ದತ್ತಪೀಠ ಹೋಮ ಮಾಡೋ ಜಾಗದಲ್ಲಿ ಮತ್ತೆ ಮಾಂಸದ ಅಡುಗೆ ; ” ಮುಸ್ಲಿಮರು ನಮಾಜ್ ಮಾಡುವ 200 ಮೀಟರ್ ದೂರದಲ್ಲಿ ಬಹುಸಂಖ್ಯಾತ ಹಿಂದೂಗಳು ತಿನ್ನುವ ಪದಾರ್ಥವನ್ನ ತಿನ್ನುವುದಕ್ಕೆ ಬಿಡುತ್ತಾರಾ…?” ಹಿಂದೂಪರ ಸಂಘಟನೆ ಆಕ್ರೋಶ – ಕಹಳೆ ನ್ಯೂಸ್
ಚಿಕ್ಕಮಗಳೂರು: ತಾಲೂಕಿನಲ್ಲಿ ಹಿಂದೂ ಧಾರ್ಮಿಕ ದತ್ತಪೀಠದಲ್ಲಿ (Shri Guru Dattatreya Swamy Dattapita) ಪ್ರವಾಸಿಗರು ಮತ್ತೆ ಮಾಂಸ (Meat) ಬೇಯಿಸಿರುವ ವೀಡಿಯೋ ವೈರಲ್ ಆಗಿದ್ದು, ಹಿಂದೂಪರ ಸಂಘಟನೆ (Hindu Organizations) ಕಾರ್ಯಕರ್ತರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ನಾಲ್ಕೈದು ತಿಂಗಳ ಹಿಂದೆಯೂ ದತ್ತಪೀಠದಲ್ಲಿ (Dattapita) ಬಿರಿಯಾನಿ (Biriyani) ತಯಾರಿಸಿ ಸೇವಿಸಿದ್ದರು. ಆಗಲೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಆಗ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿತ್ತು. ಇದೀಗ ದತ್ತಪೀಠಕ್ಕೆ ಬರುವ ಪ್ರವಾಸಿಗರು ದತ್ತ ಮಾಲಾಧಾರಣೆ ಹಾಗೂ ದತ್ತ ಜಯಂತಿಯ ವೇಳೆ ಹಿಂದೂ ಸಂಘಟನೆಗಳು ಹೋಮ-ಹವನ ನಡೆಸಲು ಸರ್ಕಾರವೇ ನಿರ್ಮಿಸಿರುವ ತಾತ್ಕಾಲಿಕ ಶೆಡ್ ನಲ್ಲಿ ಪುನಃ ಮಾಂಸವನ್ನ ಬೇಯಿಸಿದ್ದಾರೆ. ಇದೇ ಕೊನೆಯಾಗಬೇಕು. ಇನ್ಮುಂದೆ ಇಂತಹ ಘಟನೆ ನಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವೇ ಸೂಕ್ತ ತಕ್ಕ ಪಾಠ ಕಲಿಸುತ್ತೇವೆ ಎಂದು ಯುವ ಬ್ರಿಗೇಡ್ (Yuva Brigade) ಸಂಚಾಲಕ ಪ್ರವೀಣ್ ಖಾಂಡ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಹಿಂದೂ ಬ್ರಿಗೇಡ್ ಕಾರ್ಯಕರ್ತರು, ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಪ್ರವಾಸಿಗರು ಪುಣ್ಯಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಮಾಂಸ ಕಡಿದು, ಬೇಯಿಸುತ್ತಿದ್ದಾರೆ. ದತ್ತಪೀಠ ಪ್ರವಾಸಿಗರ ತಾಣವಲ್ಲ. ಪ್ರವಾಸಿ ತಾಣಗಳು ಬೇಕು ಅಂದ್ರೆ ಗಿರಿಶ್ರೇಣಿಯಲ್ಲಿ ಬೇರೆ ಸ್ಥಳಗಳಿವೆ. ಎರಡು ಕೋಮುಗಳು ಕೂಡ ದತ್ತಪೀಠವನ್ನ ಧಾರ್ಮಿಕ ಕ್ಷೇತ್ರ ಎಂದು ನಂಬಿವೆ. ಹೋಮ-ಹವನಕ್ಕೆ ಸರ್ಕಾರವೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದೆ. ಅಲ್ಲಿ ಈ ರೀತಿ ಮಾಂಸ ಬೇಯಿಸಿದರೆ ಅದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ. ಎಲ್ಲಿಂದಲೋ ಬರುವ ಪ್ರವಾಸಿಗರು ಯಾವುದ್ಯಾವುದೋ ಮಾಂಸವನ್ನ ತಂದು ಅಡಿಗೆ ಮಾಡಿ ಬಿಸಾಡಿ ಹೋಗುತ್ತಾರೆ. ಆದರೆ ಅಲ್ಲೇ ಇರುವ ಪೊಲೀಸರು ಏನ್ ಮಾಡುತ್ತಾರೋ ಗೊತ್ತಿಲ್ಲ ಎಂದು ಪೊಲಿಸರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.
ಮುಸ್ಲಿಮರು (Muslims) ನಮಾಜ್ ಮಾಡುವ 200 ಮೀಟರ್ ದೂರದಲ್ಲಿ ಬಹುಸಂಖ್ಯಾತ ಹಿಂದೂಗಳು ತಿನ್ನುವ ಪದಾರ್ಥವನ್ನ ತಿನ್ನುವುದಕ್ಕೆ ಬಿಡುತ್ತಾರಾ ಹಿಂದೂ ಬ್ರಿಗೇಡ್ ಪ್ರಶ್ನಿಸಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ಅಲ್ಲಿ ಬ್ಯಾರಿಕೇಡ್ ಹಾಕಿ, ಶೆಡ್‌ಗೆ ಬಂದೋಬಸ್ತ್ ಮಾಡಿದೆ. ಆದರೆ ಇದು ಕಣ್ಣೋರೆಸುವ ತಂತ್ರ. ಇನ್ಮುಂದೆ ಹೀಗಾದರೆ ಉತ್ತರ ಕೊಡೋದಕ್ಕೆ ನಾವು ಸಿದ್ಧ ಎಂದು ಎಚ್ಚರಿಸಿದೆ.