Sunday, January 19, 2025
ಸುದ್ದಿ

‘ಕಾಂತಾರ’ ಸಿನಿಮಾ ಮೂಲಕ ಅಬ್ಬರಿಸಿದ ರಿಷಬ್ ಶೆಟ್ಟಿಗೆ ಅಭಿಮಾನಿಗಳಿಂದ ಸಿಕ್ತು ಹೊಸ ಬಿರುದು – ಕಹಳೆ ನ್ಯೂಸ್

‘ಕಾಂತಾರ’ ಸಿನಿಮಾ ಮೂಲಕ ಅಬ್ಬರಿಸಿದ ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಸಿನಿರಸಿಕರಂತೂ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಕೊಂಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಇನ್ನು ಸ್ಟಾರ್‌ ನಟರಿಗೆ ಅಭಿಮಾನಿಗಳು ಬಿರುದುಗಳನ್ನು ಕೊಡುವುದು ಹೊಸದೇನು ಅಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡದ ಎಲ್ಲಾ ನಟಿರಿಗೂ ಒಂದೊಂದು ಬಿರುದಿನಿಂದ ಅಭಿಮಾನಿಗಳು ಕರೀತಾರೆ. ಸದ್ಯ ರಿಷಬ್ ಶೆಟ್ಟಿಗೆ ಏನು ಬಿರುದು ಕೊಡುವುದು ಎನ್ನುವ ಚರ್ಚೆ ನಡೀತಿದೆ.

ಕನ್ನಡದ ಎಲ್ಲಾ ಸ್ಟಾರ್ ನಟರಿಗೂ ಒಂದೊಂದು ಬಿರುದನ್ನು ಅಭಿಮಾನಿಗಳು ಕೊಟ್ಟಿದ್ದಾರೆ. ಹೆಸರಿನ ಜೊತೆಗೆ ಈ ಬಿರುದುಗಳನ್ನು ಸೇರಿಸಿ ಕರೀತಾರೆ, ಜೈಕಾರ ಹಾಕುತ್ತಾರೆ. ಒಂದೆರಡು ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಹೀರೊ ಆಗಿ ಗೆದ್ದರೂ ‘ಕಾಂತಾರ’ ಚಿತ್ರದಿಂದ ದೊಡ್ಡ ಸಕ್ಸಸ್ ಸಿಕ್ಕಿದೆ. ಹಾಗಾಗಿ ಅಭಿಮಾನಿಗಳು ನೆಚ್ಚಿನ ನಟನನ್ನು ಹೊಸ ಬಿರುದಿನಿಂದ ಕರೆಯಲು ಮನಸ್ಸು ಮಾಡಿದ್ದಾರೆ.

‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಎಂದು ಕರೆಯೋಣ ಎಂದು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಲವರು ಇದಕ್ಕೆ ಕಾಮೆಂಟ್ ಮಾಡಿ ಒಳ್ಳೆ ಬಿರುದು ಎಂದಿದ್ದಾರೆ. ಇದಕ್ಕಿಂತ ಬೇರೆ ಇದ್ದರೆ ಚೆನ್ನಾಗಿರುತ್ತದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಕೆಲವರು ನ್ಯಾಚುರಲ್ ಸ್ಟಾರ್ ರಿಷಬ್ ಶೆಟ್ಟಿ ಎನ್ನುತ್ತಿದ್ದಾರೆ. ಮತ್ತೊಬ್ಬರು ‘ಕರಾವಳಿ ಚಕ್ರವರ್ತಿ’ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಚರ್ಚೆ ಸಾಗಿದೆ. ಒಟ್ನಲ್ಲಿ ‘ಕಾಂತಾರ’ ಅಷ್ಟರಮಟ್ಟಿಗೆ ಸಿನಿರಸಿಕರ ಮೇಲೆ ಪ್ರಭಾವ ಬೀರಿದೆ. ಒಂದೇ ಸಿನಿಮಾದಿಂದ ರಿಷಬ್ ಶೆಟ್ಟಿ ಸ್ಟಾರ್‌ ಪಟ್ಟಕ್ಕೇರಿಬಿಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಹೀರೊ ಆಗಿಯೂ ಗೆದ್ದಿದ್ದಾರೆ. ಇತ್ತೀಚೆಗೆ ‘ಕಾಂತಾರ’ ಸಿನಿಮಾ ನೋಡಿದ್ದ ಮೆಚ್ಚಿಕೊಂಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಡಿವೈನ್ ರಿಷಬ್ ಶೆಟ್ಟಿ ಎಂದು ಕರೆದು ಪೋಸ್ಟ್ ಮಾಡಿದ್ದರು.

ಬಾಕ್ಸಾಫೀಸ್‌ನಲ್ಲಿ ‘ಕಾಂತಾರ’ ಸಿನಿಮಾ ನಾಗಾಲೋಟ ಮುಂದುವರೆದಿದೆ. ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಹಿಂದಿ, ತೆಲುಗು, ತಮಿಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿದೆ. ಹೊರ ರಾಜ್ಯಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕ್ಲೈಮ್ಯಾಕ್ಸ್‌ನಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳು ಮೈ ಮೇಲೆ ಆವಾಹನೆಯಾದಂತೆ ರಿಷಬ್ ಶೆಟ್ಟಿ ನಟಿಸಿದ್ದಾರೆ. ಅವರ ಅಮೋಘ ಅಭಿನಯಕ್ಕೆ ಕೆಲವರು ದೇವರನ್ನೇ ಕಂಡಂತೆ ಕೈ ಮುಗಿದಿದ್ದಾರೆ. ಅಂತಾದೊಂದು ಅದ್ಭುತ ಅಭಿನಯದಿಂದ ರಿಷಬ್ ಶೆಟ್ಟಿ ಮೋಡಿ ಮಾಡಿದ್ದಾರೆ. ಹಾಗಾಗಿ ‘ಡಿವೈನ್ ಸ್ಟಾರ್’ ಎನ್ನುವ ಬಿರುದು ಅವರಿಗೆ ಸೂಕ್ತ ಎನ್ನುವುದು ಅಭಿಮಾನಿಗಳ ಆಸೆ.

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿ, ‘ರಿಕ್ಕಿ’ ಸಿನಿಮಾ ಮೂಲಕ ನಿರ್ದೇಶಕರ ಪಟ್ಟ ಅಲಂಕರಿಸಿದರು. ‘ಬೆಲ್‌ಬಾಟಂ’ ಸಿನಿಮಾದಲ್ಲಿ ಹೀರೊ ಆಗಿ ಸಕ್ಸಸ್ ಕಂಡರು. ಅಲ್ಲಿಂದ ಮುಂದೆ ನಿರ್ದೇಶನದ ಜೊತೆ ಜೊತೆಗೆ ಹೀರೊ ಆಗಿಯೂ ನಟಿಸುತ್ತಾ ಬರ್ತಿದ್ದಾರೆ. ಹೀರೊ ಆಗಬೇಕು ಎಂದು ಚಿತ್ರರಂಗಕ್ಕೆ ಬಂದ ರಿಷಬ್ ಕೊನೆಗೂ ಅದನ್ನು ಸಾಧಿಸಿ ತೋರಿಸಿದ್ದಾರೆ. ಬರೀ ಸ್ಯಾಂಡಲ್‌ವುಡ್ ಹೀರೊ ಅಲ್ಲ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಡಿವೈನ್ ಸ್ಟಾರ್’ ಅಲ್ಲದೇ ಇದ್ದರೂ ಯಾವುದಾದರೂ ಒಂದು ಬಿರುದನ್ನು ಶೀಘ್ರದಲ್ಲೇ ಅಭಿಮಾನಿಗಳು ರಿಷಬ್ ಶೆಟ್ಟಿಗೆ ನೀಡಲಿದ್ದಾರೆ.