Sunday, November 24, 2024
ಸುದ್ದಿ

ಕುಂದಾಪುರ ಟಿ.ಟಿ.ರೋಡ್‌ನಲ್ಲಿ ನೂತನವಾಗಿ ನಿರ್ಮಾಣವಾದ ಸರಕಾರಿ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಉದ್ಘಾಟನೆ- ಕಹಳೆ ನ್ಯೂಸ್

ಕುಂದಾಪುರ, ಸೆ.26: ರಾಜ್ಯದ 5 ಶೈಕ್ಷಣಿಕ ನಗರಗಳಲ್ಲಿ ದೀನ್ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ 1 ಸಾವಿರ ಮಕ್ಕಳಿಗೆ ವಸತಿಗೆ ಅನುಕೂಲವಾಗುವಂತೆ ಹಾಸ್ಟೆಲ್ ರಚನೆಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ಟಿ.ಟಿ.ರೋಡ್‌ನಲ್ಲಿ  ನೂತನವಾಗಿ ನಿರ್ಮಾಣವಾದ ಸರಕಾರಿ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.

ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿಯಲ್ಲಿ ದೀನ್‌ದಯಾಳ್ ಉಪಾಧ್ಯಾಯ ಹಾಸ್ಟೆಲ್ ರಚನೆಯಾಗಲಿದ್ದು  ಇದರಲ್ಲಿ 25 ಶೇ. ಪರಿಶಿಷ್ಟ ಪಂಗಡ, 25 ಶೇ. ಪರಿಶಿಷ್ಟ ಜಾತಿ, 20 ಶೇ. ಹಿಂದುಳಿದ ವರ್ಗ, 10-15 ಶೇ. ಅಲ್ಪಸಂಖ್ಯಾಕ, ಉಳಿಕೆ ಸಮಾಜದ ಎಲ್ಲ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಕಳೆದ ವರ್ಷದ ಬೇಡಿಕೆಯಂತೆ ದ.ಕ.ದಲ್ಲಿ 250, ಉಡುಪಿಯಲ್ಲಿ 125, ಕುಂದಾಪುರದಲ್ಲಿ 100 ಮಕ್ಕಳಿಗೆ ಹೆಚ್ಚುವರಿಯಾಗಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಕಲಿಯುವ ಮಕ್ಕಳಿಗೆ ವಸತಿ ಸಮಸ್ಯೆ ಎಲ್ಲಿಯೂ ಆಗಬಾರದು ಎಂದೇ ಮುತುವರ್ಜಿ ವಹಿಸಲಾಗುತ್ತಿದೆ ಎಂದರು.

ತಲಾ 3.5 ಕೋ.ರೂ. ವೆಚ್ಚದಲ್ಲಿ  50 ಕನಕದಾಸ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 30 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ತಗುಲುವ ವೆಚ್ಚವನ್ನು ಹಿಂದುಳಿದ ವರ್ಗಗಳ ಇಲಾಖೆ ಸಮಾಜ ಕಲ್ಯಾಣ ಇಲಾಖೆಗೆ ಭರಿಸಲಿದೆ ಎಂದರು.

ಟಿ.ಟಿ. ರೋಡ್ ಹಾಸ್ಟೆಲ್ 100 ಮಕ್ಕಳ ಸಾಮರ್ಥ್ಯದ್ದಾಗಿದ್ದು ಶೇ.75 ಪರಿಶಿಷ್ಟ ಜಾತಿ, ಶೇ.25 ಹಿಂದುಳಿದ ವರ್ಗದವರಿಗೆ ಅವಕಾಶ ನೀಡಲಾಗಿದೆ. 1 ವಾರದಲ್ಲಿ ವಡೇರಹೋಬಳಿ ಹಾಸ್ಟೆಲ್‌ನ ಮಕ್ಕಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೇಡಿಕೆಯಂತೆ ಸಂಗಮ್‌ನಲ್ಲಿ ಇನ್ನೊಂದು ಹಾಸ್ಟೆಲ್ ಕಟ್ಟಡ ರಚನೆಯಾಗಲಿದೆ. ಅದಕ್ಕಾಗಿ ಇದ್ದ ತಾಂತ್ರಿಕ ತೊಂದರೆಯನ್ನು ನಿವಾರಿಸಲಾಗುತ್ತಿದೆ. 1 ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮುಡ್ನೂರು, ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ್, ಕ್ರೈಸ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮು, ಗುತ್ತಿಗೆದಾರ ಧನಂಜಯ ರೆಡ್ಡಿ ಉಪಸ್ಥಿತರಿದ್ದರು. ಹಾಸ್ಟೆಲ್ ವಾರ್ಡನ್ ಭಾಸ್ಕರ ಪೂಜಾರಿ ನಿರ್ವಹಿಸಿದರು.