PFI , SDPI ಭಯೋತ್ಪಾದಕ ಸಂಘಟನೆ ನಂಟು – NIA ದಾಳಿ ; ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ : ಬ್ಯಾನ್ ಆಗುತ್ತಾ PFI , SDPI..? – ಕಹಳೆ ನ್ಯೂಸ್
ನವದೆಹಲಿ : ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹತ್ತು ರಾಜ್ಯಗಳಲ್ಲಿ ಇರುವ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿಗಳ ಮೇಲೆ ಗುರುವಾರ (ಸೆಪ್ಟೆಂಬರ್ 22) ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ: ಬ್ಯಾನ್ ಆಗುತ್ತಾ PFI , SDPI..
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ಪಿಎಫ್ ಐನ ನೂರಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ. ಹತ್ತಕ್ಕೂ ಅಧಿಕ ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ಕಾರ್ಯಾಚರಣೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ವರದಿ ವಿವರಿಸಿದೆ.
ಉತ್ತರಪ್ರದೇಶದ ಲಕ್ನೋದಲ್ಲಿ ಪಿಎಫ್ ಐನ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಉತ್ತರಕನ್ನಡದ ಶಿರಸಿ, ಕಲಬುರಗಿ, ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಸ್ಥಳಗಳಲ್ಲಿ ಎನ್ ಐಎ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿ ಹಾಗೂ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿದೆ.
ದೆಹಲಿಯ ಶಾಹೀನ್ ಬಾಗ್ ಮತ್ತು ಘಾಜಿಪುರ್ ನಲ್ಲಿಯೂ ಪಿಎಫ್ ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ. ಅಸ್ಸಾಂನಲ್ಲಿಯೂ ಪಿಎಫ್ ಐ ಜೊತೆ ಸಂಪರ್ಕ ಹೊಂದಿರುವ ಒಂಬತ್ತು ಮಂದಿಯನ್ನು ಅಸ್ಸಾಂ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಕಳೆದ ರಾತ್ರಿ ಅಸ್ಸಾಂನ ಹಟಿಗಾಂವ್ ಪ್ರದೇಶದಲ್ಲಿ ಎನ್ ಐಎ ಮತ್ತು ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಿಎಫ್ ಐ ಜತೆ ಸಂಪರ್ಕ ಹೊಂದಿರುವವರನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಎನ್ ಐಗೆ ತಿಳಿಸಿದ್ದಾರೆ.
ಸುಮಾರು 200ಕ್ಕೂ ಅಧಿಕ ಎನ್ ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ. ಮಂಗಳೂರಿನಲ್ಲಿ ಎನ್ ಐಎ ದಾಳಿ ನಡೆಸಿರುವುದರ ವಿರುದ್ಧ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.