ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜ್ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರುಗೊಂಡ ಸ್ಥಳದ ಸರ್ವೇ ಕಾರ್ಯ – ಕಹಳೆ ನ್ಯೂಸ್
ಮಂಗಳೂರು : ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜ್ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರುಗೊಂಡ ಸ್ಥಳದ ಸರ್ವೇ ಕಾರ್ಯವು ಇತ್ತೀಚಿಗೆ ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ ನಡೆಯಿತು. ಸುಮಾರು 24.40 ಎಕರೆ ಪ್ರದೇಶದಲ್ಲಿ ವಿ.ವಿ ಪದವಿ ಕಾಲೇಜ್, ಸ್ನಾತಕೋತ್ತರ ಪದವಿ, ಬಿ.ಎಡ್ ಹಾಗೂ ಎಂ. ಎಡ್ ಕೋರ್ಸ್ ಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಸಂಪೂರ್ಣ ಮೂಲಸೌಕರ್ಯವುಳ್ಳ ಸುಸಜ್ಜಿತ ಕ್ಯಾಂಪಸ್ ನಿರ್ಮಿಸುವ ಉದ್ದೇಶದಿಂದ ವಿಶಾಲವಾದ ಜಾಗವು ಜಿಲ್ಲಾಡಳಿತದಿಂದ ಮಂಜೂರುಗೊಂಡಿದ್ದು ಪ್ರಾಥಮಿಕ ಹಂತದ ಸರ್ವೇ ಕಾರ್ಯವು ಕಡಬ ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
ಸಂಪೂರ್ಣ ಗ್ರಾಮೀಣ ಪ್ರದೇಶವಾದ ನೆಲ್ಯಾಡಿಯ ಈ ಪರಿಸರದಲ್ಲಿ ಉನ್ನತ ಶಿಕ್ಷಣ ಕೇಂದ್ರಗಳು ಸೇರಿದಂತೆ ಸುಸಜ್ಜಿತ ಕ್ಯಾಂಪಸ್ ಆರಂಭಗೊಳ್ಳುವುದು ಈ ಭಾಗದ ಉನ್ನತ ಶಿಕ್ಷಣದ ಕನಸನ್ನು ಹೊತ್ತ ಬಡ, ಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಒಂದು ಆಶಾಕಿರಣವಾಗಿ ಗೋಚರಿಸಲಿದೆ. ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ವಿಶ್ವವಿದ್ಯಾನಿಲಯ ಕಾಲೇಜ್ ಗಳಲ್ಲಿ ಭೋಧಿಸಲಾಗುತ್ತಿದ್ದು ನಿಯಮಿತ ಭೋಧನ ಶುಲ್ಕದೊಂದಿಗೆ ಪರಿಪೂರ್ಣ ಶಿಕ್ಷಣವನ್ನು ಪಡೆಯುವ ಅವಕಾಶವೂ ಇದೆ.
ಸರ್ವೇ ಕಾರ್ಯ ಸಂಧರ್ಭದಲ್ಲಿ ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಉಪ ರಿಜಿಸ್ಟ್ರೇರ್ ಹಾಗೂ ಎಸ್ಟೇಟ್ ಆಫೀಸರ್ ಶ್ರೀ ಹುಕ್ರಪ್ಪ ನಾಯ್ಕ್, ವಿ.ವಿ ಆಡಳಿತ ಸಂಯೋಜನಾಧಿಕಾರಿ ಶ್ರೀ ನವೀನ್ ರಾಜ್ ಬೆದ್ರೂಡಿ, ನೆಲ್ಯಾಡಿ ಘಟಕ ಕಾಲೇಜ್ ಪ್ರಿನ್ಸಿಪಾಲ್ ಡಾ.ಜಯರಾಜ್, ವಿ. ವಿ ಹಿರಿಯ ಶ್ರೇಣಿ ಅಧಿಕಾರಿ ಶ್ರೀ ನಾಗರಾಜ್, ವಿ.ವಿ ಘಟಕದ ಕಿರಿಯ ಅಭಿಯಂತರರು ಶ್ರೀ ದಿನೇಶ್ ಕುಮಾರ್, ಶ್ರೀ ದಿಲೀಪ್, ನೆಲ್ಯಾಡಿ ಘಟಕ ಕಾಲೇಜ್ ನ ವಿದ್ಯಾರ್ಥಿಗಳು, ಉಪನ್ಯಾಸಕರು, ಭೋಧಕೇತರ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.