ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವ ದೇವಸ್ಥಾನಗಳ ಶಾಸ್ತ್ರ, ಸಂಪ್ರದಾಯ, ಪದ್ದತಿಗಳ ಸಂರಕ್ಷಣೆ ಮಾಡಿ ! – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಗೆ ಮನವಿ – ಕಹಳೆ ನ್ಯೂಸ್
ಬೆಂಗಳೂರು : ಹಿಂದೂ ದೇವಸ್ಥಾನದಲ್ಲಿ ಸಂಪ್ರದಾಯ ಮತ್ತು ಪದ್ದತಿಯನ್ನು ನಿಲ್ಲಿಸುವ ಷಡ್ಯಂತ್ರದ ವಿರುದ್ಧ ಇಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ. ಕಪಿಲ್ ಮೋಹನ್ ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ನ್ಯಾಯವಾದಿ ತ್ಯಾಗರಾಜ, ವಕೀಲೆ ಶುಭಾ ನಾಯ್ಕ, ಶ್ರೀ. ಉಮೇಶ ಶರ್ಮಾ ಗುರುಜಿ ಮುಂತಾದವರು ಉಪಸ್ಥಿತರಿದ್ದರು.
ಮನವಿಯಲ್ಲಿ ಇತ್ತಿಚೆಗೆ ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟವು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕುಕ್ಕೆ ಸುಬ್ರಮಣ್ಯ ದೇವಸ್ಥಾನಗಳಲ್ಲಿ ದರ್ಶನದ ಸಂದರ್ಭದಲ್ಲಿ ಪುರುಷರು ಶರ್ಟ್ ಮತ್ತು ಬನಿಯನ್ ತೆಗೆಯುವ ಫಲಕದ ಬಗ್ಗೆ ಆಕ್ಷೇಪವನ್ನು ವ್ಯಕ್ತ ಮಾಡಿ, ಫಲಕವನ್ನು ತೆಗೆದುಹಾಕಬೇಕೆಂದು ಮನವಿ ಮಾಡಿರುವುದು ಗಮನಕ್ಕೆ ಬಂದಿದೆ. ಈ ಆಕ್ಷೇಪವು ಅತ್ಯಂತ ಖಂಡನೀಯವಾಗಿದೆ ಮತ್ತು ಇದೊಂದು ಹಿಂದೂ ಸಂಪ್ರದಾಯ, ಪದ್ದತಿ ಮತ್ತು ದೇವಸ್ಥಾನದ ಪಾವಿತ್ರ್ಯತೆಯನ್ನು ನಾಶ ಮಾಡುವ ಷಡ್ಯಂತ್ರವಾಗಿದೆ. ಯಾವುದೇ ಕಾರಣಕ್ಕೂ ಇಂತಹ ಧರ್ಮವಿರೋಧಿ ಮನವಿಗೆ ಮಾನ್ಯತೆ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹ ಮಾಡಿದೆ.
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಅಡಿಯಲ್ಲಿ ೩೪ ಸಾವಿರಕ್ಕೂ ಅಧಿಕ ದೇವಸ್ಥಾನಗಳಿದ್ದು, ಅದರಲ್ಲಿ ಬೆರಳೆಣಿಕೆಯಷ್ಟು ತಾಂತ್ರಿಕ ಆಗಮಶಾಸ್ತ್ರದಂತೆ ಕಟ್ಟುನಿಟ್ಟಾಗಿ ಪೂಜೆಯು ನಡೆಯುವ ಜಾಗೃತ ಶಕ್ತಿ ಪೀಠದ ಪ್ರಾಚೀನ ದೇವಸ್ಥಾನಗಳಿವೆ. ಅಂತಹ ದೇವಸ್ಥಾನಗಳಲ್ಲಿ ಮಾತ್ರ, ಭಕ್ತರು ದೇವರ ದರ್ಶನ ಪಡೆಯುವಾಗ ಪುರುಷರು ಶರ್ಟ್ ಮತ್ತು ಬನಿಯನ್ ತೆಗೆದು ಶಲ್ಯ ಧರಿಸಬೇಕೆಂದು ಸಂಪ್ರದಾಯವಿದೆ. ಅನೇಕ ಶತಮಾನಗಳಿಂದ ಈ ಸಂಪ್ರದಾಯ, ರೂಢಿ, ಪದ್ದತಿಗಳು ನಡೆದುಕೊಂಡು ಬಂದಿದೆ. ಇದುವರೆಗೆ ಈ ಪದ್ದತಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಕೊಟ್ಯಾಂತರ ಭಕ್ತರು ಪಾಲನೆ ಮಾಡಿಕೊಂಡು ಬಂದಿದ್ದಾರೆ. ಇದುವರೆಗೆ ಯಾರಿಗೂ ಇದರಿಂದ ಅಡಚಣೆ ಆಗಿಲ್ಲ ಮತ್ತು ಯಾರು ಸಹ ಆಕ್ಷೇಪವನ್ನು ವ್ಯಕ್ತ ಮಾಡಿಲ್ಲ. ಪರಶುರಾಮ ಸೃಷ್ಟಿಯ ತುಳುನಾಡಿದ ಈ ದೇವಸ್ಥಾನಗಳನ್ನು ಆದಿಶಂಕರಾಚಾರ್ಯರಂತಹ ಮಹಾನ್ ಯತಿವರ್ಯರು ಅವರ ಕಾಲದಲ್ಲಿ ಸ್ಥಾಪನೆಯನ್ನು ಮಾಡಿದ್ದಾರೆ ಮತ್ತು ಅವರು ಆ ಸಮಯದಲ್ಲಿಯೇ ಅರ್ಚಕರಿಗೆ ದೇವರಿಗೆ ಹೇಗೆ ಪೂಜೆ ಮಾಡಬೇಕು ?, ಪೂಜೆ ಮಾಡುವ ಅರ್ಚಕರಿಗೆ ಯಾವ ಉಡುಪು ಧರಿಸಬೇಕು ? ಅದೇ ರೀತಿಯಲ್ಲಿ ದೇವರ ದರ್ಶನ ಪಡೆಯುವ ಭಕ್ತರಿಗೂ ಸಹ ದೇವರ ದರ್ಶನದ ಕೆಲವು ನಿಯಮಗಳನ್ನು ಮಾಡಲಾಗಿದೆ. ಇದರ ಪಾಲನೆಯನ್ನು ದೇವಸ್ಥಾನದ ಪಾವಿತ್ರ್ಯವನ್ನು ಸಂರಕ್ಷಣೆ ಮಾಡುವ ದೃಷ್ಟಿಯಿಂದ ಮತ್ತು ಭಕ್ತರ ಆಧ್ಯಾತ್ಮಿಕ ಪ್ರಗತಿ, ಅಲೌಕಿಕ, ಲೌಕಿಕ ಉನ್ನತಿ ದೃಷ್ಟಿಯಿಂದ ಮಾಡಲಾಗಿದೆ. ಇದನ್ನು ಯಾವುದೇ ಜಾತಿಭೇದವಿಲ್ಲದೇ, ಬಡವ-ಶ್ರೀಮಂತ ಎನ್ನುವ ವ್ಯತ್ಯಾಸವಿಲ್ಲದೇ ಚಾಚು ತಪ್ಪದೇ ಪಾಲನೆ ಮಾಡಿಕೊಂಡು ಬರಲಾಗಿದೆ. ಇಂದಿಗೂ ಸಹ ಇಂತಹ ವಿಶೇಷ ದೇವಸ್ಥಾನಗಳು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದಕ್ಷಿಣ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ. ಅದರ ಸಂಪ್ರದಾಯವನ್ನು ಪ್ರತಿಯೊಬ್ಬ ಆಸ್ತಿಕ ಭಕ್ತನು ಶ್ರದ್ಧೆಯಿಂದ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಆದರೆ ಕೆಲವು ಬುದ್ದಿ ಜೀವಿಗಳು ದೇವಸ್ಥಾನದಲ್ಲಿ ಅಂಗಿ ಬನಿಯನ್ ತೆಗೆದರೆ ಚರ್ಮರೋಗ ಹರಡುತ್ತದೆ ಎಂದು ಅರ್ಥಹೀನ ಬೇಡಿಕೆಯನ್ನು ಮಾಡುವುದು ದೇವಸ್ಥಾನದ ಸಂಪ್ರದಾಯವನ್ನು ನಾಶ ಮಾಡಲು ಮಾಡುತ್ತಿರುವ ಷಡ್ಯಂತ್ರವಾಗಿದೆ. ಇಂದು ಶರ್ಟ ಧರಿಸಲು ಅವಕಾಶ ಕೇಳುವವರು, ನಾಳೆ ಕಾಲು ಊತವಾಗಿದೆ ಶೂ ಧರಿಸಿ ದೇವರ ದರ್ಶನಕ್ಕೆ ಬೇಡಿಕೆಯನ್ನು ನೀಡಬಹುದು. ನಿಜವಾಗಿ ಚರ್ಮರೋಗ ಇರುವವರು ದೇವಸ್ಥಾನಕ್ಕೆ ಬಂದರೆ ಅವರು ಅಂಗಿ ಬನಿಯನ್ ತೆಗೆದು, ಶರೀರ ಪೂರ್ಣ ಶಲ್ಯ ಧರಿಸಿ, ದೇವರ ದರ್ಶನ ಪಡೆದು ದೇವಸ್ಥಾನದ ಸಂಪ್ರದಾಯವನ್ನು ಪಾಲನೆ ಮಾಡಬಹುದು ಮತ್ತು ಈಗಾಗಲೇ ಅನೇಕರು ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಆ ರೋಗದ ವಿರುದ್ಧ ಹೋರಾಡಲು ಆಧ್ಯಾತ್ಮಿಕ ಶಕ್ತಿಯು ಸಿಗುವುದು. ಕೊಟ್ಯಾಂತರ ಹಿಂದೂಗಳು ಕುಂಭಮೇಳದಲ್ಲಿ ಅಂಗಿ ಬನಿಯನ್ ತೆಗೆದು ಒಂದೇ ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದುವರೆಗೆ ಚರ್ಮರೋಗ ಬಂದ ಒಂದೇ ಒಂದು ಉದಾಹರಣೆಯಿಲ್ಲ. ಮುಸಲ್ಮಾನರು ಮೊಹರಂ ಸಂದರ್ಭದಲ್ಲಿ ಅಂಗಿ ಬನಿಯನ್ ತೆಗೆದು ರಕ್ತಸ್ರಾವವಾಗುವ ಹಾಗೆ ಮಾರಕಾಸ್ತ್ರಗಳಿಂದ ಬಡಿದುಕೊಳ್ಳುವ ಸಂಪ್ರದಾಯವಿದೆ ಆದರೆ ಇದರ ಬಗ್ಗೆ ಯಾರೂ ಸಹ ಚಕಾರ ಎತ್ತುವುದಿಲ್ಲ. ಇಂದು ಶಾಲೆ, ಪೊಲೀಸ್ ಇಲಾಖೆ, ನ್ಯಾಯಾಲಯ ಹೀಗೆ ಎಲ್ಲ ಕಡೆಗಳಲ್ಲಿ ವಸ್ತ್ರ ಸಂಹಿತೆ ಇರುವಾಗ ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ನಮ್ಮ ಭವರೋಗವನ್ನು ಗುಣಪಡಿಸುವ, ಸರ್ವ ಶಕ್ತಿಮಾನ ಭಗವಂತನ ಸನ್ನಿಧಾನಕ್ಕೆ ಸಹ ವಸ್ತ್ರಸಂಹಿತೆ ಇದ್ದರೆ ತಪ್ಪೇನು ? ಅದು ಭಕ್ತರ ಶ್ರದ್ಧೆ, ಅವರ ಧಾರ್ಮಿಕ ಭಾವನೆಯಾಗಿದೆ. ಭಕ್ತರ ಧಾರ್ಮಿಕ ಭಾವನೆ, ಸ್ಥಳೀಯ ರೂಢಿ ಸಂಪ್ರದಾಯಗಳನ್ನು ಸಂರಕ್ಷಣೆ ಮಾಡಬೇಕೆಂದು ಭಾರತದ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೆ ಭರವಸೆಯನ್ನು ನೀಡುತ್ತದೆ. ಹಿಂದೂ ಸಂಪ್ರದಾಯದ ರೂಢಿ, ಸಂಪ್ರದಾಯ ಮುರಿಯುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದಂತಾಗುವುದು. ಈಗಾಗಲೇ ಕಾಲಗರ್ಭದಲ್ಲಿ ಅನೇಕ ಹಿಂದೂ ಸಂಪ್ರದಾಯಗಳು ನಶಿಸಿ ಹೋಗಿದೆ. ಉಳಿದ ಸಂಪ್ರದಾಯ, ಪದ್ದತಿಗಳನ್ನು ನಾಶ ಮಾಡಿ, ಹಿಂದೂ ಧರ್ಮವನ್ನು ಮುಗಿಸುವ ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹ ಮಾಡುತ್ತದೆ. ಒಂದೊಮ್ಮೆ ಅದಕ್ಕೆ ಅವಕಾಶ ನೀಡಿದರೆ ಅದಕ್ಕೆ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.