ಇಸ್ಲಾಮಿಕ್ ಜಿಹಾದಿ ಸಂಘಟನೆ PFI ಹಾಗೂ 8 ಸಮೂಹ ಸಂಘಟನೆಗಳು ದೇಶದಾದ್ಯಂತ ನಿಷೇಧ – ಕಹಳೆ ನ್ಯೂಸ್
PFIಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ: ಪಿಎಫ್ಐ ಸೇರಿ 8 ಸಂಘಟನೆಗಳ ನಿಷೇಧ
ನವದೆಹಲಿ: ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಇಂದು (ಸೆ.28) ಆದೇಶ ಹೊರಡಿಸಿದೆ.
ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿದೆ.
ಯುಪಿಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಿದೆ.
ಪಿಎಫ್ಐ ಬ್ಯಾನ್ ಮಾಡುವಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಕಳೆದ ಸೆ.22ರಂದು ಪಿಎಫ್ಐ ಮೇಲೆ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯ ಬಳಿಕ ಬಂದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ.
ಕಳೆದ ಸೆ. 22ರಂದು ರಾಷ್ಟ್ರೀಯ ತನಿಖಾ ಆಯೋಗ(ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್ಐ ಕಚೇರಿ ಹಾಗೂ ಮುಖಂಡರ ಮನೆಗಳ ಮೇಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿ, ವಿವಿಧ ಪ್ರಕರಣಗಳ ಅಡಿಯಲ್ಲಿ 100 ಕ್ಕೂ ಹೆಚ್ಚು ಪಿಎಫ್ಐ ಸದಸ್ಯರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಬಂಧಿಸಿ, ವಿಚಾರಣೆ ನಡೆಸಿತ್ತು. ಅಲ್ಲದೆ, ಎನ್ಐಎ ದಾಳಿಯ ಬೆನ್ನಲ್ಲೇ ಆಯಾ ರಾಜ್ಯದ ಪೊಲೀಸರು ಸಹ ಪಿಎಫ್ಐ ಕಾರ್ಯಕರ್ತರು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ, ವಿಚಾರಣೆಯನ್ನು ನಡೆಸಿತ್ತು.
ಸೆ. 22ರ ಗುರುವಾರದಂದು ನಡೆದ ದಾಳಿಯು ಇದುವರೆಗಿನ ಅತಿ ದೊಡ್ಡ ತನಿಖಾ ದಾಳಿಯಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ನಿಷೇಧಿತ ಸಂಘಟನೆಗಳ ಮೇಲಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿತ್ತು.
ದಾಳಿಯ ಬಳಿಕ ಕೇರಳದಲ್ಲಿ ಪಿಎಫ್ಐ ಕಾರ್ಯಕರ್ತರು ಒಂದು ದಿನದ ಬಂದ್ಗೆ ಕರೆ ನೀಡಿ, ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಆದರೆ, ಆ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿ, ಅನೇಕ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದಲ್ಲದೆ, ಜನರಿಗೆ ತೀವ್ರ ತೊಂದರೆಯಾಯಿತು. ಇದರ ಬೆನ್ನಲ್ಲೇ ಕೇರಳ ಹೈಕೋರ್ಟ್ ಪಿಎಫ್ಐ ಸಂಘಟನೆ ಮೇಲೆ ಗರಂ ಆಗಿ ಯಾವುದೇ ಬಂದ್ ಮಾಡದಂತೆ ಮತ್ತು ಹಿಂಸಾತ್ಮಕವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿತು.
ಕೇರಳದ ಘಟನೆ ನಡೆದ ಎರಡು ದಿನದ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜ್ಯ ಪೊಲೀಸರು ಮುಂಜಾಗ್ರತ ಕ್ರಮವಾಗಿ ರಾಜ್ಯದ ಹಲವೆಡೆ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ, ಸುಮಾರು 40 ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಮೊದಲ ಬಾರಿಗೆ ಎನ್ಐಎ ದಾಳಿ ನಡೆಸಿತ್ತು. ಎನ್ಐಎ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ರಾಜ್ಯ ಪೊಲೀಸರು ದಾಳಿ ನಡೆಸಿದರು. ಎನ್ಐಎ ದಾಳಿ ವಿರೋಧಿಸಿ, ಪ್ರತಿಭಟನೆ ಮಾಡಿ, ಆ ಪ್ರತಿಭಟನೆಯನ್ನು ವಿದ್ವಂಸಕ ಕೃತ್ಯಕ್ಕೆ ತಿರುಗಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳು ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ದಾಳಿ ಮಾಡಿ ಕೆಲವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಕೇಂದ್ರ ಸರ್ಕಾರ ಸಂಘಟನೆಯನ್ನೇ 5 ವರ್ಷಗಳ ಕಾಲ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. (ಏಜೆನ್ಸೀಸ್)