Monday, January 20, 2025
ಸುದ್ದಿ

ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8 ರ 19ನೇ ವಲಯ ಸಮ್ಮೇಳನ –ಕಹಳೆ ನ್ಯೂಸ್

ಮೂಡಬಿದಿರೆ :ಭಾರತೀಯ ಜೈನ್ ಮಿಲನ್ ವಲಯ -8ರ ಸಮಾವೇಶವು ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆಯಿತು, ಈ ಸಂದರ್ಭದಲ್ಲಿ ವಲಯ ಎಂಟರ ಜೈನ್ ಮಿಲನ್ ಗಳ ಕಾರ್ಯಸಾಧನೆಗಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿಭಾಗದ ಬಂಟ್ವಾಳ ಜೈನ್ ಮಿಲನ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಪಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದಿರೆ : ಜೈನ ಧರ್ಮ ಭಗವಂತನನ್ನು ಒಲಿಸಿಕೊಳ್ಳುವ ಧರ್ಮ. ಇಲ್ಲಿ ಸಾಕ್ಷಾತ್ಕಾರವೆ ಹೊರತು ಬಲಾತ್ಕಾರವಿಲ್ಲ. ಇಲ್ಲಿಯ ಹಾದಿ ಬುದ್ಧಿ, ಇಲ್ಲಿಯ ಗುರಿ ಸಿದ್ಧಿ. ನಿನ್ನ ಗುಣಗಳನ್ನು ನನಗೆ ಕೊಡು ಎಂದು ಭಗವಂತನಲ್ಲಿ ಪ್ರಾರ್ಥಿಸುವ ಜೈನ ಧರ್ಮದ ದಶಲಕ್ಷಣಗಳು ನಮ್ಮನ್ನು ಆಂತರಿಕವಾಗಿ ಬಲಗೊಳಿಸುತ್ತವೆ. ಉತ್ತಮ ಕ್ಷಮೆ ಉತ್ತಮ ಬಾಂಧವ್ಯ, ಉತ್ತಮ ಶೌಚ, ಉತ್ತಮ ಸಂಯಮ , ಉತ್ತಮ ಬ್ರಹ್ಮಚರ್ಯ , ಹೀಗೆ ಎಲ್ಲದರಲ್ಲಿಯೂ ಉತ್ತಮತ್ವ ಹೊಂದಿರುವ ಜೈನ ಧರ್ಮದ ಆಚರಣೆ ನಮ್ಮನ್ನು ಸರ್ವೋತ್ತಮನೆಡೆ ಒಯ್ಯುತ್ತದೆ. ಜೈನ ಗುರುಗಳಿಂದ ಪ್ರೇರಿತರಾಗಿ ಅವರ ಆದರ್ಶವನ್ನು ಅಳವಡಿಸಿಕೊಂಡು ಮುನ್ನಡೆಯೋಣ.

ಧರ್ಮ ರಕ್ಷಣೆಗೆ ಧರ್ಮ ಪಾಲನೆಗೆ ಜೈನ್‍ಮಿಲನ್ ಮುಂದಾಗಲಿ. ವಲಯ ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಧರ್ಮದ ಅನುಷ್ಠಾನದ ಸಂಕಲ್ಪ ನಡೆಯಲಿದೆ. ಜೈನ ಕಾಶಿ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆ ಹಾಗೂ ಇನ್ನಿತರ ಸಾಧಕರೊಂದಿಗೆ ವಿದ್ಯಾಕಾಶಿಯಾಗಿದೆ.ಎಕ್ಸಲೆಂಟ್ ಸಂಸ್ಥೆ ಯುವರಾಜ್ ಜೈನ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯದರ್ಶಿಯಾದ ಸುರೇಂದ್ರ ಕುಮಾರ್ ಹಾಗೂ ವಲಯ 8 ರ ಸದಸ್ಯರಿಂದ ಇಂದು ನಾವು ಈ ಜೈನ್ ಮಿಲನ್ ಕಾರ್ಯಕ್ರಮದಲ್ಲಿ ಜೈನರ ಸಂಸ್ಕೃತಿ ಸಂಸ್ಕಾರ ಇವುಗಳನ್ನೆಲ್ಲ ಹಂಚಿಕೊಂಡು ಸಂಭ್ರಮಿಸುವಂತಾಯಿತು. ಕೂಡಿ ಬಾಳುವ ಈ ಸಂಸ್ಕೃತಿ ಹೀಗೆಯೇ ಮುಂದುವರಿಯಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಪೂಜ್ಯ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರು ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8 ರ 19ನೇ ವಲಯ ಸಮ್ಮೇಳನದ ಉದ್ಘಾಟಕರಾಗಿ ಮಾತಾಡಿದರು.

ಆಶೀರ್ವಚನ ನೀಡಿದ ಮೂಡುಬಿದಿರೆ ಜೈನ ಮಠದ ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಈ ನೆಲದ ಸ್ವಾಭಿಮಾನದ ಬದುಕು ತೋರಿಸಿದ ಜೈನ ಮಿಲನ ಧರ್ಮಮುಖಿಯಾಗಿ ಕೆಲಸ ಮಾಡುತ್ತಿದೆ. ಈ ಕೆಲಸಗಳು ಹಿಗೆಯೇ ಮುಂದುವರಿಯಲಿ. ಭಜನೆ, ಸತ್ಸಂಗ ಮನೆ ಮನೆಗಳಲ್ಲಿ, ಮಠಗಳಲ್ಲಿ ಮುಂದುವರಿಸುವ ಸಂಕಲ್ಪ ನಮ್ಮದಾಗಲಿ ಎಂದರು.
ಇದೇ ಸಂದರ್ಭದಲ್ಲಿ ಕ್ರೀಯಾಶೀಲ ಸಾಧನೆಗೆ ಕೊಡಮಾಡುವ ರಾಜ್ಯ ಮಟ್ಟದ ಮಿಲನ ಶ್ರೀ ಪ್ರಶಸ್ತಿಯನ್ನು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ ಇವರಿಗೆ ನೀಡಾಯಾಯಿತು.
ಪ್ರಶಸ್ತಿ ಸ್ವೀಕರಿಸಿದ ಶ್ರೀ ಯುವರಾಜ ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿ ವಿಜ್ಞಾನಿಯಾಗುವ ಉದ್ಯೋಗ ಸಿಕ್ಕಿದಾಗಲೂ ಪೂಜ್ಯ ಖಾವಂದರ ಆಶೀರ್ವಾದದಿಂದ ಉಜಿರೆಯಲ್ಲಿ ಉಪನ್ಯಾಸಕನಾದೆ ಇಂದು ಅವರನ್ನೇ ಆದರ್ಶವಾಗಿಟ್ಟುಕೊಂಡು ಅವರ ಅನುಗ್ರಹ ಬಲದಿಂದ ಸಾವಿರಾರು ವಿಜ್ಞಾನಿಗಳನ್ನು ಸೃಷ್ಟಿಸುವ ವಿದ್ಯಾಸಂಸ್ಥೆ ನಡೆಸುವ ಯೋಗ ಬಂದಿದೆ. ಇಂದು ದೆಹಲಿಯಲ್ಲಿ ಅಬ್ದುಲ್ ಕಲಾಮ್ ಹೆಸರಲ್ಲಿ ಕೊಡುವ ಪ್ರಶಸ್ತಿ ಘೋಷಣೆಯಾಗಿದ್ದರೂ ನಾನು ಆರಾಧಿಸುವ ಪೂಜ್ಯರಿಂದ ಈ ಪ್ರಶಸ್ತಿ ಸ್ವೀಕರಿಸುವ ಮಹಾಭಾಗ್ಯಕ್ಕಾಗಿ ಇಲ್ಲಿಯೆ ಉಳಿದೆ ಆ ಕುರಿತಾಗಿ ನನಗೆ ಧನ್ಯತೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಮಿಲನಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ ಸುನೀಲ್ ಕುಮಾರ್, ಜೈನ ಅರಸರ ಆಳ್ವಿಕೆ ಕಂಡ ಮೂಡುಬಿದಿರೆ-ಕಾರ್ಕಳ ಕ್ಷೇತ್ರ ಹಲವು ಸಮಾಜಮುಖಿ ಚಿಂತನೆ, ಸಾಹಿತ್ಯ, ಶಿಲ್ಪಕಲೆಯಿಂದ ವಿಶ್ವಮಾನ್ಯವಾಗಿದೆ. ಅಂತಹ ಸಂಸ್ಕಾರದ ಮಣ್ಣಿನಿಂದ ಚೇತನಗೊಂಡಿರುವ ಮೂಡುಬಿದಿರೆಯಲ್ಲಿ ಬದುಕು ಹಾಗೂ ಬದುಕಲು ಬಿಡು ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಜೈನ ಮಿಲನ ನನಗೋಸ್ಕರ ಬದುಕದೆ ಸಮಾಜಕ್ಕೋಸ್ಕರ ಬದುಕು ಎಂಬ ನಿಲುವನ್ನು ಹೊಂದಿರುವುದು ಸಂತೋಷ ಇಂತಹ ನಿಲುವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬೇಕಾದ ಒಳ್ಳೆಯ ಅಡಿಪಾಯ ಹಾಕಲಿ. ತಂತ್ರಜ್ಞಾನದಿಂದ ಮುಂದುವರಿದ ಈ ಕಾಲದಲ್ಲಿ ಮನಸ್ಸು, ಭಾವನೆಗಳು ಹತ್ತಿರವಾಗಬೇಕು. ದಾರ್ಶನಿಕರ ಭಾವಭ್ರೂಣಗಳು ಜೈನ ಮಿಲನದಂತಹ ಕಾರ್ಯಕ್ರಮದಲ್ಲಿ ಉಸಿರಾಡಲಿ ಎಂದರು.
ಇದೇ ಸಂದರ್ಭದಲ್ಲಿ ಚೂಡಾಮಣಿ ಸ್ಮರಣ ಸಂಚಿಕೆಯನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯದ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಬಿಡುಗಡೆಗೊಳಿಸಿದರು.
ಭಾರತೀಯ ಜೈನ್ ಮಿಲನದ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಿಭಾಗ ಉಪಾಧಕ್ಷರಾದ ಸುದರ್ಶನ್ ಜೈನ್, ಕಾರ್ಯಾಧ್ಯಕ್ಷರಾದ ಕೆ ಪ್ರಸನ್ನ ಕುಮಾರ್, ಪ್ರಧಾನಕಾರ್ಯದರ್ಶಿ ರಾಜೇಶ್ ಎಂ, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷರಾದ ನಮಿರಾಜ ಜೈನ್ ಉಪಸ್ಥಿತರಿದ್ದರು.
ಬಳಿಕ ಪ್ರಸಿದ್ಧ ವಾಗ್ಮಿಗಳಾದ ಪೆÇ್ರಫೆಸರ್ ಕೃಷ್ಣೇಗೌಡ ಅವರಿಂದ ಸಂಸ್ಕೃತಿ ಮತ್ತು ನಾಗರಿಕತೆ ಎಂಬ ವಿಷಯದ ಬಗ್ಗೆ ಪ್ರೇರಣಾ ಉಪನ್ಯಾಸ ಹಾಗೂ ಎಂ ಎಸ್ ಮೃತುಂಜಯ್ ಜೈನ್ ಅವರಿಂದ ಉದ್ಯಮಶೀಲತೆ, ಸವಾಲುಗಳು ಮತ್ತು ಪರಿಹಾರ, ಹಾಗೂ ಎಕ್ಸಲೆಂಟ್ ಸಮೂಹ ಸಂಸ್ಥೆ ಮೂಡುಬಿದಿರೆ ಅಧ್ಯಕ್ಷರಾದ ಯುವರಾಜ್ ಜೈನ್ ಇವರಿಂದ ಆಧುನಿಕ ಶಿಕ್ಷಣ ಭವಿಷ್ಯದ ಬುನಾದಿ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು.
ಪುಷ್ಪರಾಜ್ ಜೈನ್ ಸ್ವಾಗತಿಸಿ, ರಾಜೇಶ್ ಎಂ ವಂದಿಸಿದರು. ಕುಮಾರಿ ಮೌಲ್ಯ ಮತ್ತು ತಂಡದವರು ಪ್ರಾರ್ಥನೆ ಹಾಗೂ ನೃತ್ಯ ರೂಪಕ ನಡೆಸಿಕೊಟ್ಟರು. ಡಾ| ಬಿ ಪಿ ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.