ದಕ್ಷಿಣ ಕನ್ನಡ : ಜಿಲ್ಲೆಯ ಪುತ್ತೂರಿನಲ್ಲಿ ಐ.ಆರ್.ಸಿ.ಎಂ.ಡಿ ಎಜುಕೇಷನ್ ಸೆಂಟರ್ ಎಂಬ ಹೆಸರಿನ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿ ಕೊಡುವುದರಲ್ಲಿ ಸಂಚಲನ ಮೂಡಿಸಿರುವ ಈ ಪ್ರತಿಷ್ಠಿತ ವಿದ್ಯಾಸಂಸ್ಥೆಯು ಇದೀಗ ಮತ್ತೊಮ್ಮೆ ಕೇವಲ ಒಂದೇ ದಿನದಲ್ಲಿ ನೂರಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕಿಸಿಕೊಡುವುದರಲ್ಲಿ ಸಫಲವಾಗಿದೆ.
ಐ.ಆರ್.ಸಿ.ಎಂ.ಡಿ ಉದ್ಯೋಗ ಮೇಳ-2018 ಇದರ ಉದ್ಘಾಟನಾ ಸಮಾರಂಭವು ದಿನಾಂಕ 14-07-2018ರಂದು ನಡೆಯಿತು. ಮಹಿಳಾ ಪ್ರಥಮ ದರ್ಜೆ ಕಾಲೇಜು ಪುತ್ತೂರು ಇದರ ಪ್ರಾಂಶುಪಾಲರಾದ ಪ್ರೊ| ಝೇವಿಯರ್ ಡಿ’ಸೋಜರವರು ಉದ್ಘಾಟನೆಯನ್ನು ನೆರವೇರಿಸಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.
ಐ.ಆರ್.ಸಿ.ಎಂ.ಡಿ ಎಜುಕೇಷನ್ ಸೆಂಟರ್ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಸಂದರ್ಶನಕ್ಕಾಗಿ 650ಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು. ಪ್ರತಿಷ್ಠಿತ ಕಂಪೆನಿಗಳಾದ ಹಿಮತ್‍ಸಿಂಗ್‍ಕಾ ಲಿನೆನ್ಸ್ ಹಾಸನ, ಬ್ಲಾಸಮ್ ಸಾಫ್ಟ್‍ವೇರ್ ಬೆಂಗಳೂರು, ಹೆಚ್‍ಡಿಎಫ್‍ಸಿ ಬ್ಯಾಂಕ್, ಎಲ್‍ಐಸಿ ಆಫ್ ಇಂಡಿಯಾ, ಮಧುರಾ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್, ಎ.ಇ ಎಜುಕೇಷನ್ ಬೆಂಗಳೂರು, ಮುತ್ತೂಟ್ ಫಿನ್‍ಕಾರ್ಪ್, ಎನ್.ಬಿ ಫರ್ಟಿಲೈಜರ್ಸ್, ಎನ್.ಐ.ಎಚ್.ಟಿ ಗ್ರೂಪ್ಸ್, ಭಾರತ್ ಅಟೋಕಾರ್ಸ್ ಮಂಗಳೂರು ಇತ್ಯಾದಿ ಭಾಗವಹಿಸಿದ್ದವು.
ಸಂದರ್ಶನದಲ್ಲಿ ಆಯ್ಕೆಗೊಂಡ 113 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. ಐ.ಆರ್.ಸಿ.ಎಂ.ಡಿ ಎಜುಕೇಷನ್ ಸೆಂಟರ್ ಇದರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಈ ಉದ್ಯೋಗ ಮೇಳದ ಸಂಘಟಕರಾದ ಶ್ರೀ ಗಣೇಶ್ ಕೈಂದಾಡಿರವರು ಯುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ಉದ್ಯೋಗ ದೊರಕಿಸಿಕೊಡುವುದರಲ್ಲಿ ಬಹುವಾಗಿ ಕಾಳಜಿವಹಿಸಿ, ಉದ್ಯೋಗ ಮೇಳಕ್ಕೆ ಭೇಟಿ ನೀಡಿದ ಅನೇಕರಿಗೆ ಉದ್ಯೋಗ ದೊರಕಿಸಿಕೊಡುವುದರಲ್ಲಿ ಸಫಲರಾಗಿದ್ದೇವೆ ಎಂದು ತಿಳಿಸಿದರು.