Recent Posts

Monday, November 25, 2024
ಸುದ್ದಿ

ಉಚ್ಚಿಲ ದಸರಾ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ – ಕಹಳೆ ನ್ಯೂಸ್

ಉಡುಪಿ : ಕಳೆದ ಸೆ. 26ರಿಂದ ಆರಂಭಗೊಂಡ ಸಂಭ್ರಮದ ಉಚ್ಚಿಲ ದಸರಾ ಉತ್ಸವದ ಸಮಾರೋಪ ಮತ್ತು ವೈಭವದ ಶೋಭಾಯಾತ್ರೆ ಅ. 5ರಂದು ನಡೆಯಲಿದ್ದು, 100ಕ್ಕೂ ಅಧಿಕ ಟ್ಯಾಬ್ಲೊಗಳನ್ನೊಳಗೊಂಡು ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಡುವ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶೋಭಾಯಾತ್ರೆ ಎರ್ಮಾಳು- ಪಡುಬಿದ್ರಿ- ಹೆಜಮಾಡಿ ಟೋಲ್ ಗೇಟ್ ಪಡುಬಿದ್ರಿ- ಎರ್ಮಾಳು- ಉಚ್ಚಿಲ- ಮೂಳೂರು ಮೂಲಕ ಸಾಗಿ ಕಾಪು ಬೀಚ್ ತಲುಪಲಿದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಮುಂಭಾಗದಲ್ಲಿ ಸಂಜೆ 4.30ಕ್ಕೆ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ವಾಹನ ಮತ್ತು ಟ್ಯಾಬ್ಲೊಗಳೊಂದಿಗೆ ಸಾಗುವ ಶೋಭಾಯಾತ್ರೆ ಸಂಜೆ 6 ಗಂಟೆಗೆ ಹೆಜಮಾಡಿ ಟೋಲ್ ಗೇಟ್, ರಾತ್ರಿ 9 ಗಂಟೆಗೆ ಕೊಪ್ಪಲಂಗಡಿ ತಲುಪಿ ಅಲ್ಲಿಂದ ನಿರ್ದಿಷ್ಟ ಟ್ಯಾಬ್ಲೊಗಳೊಂದಿಗೆ ಹುಲಿವೇಷ ಸಹಿತ ವಿವಿಧ ವೇಷಧಾರಿಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಇಸ್ಕಾನ್ ಭಜನಾ ತಂಡಗಳೊಂದಿಗೆ ಕಾಲ್ನಡಿಗೆ ಮೂಲಕ ರಾತ್ರಿ 10.30ಕ್ಕೆ ಕಾಪು ಬೀಚ್ ತಲುಪಲಿದೆ.

ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಉಚ್ಚಿಲ ದಸರಾ ಮಹೋತ್ಸವವನ್ನು ವಿಶಿಷ್ಟವಾಗಿಸುವ ನಿಟ್ಟಿನಲ್ಲಿ ಶೋಭಾಯಾತ್ರೆಯ ಆರಂಭದಲ್ಲಿ ಸಂಜೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರಿಗೆ ಪುಷ್ಪವೃಷ್ಟಿ ನಡೆಯಲಿದ್ದು, ಇದು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್, ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್ ತಿಳಿಸಿದ್ದಾರೆ.

ಗಂಗಾರತಿ, ಸಾಮೂಹಿಕ ಮಂಗಳಾರತಿ ಕಾಪು ಬೀಚ್ ಬಳಿ ಕಾಶಿ ಗಂಗಾ ತಟದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಬೃಹತ್ ರಥಾರತಿ ಮತ್ತು ಧೂಪಾರತಿ ನಡೆಯಲಿದೆ. ಸುಮಾರು 10 ಸಾವಿರಕ್ಕೂ ಅಧಿಕ ಮಹಿಳೆಯರಿಂದ ಸಾಮೂಹಿಕ ಮಂಗಳಾರತಿ ನಡೆಯಲಿದ್ದು, ಮಧ್ಯರಾತ್ರಿ 12 ಗಂಟೆಗೆ ಸಮುದ್ರ ಮಧ್ಯದಲ್ಲಿ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ವಿಗ್ರಹ ಜಲಸ್ತಂಭನ ನಡೆಯಲಿದೆ.

ಸಮುದ್ರದಲ್ಲಿ ಬೃಹತ್ ಪರ್ಸಿನ್ ಬೋಟ್ ಗಳ ಪ್ರಖರ ಬೆಳಕು ಝಗಮಗಿಸಲಿದೆ. ಅದಕ್ಕಾಗಿ 30ಕ್ಕೂ ಅಧಿಕ ಬೋಟ್ ಗಳನ್ನು ಸಜ್ಜುಗೊಳಿಸಲಾಗಿದೆ. ಅತ್ಯಾಧುನಿಕ ಯಾಂತ್ರಿಕ ಬೋಟ್ ಗಳ ಮೂಲಕ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಲಕ್ಷಾಂತರ ಮಂದಿ ಭಕ್ತರ ಸಮ್ಮುಖ ಜಲಸ್ತಂಭನಗೊಳಿಸಲು ಸಕಲ ವ್ಯವಸ್ಥೆಗಳನ್ನೂ ಸಜ್ಜುಗೊಳಿಸಲಾಗಿದೆ.

ರಸಮಂಜರಿ, ಹುಲಿಕುಣಿತ ಶೋಭಾಯಾತ್ರೆ ಸಾಗಿ ಬರುವ ಹೆಜಮಾಡಿ, ಪಡುಬಿದ್ರಿ, ಉಚ್ಚಿಲ, ಕೊಪ್ಪಲಂಗಡಿ ಹೆದ್ದಾರಿ ಬದಿ ಹಾಗೂ ಕಾಪು ಬೀಚ್ ನಲ್ಲಿ ಸಂಗೀತ ರಸಮಂಜರಿ ಮತ್ತು ಹುಲಿವೇಷ ಕುಣಿತ ನಡೆಯಲಿದೆ.

ಗಣ್ಯರ ಉಪಸ್ಥಿತಿ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲು, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸುಕುಮಾರ್ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮತ್ತಿತರರು ಉಪಸ್ಥಿತರಿರುವರು.

ಅವಿಭಜಿತ ದ.ಕ. ಜಿಲ್ಲೆ ಮಾತ್ರವಲ್ಲೇ ನೆರೆಯ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಇತ್ಯಾದಿಗಳು ಮಾತ್ರವಲ್ಲೇ ಹೊರ ರಾಜ್ಯಗಳ ಸುಮಾರು 3 ಲಕ್ಷ ಮಂದಿ ಭಕ್ತಾದಿಗಳು ಹಾಗೂ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ.

ಕೋಟಿ ಕುಂಕುಮಾರ್ಚನೆ ಸಂಪನ್ನ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜೆ ಸಹಿತ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ನಿರಂತರ ಭಜನಾ ಕಾರ್ಯಕ್ರಮ, ಸಂಜೆ ಸಹಸ್ರ ಸುಮಂಗಲೆಯಯರಿಂದ ಕುಂಕುಮಾರ್ಚನೆ, ಮಹಾಪೂಜೆ, ಶ್ರೀಸರಸ್ವತಿ ಕಲ್ಪೋಕ್ತ ಪೂಜೆ, ಪ್ರಸಾದ ವಿತರಣೆ, ಭರತನಾಟ್ಯ, ಜಾನಪದ ನೃತ್ಯ ಸಹಿತ ವಿವಿಧ ನೃತ್ಯ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನ ಭೂತೋ ಎಂಬಂತೆ ನಡೆಯಿತು.

ಸಹಸ್ರಾರು ಮಂದಿ ಸುಮಂಗಲೆಯರಿಂದ ಸೆ. 26ರಿಂದ ಅ. 4ರ ವರೆಗೆ 9 ದಿನಗಳಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನಿಗೆ ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಕುಂಕುಮಾರ್ಚನೆ ನೆರವೇರಿಸಲಾಗಿದೆ.