ಮೊದಲ ಹೆಂಡತಿಯನ್ನು ಚೆನ್ನಾಗಿ ಬಾಳಿಸದ ಮುಸ್ಲಿಂ ವ್ಯಕ್ತಿ ಎರಡನೇ ಮದುವೆ ಆಗುವಂತಿಲ್ಲ, ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆ – ಕಹಳೆ ನ್ಯೂಸ್
ಮುಸ್ಲಿಂ ಪುರುಷನಿಗೆ ತನ್ನ ಹೆಂಡತಿ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಕುರಾನ್ ನಿಯಮಗಳ ಪ್ರಕಾರವೇ ಆತ ಎರಡನೇ ಮದುವೆಯಾಗಲು ಅವಕಾಶವಿಲ್ಲ ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಜೊತೆಗೆ ಮೊದಲ ಪತ್ನಿಯ ಇಚ್ಛೆಯನ್ನು ಧಿಕ್ಕರಿಸಿ ಮತ್ತೊಂದು ವಿವಾಹವಾಗಿರುವ ವ್ಯಕ್ತಿ ಮೊದಲ ಪತ್ನಿ ಬಲವಂತವಾಗಿ ತನ್ನೊಂದಿಗೆ ಇರುಬೇಕೆಂದು ಒತ್ತಾಯಿಸುವಂತಿಲ್ಲ ಎಂದು ಹೇಳಿದೆ. ಮುಸ್ಲಿಮ್ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಅತನಿಗೆ ಇತರ ಮಹಿಳೆಯರನ್ನು ಮದುವೆಯಾಗುವ ಅರ್ಹತೆ ಇಲ್ಲವೆಂದು ಕುರಾನ್ ಹೇಳುತ್ತದೆ. ಈ ವಿಚಾರವಾಗಿ ನ್ಯಾಯಾಲಯದ ನಿರ್ಣಯವೂ ಅದೇ ಆಗಿರುತ್ತದೆ ಎಂದು ಕೋರ್ಟ್ ಹೇಳಿದೆ.
ಅಜೀಜುರ್ರಹ್ಮಾನ್ ಮತ್ತು ಹಮೀದುನ್ನಿಶಾ ಎಂಬುವವರಿಗೆ ಸಂಬಂಧಿಸದ ಪ್ರಕರಣದಲ್ಲಿ ಕೋರ್ಟ್ ಈ ಹೇಳಿಕೆ ನೀಡಿದೆ. ದಂಪತಿಗಳು ಮೇ 1999 ರಲ್ಲಿ ವಿವಾಹವಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ತರುವಾಯ, ಅಝೀಝುರ್ರಹ್ಮಾನ್ ಎರಡನೇ ವಿವಾಹವಾದ. ಜೊತೆಗೆ ಎರಡನೇ ಹೆಂಡತಿಯೊಂದಿಗೆ ಮಕ್ಕಳನ್ನು ಹೊಂದಿದ್ದಾರೆ. ಅವನು ಇದನ್ನು ತನ್ನ ಮೊದಲ ಹೆಂಡತಿ ಹಮೀದುನ್ನಿಶಾರಿಂದ ಮರೆಮಾಚಿದ್ದ. ಎರಡನೇ ಮದುವೆಗೆ ಯಾವುದೇ ವಿವರಣೆಯನ್ನು ಆಕೆಗೆ ನೀಡಿರಲಿಲ್ಲ. ಹೇಗೋ ವಿಚಾರ ತಿಳಿದ ಹಮೀದುನ್ನಿಶಾ ಬೇಸತ್ತು ತವರಿಗೆ ಬಂದು ವಾಸಿಸುತ್ತಿದ್ದಳು.
ಆ ಬಳಿಕ ಅಝಿಝುರ್ರಹ್ಮಾನ್ ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿ ಮೊದಲ ಹೆಂಡತಿ ತನ್ನೊಂದಿಗೆ ವಾಸಿಸುವಂತೆ ನಿರ್ದೇಶಿಸಲು ಕೋರಿದ್ದನು. ಈ ವರ್ಷದ ಆಗಸ್ಟ್‌ನಲ್ಲಿ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಅವರು ಅಲಹಾಬಾದ್ ಹೈಕೋರ್ಟ್ ಸಂಪರ್ಕಿಸಿದ. ಈ ಬಗ್ಗೆ ತೀರ್ಪಿತ್ತಿರುವ ನ್ಯಾಯಾಲಯವು ಮಹಿಳೆಯರ ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಒತ್ತಿಹೇಳಿತು. “ಮಹಿಳೆಯರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜನರಿಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ” ಎಂದು ಪ್ರತಿಪಾದಿಸಿತು.
ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಕುರಾನ್‌ನ ಸೂರಾ 4 ಆಯತ್ 3 ಅನ್ನು ಉಲ್ಲೇಖಿಸಿದೆ. ಅದು ಹೀಗೆ ಹೇಳುತ್ತದೆ, “ನೀವು ನ್ಯಾಯಯುತವಾಗಿ ನಡೆಸಿಕೊಳ್ಳುವುದಾದರೆ ನಿಮಗೆ ಒಳ್ಳೆಯವರೆಂದು ತೋರುವ ನಾಲ್ವರು ಮಹಿಳೆಯರನ್ನು ಮದುವೆಗಬಹುದು. ಆದರೆ, ನೀವು ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಾರಿರಿ ಎಂದು ನೀವು ಭಯಪಡುತ್ತಿದ್ದರೆ, ಕೇವಲ ಒಬ್ಬರನ್ನು ಮಾತ್ರ ಮದುವೆಯಾಗಿ. ಇದು ನೀವು ಅನ್ಯಾಯವನ್ನು ತಪ್ಪಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದೆ.
ʼನ್ಯಾಯಾಲಯವು ಮದುವೆಯ ಪಾವಿತ್ರ್ಯವನ್ನು ಗೌರವಿಸುತ್ತದೆ, ಆದರೆ ಮದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ, ಎರಡನೇಯವಳನ್ನು ವಿವಾಹವಾದ ಮುಸ್ಲಿಂ ಪುರುಷನು ತನ್ನೊಂದಿಗೆ ವಾಸಿಸಲು ಮೊದಲನೆಯವರನ್ನು ಒತ್ತಾಯಿಸುವುದನ್ನು ನ್ಯಾಯಾಲಯವು ಒಪ್ಪುವುದಿಲ್ಲ. ಹಾಗೆ ಮಾಡಲು ಒತ್ತಾಯಿಸುವುದು ಅಸಮಾನತೆಯಾಗಿರುತ್ತದೆ” ಎಂದು ಹೇಳಿದೆ.