾಯಿಗಳ ತಾಂತ್ರಿಕ ಸಲಕರಣೆಗಳೂ ಪೂರೈಕೆಯಾಗಿದೆ.

ಶಿಕ್ಷಣದ ಜೊತೆಗೆ ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸುವ ಕಾರ್ಯದಲ್ಲೂ ಈ ಶಾಲೆ ಶಿಕ್ಷಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಶಿಸ್ತು ಹಾಗೂ ಸಮಾನತೆಯನ್ನು ತರುವ ಉದ್ದೇಶಕ್ಕಾಗಿ ಮಕ್ಕಳ ಜೊತೆಗೆ ಇಲ್ಲಿನ ಶಿಕ್ಷಕರೂ ವಾರಕ್ಕೆ ಮೂರು ರೀತಿ ಸಮವಸ್ತ್ರವನ್ನು ಧರಿಸುತ್ತಾರೆ.

ಕುಗ್ರಾಮವಾದ ಅಲಂಕಾರಿನಲ್ಲಿರುವ ಈ ಶಾಲೆ ಊರಿನ ಯಶಸ್ಸಿನ ಕಿರೀಟದಂತೆಯೂ ಇದೆ. ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ಸಮಾಜದ ಉತ್ತಮ ಪ್ರಜೆಗಳಾಗಿ, ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.