ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಯುವಪೀಳಿಗೆಯ ಆದರ್ಶ : ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ – ಕಹಳೆ ನ್ಯೂಸ್
ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಆದರ್ಶದೊಂದಿಗೆ ಪಯಣ ಮುಂದುವರಿಸಬೇಕು, ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸ ನಡೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿಪ್ರಜ್ಞಾ ಪ್ರವಾಹ ಕರ್ನಾಟಕ, ಬಯಲು ಸಂಘಟನೆ ವತಿಯಿಂದ ಆಯೋಜಿಸಿದ್ದ ಜಯೋಸ್ತುತೇ ಸಾವಿರದ ಸಾವರ್ಕರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರ ಸಾವರ್ಕರ್ ಅವರ ಬಳಿ ಸಂಧಾನದ ಮಾತಿಲ್ಲ, ಮಾತು ನಿಷ್ಠುರ, ಅನ್ಯಾಯದ ವಿರುದ್ದ ಹೋರಾಡಿದ ಧೀರ. ಗಟ್ಟಿ ವ್ಯಕ್ತಿತ್ವದ ಸಾವರ್ಕರ್ ಸಾವಿರಾರು ಮಂದಿಯನ್ನು ಪ್ರಭಾವಿಸಿದ್ದಾರೆ. ಈಗಲೂ ಅವರು ಪ್ರೇರಕರಾಗಿದ್ದಾರೆ, ಅದಕ್ಕಾಗಿ ಅವರನ್ನು ವಿರೋಧಿಸುವವರು ಇದ್ದಾರೆ. ಅವರಂತೆ ಬಾಳಲು ಅವಕಾಶ ಸಿಗಲಿಲ್ಲ ಎಂದು ಹೊಟ್ಟೆ ಕಿಚ್ಚು ಪಡುವವರಿದ್ದಾರೆ ಎಂದರು.
ದೇಶಭಕ್ತರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ಅವರ ಕಾಲು ಕೆಳಗೆ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ. ಬಂಡತನದ ಪರಮಾವಧಿ ಹೆಚ್ಚಿದೆ, ದೇಶಕ್ಕಾಗಿ ದುಡಿದವರಿಗೆ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾವರ್ಕರ್ ಅವರು ಪಿಂಚಣಿ ತೆಗೆದುಕೊಂಡರು ಎಂದು ಮಾಜಿ ಸಿಎಂ ಆರೋಪಿಸುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಸ್ವಾತಂತ್ರ್ಯ ಪುಕ್ಜಟೆ ಸಿಕ್ಕಿಲ್ಲ, ಹಲವಾರು ಜನರ ಪ್ರಾಣ ತ್ಯಾಗ ಮಾಡಿದ್ದಾರೆ. ಅಂಡಮಾನಿನ ಸಾವರ್ಕರ್ ಸೆಲ್ ಗೆ ಹಾಗೂ ಸಂಗೊಳ್ಳಿ ರಾಯಣ್ಣ ಅವರನ್ನು ನೇಣು ಹಾಕಿದ ಸ್ಥಳಕ್ಕೆ ಒಂದು ಸಲ ಹೋಗಿ ಬರಬೇಕು ಎಂದು ಅವರು ಮನವಿ ಮಾಡಿದರು.
ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಕ್ಕಾಗಿ ನಡೆಸಿದ ಹೋರಾಟ ಕುರಿತು ವಿಸ್ತಾರವಾಗಿ ತಿಳಿಸಿದರು. ರಾಮಾಯಣ ಚಿರನೂತನ ಕಾವ್ಯ, ಮಹರ್ಷಿಯ ಜಯಂತಿ ಆಚರಣೆ ಅತ್ಯಂತ ಸ್ತುತ್ಯಾರ್ಹ ಎಂದರು.
ಜಿಮ್ಸ್ ನಿರ್ದೇಶಕಿ ಡಾ.ರೇಖಾ ಸೋನಾವನೆ ಮಾತನಾಡಿ, ವಿನಾಯಕ ದಾಮೋದರ ಸಾವರ್ಕರ್ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ, ವಾಗ್ಮಿ ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಕ್ರಾಂತಿಕಾರಿ ಚಟವಟಿಕೆಗಳಲ್ಲಿ ತೊಡಗಿಸಿಕೊಂಡರು. ಅದಕ್ಕಾಗಿ ಅವರಿಗೆ ವೀರ ಸಾವರ್ಕರ್ ಎಂದು ಕರೆಯಲಾಗುತ್ತಿದೆ ಎಂದರು. ಅಸ್ಪೃಶ್ಯತೆ ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದ ಮಹಾನ್ ನಾಯಕರು ಎಂದು ಹೇಳಿದರು.
ಪ್ರಜ್ಣಾ ಪ್ರವಾಹ ಸಂಯೋಜಕ ರಘನಂದನ ಮಾತನಾಡಿದರು. ಸ್ವರಾಜ್ 75 ಪುಸ್ತಕ ವನ್ನು ಬಿಡುಗಡೆಗೊಳಿಸಲಾಯಿತು. ಡಾ. ಸಂತೋಷಕುಮಾರ ವೇದಿಕೆ ಮೇಲಿದ್ದರು. ನಿರಂಜನ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಚಾರಿಕ ಚಿಂತನೆಗಳ ವೇದಿಕೆ ಒಗ್ಗೂಡಿಸುವುದು ಬಯಲು ಸಂಘಟನೆ ಉದ್ದೇಶವಾಗಿದೆ ಎಂದರು. ಎಬಿವಿಪಿ ಮುಖಂಡ ಪುನೀತ ಕುಮಾರ ಬೆನಕನವಾರಿ ಸ್ವಾಗತಿಸಿದರು.