Saturday, November 23, 2024
ಸುದ್ದಿ

ಶಿರಾಡಿ ಹೆದ್ದಾರಿ ಬಳಕೆಗೆ ಸಿದ್ಧ ; ಕೇಂದ್ರ ಸಚಿವ ಗಡ್ಕರಿ ಡೈನಾಮಿಕ್ ಮಿನಿಸ್ಟರ್ ಎಂದ ರೇವಣ್ಣ – ಕಹಳೆ ನ್ಯೂಸ್

ಬೆಂಗಳೂರು-ಮಂಗಳೂರು ಸಂಪರ್ಕ ಪ್ರಮುಖ ಕೊಂಡಿಯಾಗಿದ್ದ ಶಿರಾಡಿಯಲ್ಲಿ ಕಾಂಕ್ರೀಟ್ ಪೂಣರ್ಗೊಂಡ 13 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75 ಭಾನುವಾರ ಸಾರ್ವಜನಿಕರ ಬಳಕೆಗೆ ಸಿದ್ಧಗೊಂಡಿದೆ.

ಗುಂಡ್ಯ ಕೆಂಪುಹೊಳೆ ಸೇತುವೆ ಸಮೀಪ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜತೆಯಾಗಿ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಉದ್ಘಾಟನೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಹೆದ್ದಾರಿ ಇಕ್ಕೆಲಗಳ ರಕ್ಷಣಾ ತಡೆಗೋಡೆ, ಇಕ್ಕೆಲಗಳನ್ನು ಸಮತಟ್ಟು ಪಡಿಸುವ ಕಾಮಗಾರಿ ಮತ್ತಿತರ ಸುರಕ್ಷಣಾ ದೃಷ್ಟಿಯ ಕಾರ‌್ಯಕ್ರಮಗಳು ಪೂಣಗೊಳ್ಳದ ಹಿನ್ನೆಲೆಯಲ್ಲಿ ಉದ್ಘಾಟನೆಗೊಂಡ ಈ ಮಾರ್ಗಲ್ಲಿ ಈಗ ಪ್ರಥಮ ಹಂತದಲ್ಲಿ ಕೇವಲ ದ್ವಿಚಕ್ರ, ತ್ರಿಚಕ್ರ, ಟೆಂಪೋ ಟ್ರಾವೆಲರ್, ಮಿನಿ ಬಸ್‌ನಂತಹ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಮುಂದಿನ 15 ದಿನಗಳಲ್ಲಿ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಪೂಣರ್ಗೊಂಡ ಬಳಿಕವಷ್ಟೇ ಬಸ್, ಟ್ಯಾಂಕರ್‌ನಂತಹ ಭಾರಿ ವಾಹನಗಳ ಓಡಾಟಕ್ಕೆ ಅವಕಾಶ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುರಂಗ ಮಾರ್ಗಕ್ಕೆ ಆದ್ಯತೆ: ವಾಹನ ದಟ್ಟಣೆ ತಡೆಗೆ ಶಿರಾಡಿ ಘಾಟ್ ಪ್ರದೇಶದ ಉದನೆಯಿಂದ ಮಾರನಹಳ್ಳಿ ವರೆಗಿನ ಸುರಂಗ ಮಾರ್ಗದ ಈ ಹಿಂದಿನ ನನ್ನದೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗುವುದು. ಅನುಮೋದನೆ ದೊರೆತರೆ ಜಪಾನ್ ತಂತ್ರಜ್ಞಾನದೊಂದಿಗೆ ಸುರಂಗ ಮಾರ್ಗ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಉದ್ಘಾಟನೆ ವೇಳೆ ಸಚಿವ ರೇವಣ್ಣ ಹೇಳಿದರು.
ರಾಜ್ಯದ ಉಳಿದ ಭಾಗವನ್ನು ದ.ಕ ಜಿಲ್ಲೆಯೊಂದಿಗೆ ಬೆಸೆಯುವ ಶಿರಾಡಿ, ಚಾರ್ಮಾಡಿ, ಆಗುಂಬೆ , ಪಾಣಾಜೆ ಘಾಟ್ ರಸ್ತೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಅಧಿಕಾರಿಗೆ ಚುರುಕು ಮುಟ್ಟಿಸಿದ ಸಚಿವ!: ಹಾಸನ- ಮಾರನಹಳ್ಳಿ ಹಾಗೂ ಅಡ್ಡಹೊಳೆ-ಬಿ.ಸಿ ರೋಡ್ ಹೆದ್ದಾರಿ ಚತುಷ್ಪಥ ಕಾಮಗಾರಿಯು ಪ್ರಗತಿಯಲ್ಲಿದೆ. ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ಅರಣ್ಯ, ವಿದ್ಯುತ್ ಹಾಗೂ ಪೂರಕ ಇತರ ಇಲಾಖೆಗಳಿಗೆ ಸ್ಪಷ್ಟ ನಿದೇರ್ಶನ ನೀಡಲಾಗಿದೆ. ಅಗತ್ಯವಿರುವ ಕಡೆ ಮರ ಕಡಿಯಲು ನಿರಾಕ್ಷೇಪಣಾ ಪತ್ರ, ವಿದ್ಯುತ್ ಕಂಬ ಸ್ಥಳಾಂತರಿಸಲು ಒಪ್ಪಿಗೆ ಮುಂತಾದ ಕೆಲಸಗಳನ್ನು ತಿಂಗಳೊಳಗೆ ಮುಗಿಸಬೇಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಎಚ್ಚರಿಸಿದರು.

ಗಡ್ಕರಿ ಡೈನಾಮಿಕ್ ಮಿನಿಸ್ಟರ್ ಎಂದ ರೇವಣ್ಣ:  ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಸಚಿವ ರೇವಣ್ಣ, ಅವರೊಬ್ಬ ಡೈನಾಮಿಕ್ ಮಿನಿಸ್ಟರ್. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ಕೊಡುಗೆ ನೀಡಿದೆ. ನಡೆದಿರುವ ಕೆಲಸಗಳನ್ನು ಹೇಳಲೇ ಬೇಕು. ಇದರಲ್ಲಿ ರಾಜಕೀಯವಿಲ್ಲ ಎಂದರು.

ಕರಾವಳಿಗೆ ಆದ್ಯತೆ: ಸಂಸದ ನಳಿನ್‌ಕುಮಾರ್ ಕಟೀಲು ಹಾಗೂ ದಕ್ಷಿಣಕನ್ನಡ ಹಾಗೂ ಉಡುಪಿಯ ಎಲ್ಲಾ ಶಾಸಕರಿಂದ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ನ ಬೇಡಿಕೆ ಬಂದಿದೆ. ದಕ್ಷಿಣ ಕನ್ನಡ, ಉಡುಪಿ ಕೊಡಗು ಸಹಿತ 5 ಜಿಲ್ಲೆಗಳ 32 ತಾಲೂಕುಗಳ ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿಯನ್ನು ಸ್ಥಳೀಯ ಶಾಸಕರ ಅಪೇಕ್ಷೆಯಂತೆ ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಂಸದ ನಳಿನ್‌ಕುಮಾರ್ ಕಟೀಲು, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಜೇಶ್ ನಾಕ್, ಹಾಸನ ಜಿ.ಪಂ.ಅಧ್ಯಕ್ಷೆ ಭವಾನಿ ರೇವಣ್ಣ, ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.

ವೇದಿಕೆಯಲ್ಲೇ ವಾಗ್ವಾದ: ಹೆದ್ದಾರಿ ಇಲಾಖೆ ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಎಂಬ ಎರಡು ವಿಭಾಗಗಳಲ್ಲಿ ರಾಷ್ಟ್ರ್ರೀಯ ಹೆದ್ದಾರಿ ಇಲಾಖೆ ಒಳಪಡುತ್ತದೆ. ಹೀಗಾಗಿ ರೇವಣ್ಣರವರ ಮೇಲಿನ ಹೊಣೆಗಿಂತ ಸಂಸದರ ಮೇಲಿನ ಹೊಣೆ ಪ್ರಮುಖವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ವಿವರಿಸುತ್ತಿದ್ದಂತೆಯೇ ಸಂಸದ ನಳಿನ್ ಇಲ್ಲೇಕೆ ರಾಜಕೀಯ ? ಎಂದು ಪ್ರಶ್ನಿಸಿ ನಗುತ್ತಲೇ ರೈಯವರನ್ನು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಸಭೆ ಅನಪೇಕ್ಷಿತ ವಿದ್ಯಮಾನಕ್ಕೆ ಸಾಕ್ಷಿಯಾಗುವ ಲಕ್ಷಣ ಗೋಚರಿಸುತ್ತಿದ್ದಂತೆಯೇ ಸಚಿವ ರೇವಣ್ಣ ಸಂಸದ ನಳಿನ್ ಅವರನ್ನು ಸಮಾಧಾನಪಡಿಸಿದರು. ತನ್ನ ಮಾತಿನ ಪಟ್ಟು ಬಿಡದ ರೈ ‘ನಿಜ ನುಡಿದಾಗ ಕೆಲವರಿಗೆ ಸಹಿಸಲಾಗುವುದಿಲ’್ಲವೆಂದು ಮತ್ತಷ್ಟು ಚುಚ್ಚಲು ಪ್ರಯತ್ನಿಸಿದರು. ಮತ್ತೆ ತನ್ನ ಭಾಷಣದ ಅವಧಿಯಲ್ಲಿ ಸಚಿವ ರೇವಣ್ಣ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ , ರಾಜ್ಯ ಸರ್ಕಾರದ ಸಹಕಾರವಿಲ್ಲದಿದ್ದರೆ ಏನೂ ಮಾಡಲಾಗದು. ಹೀಗಾಗಿ ಅಭಿವೃದ್ಧಿ ಕಾರ್ಯಕ್ಕೆ ಕೇವಲ ಸಂಸದರನ್ನು ಹೊಣೆಯಾಗಿಸುವುದು ಬೇಡ ಎಂದು ನಳಿನ್‌ರನ್ನು ಸಮಾಧಾನ ಪಡಿಸಿದರು.

ಸಾಲುಗಟ್ಟಿ ನಿಂತ ವಾಹನಗಳು: ಭಾನುವಾರವೇ ಶಿರಾಡಿಘಾಟ್ ಪುನರಾರಂಭವಾಗುವುದೆಂಬ ಮಾಧ್ಯಮ ವರದಿಯನ್ನು ನೋಡಿ ನೂರಾರು ವಾಹನಗಳು ಗುಂಡ್ಯ ಹಾಗೂ ಕೆಂಪು ಹೊಳೆ ಬಳಿ ಜಮಾಯಿಸಿದ್ದವು. ಮುಂಜಾನೆಯಿಂದಲೇ ವಾಹನಗಳು ನಿಲ್ಲಲು ಆರಂಭಿಸಿದ್ದು, ಕ್ಯೂ ಬೆಳೆಯುತ್ತಲೇ ಇತ್ತು. ವೇದಿಕೆ ಬೇರೆ ಹೆದ್ದಾರಿ ನಡುವೆಯೇ ನಿರ್ಮಿಸಲಾಗಿತ್ತು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಪೊಲೀಸ್ ಅಧಿಕಾರಿಗಳು ಉಭಯ ದಿಕ್ಕಿನ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ನಡೆಸುತ್ತಿರುವ ದೃಶ್ಯ ಕಂಡುಬಂತು. ಸಂಜೆ ನಾಲ್ಕರ ವರೆಗೂ ವಾಹನಗಳ ಗುಂಡ್ಯ ಗೇಟ್ ಬಳಿ ಜಮಾಯಿಸಿದ್ದವು.

ಗುತ್ತಿಗೆದಾರರಿಗೆ ಸನ್ಮಾನಿಸಲು ನಕಾರ:  ಕಾಂಕ್ರೀಟ್ ಕಾಮಗಾರಿಯ ಗುತ್ತಿಗೆದಾರರನ್ನು ಸನ್ಮಾನಿಸಲು ಸಚಿವ ರೇವಣ್ಣ ನಿರಾಕರಿಸಿದರು. ಗುತ್ತಿಗೆದಾರರಿಗೆ ಸನ್ಮಾನ ಮಾಡುವ ಸಂಪ್ರದಾಯ ನಾನು ಇಟ್ಟುಕೊಂಡಿಲ್ಲ ಎಂದವರು ಹೇಳಿದರು. ಬಳಿಕ ಗುತ್ತಿಗೆದಾರರಿಗೆ ಸಚಿವ ಯು.ಟಿ.ಖಾದರ್ ಸನ್ಮಾನಿಸಿದರು. ಆದರೆ , ನಿಗದಿತ ಅವಧಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಳಿಸಿದ ಓಶಿಯನ್ ಕನ್‌ಸ್ಟ್ರಕ್ಷನ್ ಕಾರ್ಯಶೈಲಿಗೆ ಸಚಿವ ರೇವಣ್ಣ ಸಹಿತ ಎಲ್ಲ ಜನಪ್ರತಿನಿಧಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ಸಿಸಿ ಕ್ಯಾಮರಾ ಚಿಂತನೆ: ಮಂಗಳೂರು: ಕಾಂಕ್ರೀಟ್ ಕಾಮಗಾರಿ ಉದ್ಘಾಟನೆಗೊಂಡ ಶಿರಾಡಿ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ತನಕ ವೇಗಮಿತಿಯನ್ನು ಗಂಟೆಗೆ 60 ಕಿ.ಮೀ. ನಿಗದಿಪಡಿಸಲಾಗಿದೆ. ಈ ಬಗ್ಗೆ ವಾಹನ ಚಾಲಕರ ಮೇಲೆ ಕಣ್ಣಿಡಲು ಸಾಧ್ಯವಾಗುವಂತೆ ನಿರ್ದಿಷ್ಟ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಲಾಗಿದೆ ಭಾನುವಾರ ಸಾಯಂಕಾಲ ನಿರೀಕ್ಷಣಾ ಬಂಗಲೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವರದಿ : ಗಣೇಶ್ ಪದ್ಮುಂಜ
ಚಿತ್ರ : ಅಪುಲ್ ಆಳ್ವಾ ಇರಾ / ಕಹಳೆ ನ್ಯೂಸ್