Friday, November 22, 2024
ಸುದ್ದಿ

ಕಾಸರಗೋಡಿನ ತೀರವಾಸಿಗಳ ಬದುಕಿನ ಮೇಲೆ ಕಡಲ್ಕೊರೆತದ ಕರಿಛಾಯೆ ; ಕಡಲತೀರದ ನಿವಾಸಿಗಳ ಹೀನಾಯ ಸ್ಥಿತಿಯ ಕುರಿತು Exclusive ವರದಿ – ಕಹಳೆ ನ್ಯೂಸ್

ಕಾಸರಗೋಡು, ಜು 17 : ಮಳೆಯ ಅಬ್ಬರದ ನಡುವೆ ಕಡಲ್ಕೊರೆತ ವು ತೀರವಾಸಿಗಳ ಬದುಕನ್ನು ಕಸಿದುಕೊಂಡಿದೆ. ಉಪ್ಪಳ ಮುಸೋಡಿ , ಅದಿಕೆ ಮತ್ತು ಶಾರದಾ ನಗರ ತೀರವಾಸಿಗಳು ಭೀತಿಯ ನಡುವೆ ಬದುಕು ಸಾಗಿಸುತ್ತಿದ್ದಾರೆ .ಮುಸೋಡಿ , ಅದಿಕ ದಲ್ಲಿ ೨೫೦ ಮೀಟರ್ ನಷ್ಟು ಸ್ಥಳವನ್ನು ಸಮುದ್ರ ನುಂಗಿ ಹಾಕಿದೆ. ಹಲವಾರು ಮನೆಗಳು ಸಮುದ್ರಪಾಲಾಗಿವೆ. ತೀರವಾಸಿಗಳು ಮನೆ ಸೊತ್ತು ಬಿಟ್ಟು ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಒಂದೆಡೆ ಅಲೆಗಳ ಅಬ್ಬರ , ಇನ್ನೊಂದೆಡೆ ಕಡಲ್ಕೊರೆತ ತೀರವಾಸಿಗಳ ಬದುಕನ್ನೇ ಅತಂತ್ರಗೊಳಿಸಿದೆ. ೩೦ ಕ್ಕೂ ಅಧಿಕ ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿದೆ .ನೂರಾರು ತೆಂಗುಗಳು , ಮರಗಳು ಸಮುದ್ರಪಾಲಾಗಿವೆ . ಈ ಬಾರಿ ಸಮುದ್ರ ಪ್ರಕ್ಷುಬ್ದ ಗೊಂಡಿದ್ದು , ತೀರವು ಸಮುದ್ರ ಸೆಳೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಜೇಶ್ವರ ಬಂದರಿನ ಅವೈಜ್ಞಾನಿಕ ಕಾಮಗಾರಿಯಿಂದ ಅಲೆಗಳು ಮುಸೋಡಿ , ಅದಿಕೆ ಹಾಗೂ ಶಾರದಾ ನಗರ ತೀರವನ್ನು ನಲುಗಿಸಿದೆ. ಕಡಲ್ಕೊರೆತ ಅಬ್ಬರ ದುಪ್ಪಟ್ಟಾಗಿದೆ. ದಿನಕಳೆದಂತೆ ಸಮುದ್ರ ತೀರವನ್ನು ಕಡಲು ಸೆಳೆದೊಯ್ಯುತ್ತಿದ್ದು . ಮೀಟರ್ ಗಳಷ್ಟು ತೀರ ಸಮುದ್ರ ಪಾಲಾಗುತ್ತಿದೆ .ಒಂದೆಡೆ ಜೀವ ಭಯ ಇನ್ನೊಂದೆಡೆ ಮನೆ , ಆಸ್ತಿ ಪಾಸ್ತಿ ಕೂಡಾ ಸಮುದ್ರ ಸೇರುತ್ತಿದ್ದು , ಬದುಕೇ ಬೀದಿ ಪಾಲಾಗುವ ಸ್ಥಿತಿ ತೀರವಾಸಿಗಳದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು


ಉಪ್ಪಳ ಶಾರದಾ ನಗರದ ವಾಮಂಜೂರಿ ನಲ್ಲಿರುವ ಬಬ್ಬರ್ಯನ ಕಟ್ಟೆ ಸಮುದ್ರ ಸೇರಿದೆ. ಕಳೆದ ಮಳೆಗಾಲದಲ್ಲಿ ಆವರಣ ಗೋಡೆ ಕುಸಿದಿದ್ದರೆ ಈ ಬಾರೀ ಅರ್ಧದಷ್ಟು ಭಾಗ ಕುಸಿದು ಸಮುದ್ರಕ್ಕೆ ಬಿದ್ದಿದೆ. ಬೋವಿ ಸಮಾಜವರು ಆರಾಧಿಸಿಕೊಂಡುಬರುತ್ತಿರುವ ಬಬ್ಬರ್ಯನ ಕಟ್ಟೆಗೆ ಸುಮಾರು ಒಂದು ಶತಮಾನದ ಅಧಿಕ ವರ್ಷ ಇತಿಹಾಸ ಹೊಂದಿದೆ.

ಮುಸೋಡಿ , ಶಾರದಾ ನಗರ , ಅದಿಕೆ ತೀರದಲ್ಲಿ ನೂರಾರು ಮನೆಗಳು ಯಾವುದೇ ಕ್ಷಣ ಸಮುದ್ರಕ್ಕೆ ಆಹುತಿಯಾಗುವ ಭೀತಿಯಲ್ಲಿವೆ. ಶಾರದಾ ನಗರ ಹುನುಮಾನ್ ನಗರ ತೀರದ ಅರ್ಧರಸ್ತೆಯನ್ನೇ ಸಮುದ್ರ ನುಂಗಿದೆ. ಇದರಿಂದ ತೀರವಾಸಿಗಳ ಸಮಸ್ಯೆಗೆ ಸಿಲುಕುವಂತಾಗಿದೆ. ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ತೀರವಾಸಿಗಳ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ.

ಆದರೆ ಈ ವರ್ಷವಂತೂ ಕಡಲು ಪ್ರಕ್ಷುಬ್ದವಾಗಿದ್ದು , ಬೋರ್ಗರೆಯುವಂತಹ ಅಲೆಗಳು ಬಂದು ತೀರಕ್ಕೆ ಅಪ್ಪಳಿಸತೊಡಗಿದ್ದು ಹಲವು ಮನೆಗಳಿಗೂ ಸಮುದ್ರ ನೀರು ನುಗ್ಗುತ್ತಿದೆ. ರಾತ್ರಿ ನಿದ್ರಿಸಲು ಭಯಪಡುವಂತಾಗಿದೆ. ವರ್ಷ೦ಪ್ರತಿ ಕಡಲ್ಕೊರೆತ ನಿತ್ಯಪಾಠವಾಗಿದೆ, ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ಭರವಸೆ ಮಾತ್ರ ತೀರವಾಸಿಗಳಿಗೆ ಲಭಿಸಿದೆ. ಕಗ್ಗಲ್ಲು ತಂದು ಸಮುದ್ರಕ್ಕೆ ಸುರಿದು ಹೋಗುತ್ತಿದ್ದು, ಶಾಶ್ವತ ಪರಿಹಾರ ಕೇವಲ ಕನಸಾಗಿ ಮಾತ್ರ ಉಳಿದಿದೆ.

ವರದಿ : ಎಸ್.ಎಮ್. ಉಡುಪ
ಚಿತ್ರ : ಕಹಳೆ ನ್ಯೂಸ್