ನವ ದೆಹಲಿ: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಿದೆ. ಇದೀಗ ಈ ಸಂಘಟನೆಗಳ ಟ್ವಿಟರ್ ಖಾತೆಯನ್ನು ತಡೆಹಿಡಿಯಲು ನಿರ್ಧರಿಸಿದೆ. ಜತೆಗೆ ಇನ್‌ಸ್ಟಾಗ್ರಾಂ ಹಾಗೂ ಫೇಸ್ಬುಕ್ ಖಾತೆಗೂ ನಿರ್ಬಂಧ ಹೇರಲಾಗಿದೆ.
ಹೌದು… ಈ ಸಂಘಟನೆಯನ್ನು ನಿನ್ನೆ ನಿಷೇಧಗೊಳಿಸಿದ ಬೆನ್ನಲ್ಲೇ ಇದಕ್ಕೆ ಸೇರಿದ ಫೇಸ್’ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬ್ಲಾಕ್ ಮಾಡಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಮಾಹಿತಿ ಹರಡುವುದು ಹಾಗೂ ಆ ಮೂಲಕ ಸಮಾಜ ಶಾಂತಿ ಕದಡುವ ಯತ್ನದ ಹಿನ್ನೆಲೆಯಲ್ಲಿ ಮತ್ತು ಸಂಘಟನೆಯೇ ನಿಷೇಧಗೊಂಡಿರುವ ಕಾರಣ ಇದರ ಎಲ್ಲ ರೀತಿಯ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬ್ಲಾಕ್ ಮಾಡಿ, ತನಿಖೆ ನಡೆಸಲಾಗುತ್ತಿದೆ.
ಪಿಎಫ್ಐ ಸಂಘಟನೆ @PFIofficial ಹೆಸರಿನಲ್ಲಿ ಟ್ವಿಟರ್ ಖಾತೆಯ ಮೂಲಕ 81,000 ಫಾಲೋವರ್ಸ್ಗಳನ್ನು ಹೊಂದಿತ್ತು. ಅಧಿಕೃತ ಖಾತೆಯ ಜೊತೆಗೆ ಸಂಘಟನೆಯ ಅಧ್ಯಕ್ಷ OMA Salam (@oma_salam), ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ (@AnisPFI), ಅವರ ಖಾತೆಯನ್ನು ತಡೆಹಿಡಿಯಲಾಗುತ್ತಿದೆ.
ಕೇಂದ್ರ ಸರ್ಕಾರ ಪಿಎಫ್ಐನ್ನು ಬ್ಯಾನ್ ಮಾಡಿದ ಒಂದು ದಿನದ ಅಂತರದಲ್ಲಿ, ಅದರ ಸಾಮಾಜಿಕ ಜಾಲತಾಣದ ಖಾತೆಗಳಿಗೂ ನಿರ್ಬಂಧ ವಿಧಿಸುವ ಕೆಲಸ ನಡೆದಿದೆ. ಭಯೋತ್ಪಾದನಾ ಚಟುವಟಿಕೆಗಳ ಜತೆಗೆ ಸಂಬಂಧ ಹೊಂದಿತ್ತು ಎಂಬ ಕಾರಣಕ್ಕೆ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ