ಉಡುಪಿ : ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‍ಗೆ ಮೂರನೇ ಬಾರಿ ವಿಶ್ವ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್ ಮಾನ್ಯತೆ ಪಡೆದಿದೆ.
ಡೆನ್ಮಾರ್ಕಿನ ಫೌಂಡೇಶನ್ ಫಾರ್ ಎನ್ವಯರರ್ನ್ ಮೆಂಟಲ್ ಎಜ್ಯುಕೇಶನ್ ಸಂಸ್ಥೆಯ ಬ್ಲೂಫ್ಲ್ಯಾಗ್ ಪರಿಕಲ್ಪನೆಯ ವಿಶ್ವದರ್ಜೆಯ 33 ಮಾನದಂಡಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿರುವ ಭಾರತದ ಕೆಲವೇ ಕೆಲವು ಬೀಚ್‍ಗಳ ಪೈಕಿ ಪಡುಬಿದ್ರಿ ಎಂಡ್ ಪಾಯಿಂಟ್‍ನ ಸಮುದ್ರ ಕಿನಾರೆಗೆ ಸತತ ಮೂರನೇ ಬಾರಿಗೆ ವಿಶ್ವದರ್ಜೆಯ ಬ್ಲೂಫ್ಲ್ಯಾಗ್ ಮಾನ್ಯತೆಯೊಂದಿಗೆ ಮನ್ನಣೆ ಲಭಿಸಿರುವುದು ಉಡುಪಿ ಜಿಲ್ಲೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೊ ಅವರು ತಿಳಿಸಿದ್ದಾರೆ.
ಕಡಲ ತೀರದ ಪರಿಸರ ಶಿಕ್ಷಣ ಮತ್ತು ಮಾಹಿತಿ, ಪರಿಸರ ನಿರ್ವಹಣೆ, ನೀರಿನ ಗುಣಮಟ್ಟ, ಸುರಕ್ಷತೆ ಮತ್ತು ಸೇವೆಯ ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಂತೆ ಒಟ್ಟು 33 ಮಾನದಂಡಗಳನ್ನು ಪರಿಗಣಿಸಿ ಅಪಾಯಕಾರಿಯಲ್ಲದ ಅತೀ ಶುಚಿತ್ವವಾದ ಹಾಗೂ ಸುಸ್ಥಿರ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವಂತಹ ಪಡುಬಿದ್ರಿ ಎಂಡ್ ಪಾಯಿಂಟ್ ಕಡಲ ತೀರಕ್ಕೆ ಬ್ಲೂಫ್ಲ್ಯಾಗ್ ಮಾನ್ಯತೆ ನೀಡಲಾಗಿದೆ.