ವಸತಿ ಶಾಲೆಗಳಲ್ಲಿ RSS ಮಕ್ಕಳ ಶಿಬಿರ ಏರ್ಪಡಿಸಿದ್ರೆ ತಪ್ಪೇನು? : ಸಚಿವ ಕೋಟ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್
ಬೆಂಗಳೂರು: ವಸತಿ ಶಾಲೆಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ರಾಷ್ಟ್ರದ ಪರವಾಗಿ ಕಲಿಕಾ ಶಿಬಿರ ಆಯೋಜನೆ ಬಯಸಿ ಆರ್ಎಸ್ಎಸ್ ಅರ್ಜಿ ಸಲ್ಲಿಸಿದರೂ ಪರಿಶೀಲಿಸುತ್ತೇವೆ. ಅದರಲ್ಲಿ ತಪ್ಪೇನಿದೆ? ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಸರಾ- ಬೇಸಿಗೆ ರಜೆ ದಿನಗಳಲ್ಲಿ ಮಕ್ಕಳ ವ್ಯಕ್ತಿತ್ವ ಶಿಬಿರ ಏರ್ಪಡಿಸಲು ವಸತಿ ಶಾಲೆಗಳಲ್ಲಿ ಅವಕಾಶ ಕೋರಿ ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸುವುದು ಹೊಸದೇನಲ್ಲ. ಹಾಗೆಯೇ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂತಹದೊಂದು ಶಿಬಿರಕ್ಕೆ ಪ್ರೇರಣ ಸಂಸ್ಥೆ ಲೆಟರ್ ಹೆಡ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಆರ್ಎಸ್ಎಸ್ನಿಂದ ಯಾವುದೇ ಅರ್ಜಿ ಬಂದಿಲ್ಲ. ವಸತಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ನಡೆಸುವಂತಿಲ್ಲ, ದೇಶ ವಿರೋಧಿ ಸಂಘಟನೆಗಳಿಗೆ ಅವಕಾಶವಿಲ್ಲ. ರಾಷ್ಟ್ರ ಭಕ್ತಿ, ಪ್ರೇಮ, ರಾಷ್ಟ್ರದ ಪರವಾಗಿ ವಿಚಾರ, ತರಬೇತಿ ಶಿಬಿರ ಏರ್ಪಡಿಸಬಯಸಿ ಯಾವುದೇ ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.