ಶಾಸಕರ ತಂದೆಗೆ ಮಹಾ ಮೋಸ : ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳನ್ನು ಮಾರುತ್ತಿದ್ದ ಮೈಸೂರಿನ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸೇರಿ ಐವರ ಖತರ್ನಾಕ್ ತಂಡ ಅರೆಸ್ಟ್ – ಕಹಳೆ ನ್ಯೂಸ್
ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದ ನಗರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ ಸೇರಿದಂತೆ ಐವರು ಆರೋಪಿಗಳನ್ನು ಕುವೆಂಪು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಹಲವು ನಿವೇಶನ ನಕಲಿ ಸೃಷ್ಟಿಸಿ ಮಾರಾಟ ಮಾಡಿದ್ದು, ಪೊಲೀಸರು ಕೈಗೊಂಡ ಕಾರ್ಯಾಚರಣೆ ವೇಳೆ ಖತರ್ನಾಕ್ ತಂಡದ ಕೈವಾಡ ತಿಳಿದುಬಂದಿದೆ. ಅದರಂತೆ ಪೊಲೀಸರು ಐವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಶಾಸಕ ರಿಜ್ವಾನ್ ಅರ್ಷದ್ ಅವರ ತಂದೆಗೇ ಖತರ್ನಾಕ್ ತಂಡ ಮೋಸ ಮಾಡಿದೆ. ನಗರದ ಉದಯಗಿರಿಯಲ್ಲಿರುವ 80*100 ಅಡಿ ವಿಸ್ತೀರ್ಣದ ನಿವೇಶನದ ನಕಲಿ ದಾಖಲೆ ಸೃಷ್ಟಿ ಮುಡಾಗೆ ಸೇರಿದ ನಿವೇಶದ ದಾಖಲೆ ಪೋರ್ಜರಿ ಮಾಡಿರುವ ರಾಜಾರಾಂ ಮತ್ತು ತಂಡ ನಿವೇಶನದ ಮೇಲೆ ಬ್ಯಾಂಕ್ನಲ್ಲಿ ಸಾಲ ಪಡೆಯಲು ಯತ್ನಿಸಿದೆ. ನಕಲಿ ದಾಖಲೆ ಸೃಷ್ಟಿಸಲು ವಿವಿಧ ಇಲಾಖೆಗೆ ಸಂಬಂಧಿಸಿದ ಸೀಲ್ಗಳನ್ನು ಕೂಡ ಪೋರ್ಜರಿ ಮಾಡಲಾಗಿದೆ.
ನಗರದ ರಾಮಕೃಷ್ಟನಗರದ ಐ ಬ್ಲಾಕ್ನಲ್ಲಿರುವ ಗೋಲ್ಡನ್ ಬೆಲ್ಸ್ ಸರ್ವೀಸ್ ಅಪಾರ್ಟ್ ಮೆಂಟ್ ನಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಸೀಲ್ಗಳು ಹಾಗೂ ಇ-ಸ್ಟಾಂಪ್ ಪೇಪರ್, ಸ್ಕ್ಯಾನರ್, ಪ್ರಿಂಟರ್ಗಳು ಪತ್ತೆಯಾಗಿವೆ. ಪ್ರಕರಣ ಸಂಬಂಧ ನಗರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾ, ಬೆಂಗಳೂರಿನ ಕಟ್ಟಿಗೇನಹಳ್ಳಿ ನಿವಾಸಿ ಮಹಮ್ಮದ್ ನಯೀಮ್, ಮೊಹಮ್ಮದ್ ಶಹಭಾಜ್ ಮಲ್ಲಿಕ್, ಭಾಸ್ಕರ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಿ ತನಿಖೆ ನಡೆಸಲಾಗಿದೆ. ಪೊಲೀಸರ ತೀವ್ರ ವಿಚಾರಣೆ ನಡುವೆ ಆರೋಪಿಗಳು ಈ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಅನೇಕ ನಿವೇಶನಗಳನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.