ಸುರತ್ಕಲ್ ಟೋಲ್‌ಗೇಟ್‌ಗೆ ಮುತ್ತಿಗೆ-ಹೋರಾಟಗಾರರು & ಪೊಲೀಸರ ನಡುವೆ ವಾಗ್ವಾದ, ಪ್ರತಿಭಟನಾಕಾರರ ಬಂಧನ – ಕಹಳೆ ನ್ಯೂಸ್
ವಿವಾದಾತ್ಮಕ ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸಿಯೇ ಸಿದ್ಧ ಎಂದು ಅಖಾಡಕ್ಕೆ ಇಳಿದ ಟೋಲ್‌ಗೇಟ್ ಹೋರಾಟಗಾರರನ್ನು ಪೊಲೀಸರು ಇಂದು ವಶಕ್ಕೆ ತೆಗೆದುಕೊಳ್ಳುವ ಮೂಲಕ ವಿವಾದಾತ್ಮಕ ಟೋಲ್‌ಗೇಟ್ ವಿರುದ್ಧದ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಕಳೆದ 7 ವರ್ಷಗಳಿಂದ ವಿವಾದಾತ್ಮಕ ಟೋಲ್‌ಗೇಟ್ ಆಗಿ ರೂಪುಗೊಂಡಿರುವ ಟೋಲ್‌ಗೇಟನ್ನು ತೆರವುಗೊಳಿಸಲು ಹಲವು ಹೋರಾಟದ ಬಳಿಕ ಇಂದು ಬೆಳಿಗ್ಗೆ ದೊಡ್ಡ ಮಟ್ಟದ ಹೋರಾಟ ಆಯೋಜಿಸಿತ್ತು.
ಸಂಸದ ನಳಿನ್ ಕುಮಾರ್ ಮತ್ತೆ 20 ದಿನಗಳ ಕಾಲಾವಕಾಶ ಕೇಳಿದ್ದರೂ ಪಟ್ಟು ಬಿಡದ ಪ್ರತಿಭಟನಾಕಾರರು ಟೋಲ್‌ಗೇಟ್ ತೆರವು ಮಾಡದೇ ಮಾಡ್ತೀವಿ, ಇವತ್ತಿನಿಂದಲೇ ಶುಲ್ಕ ವಸೂಲಾತಿ ಕೈಬಿಡಿ ಎಂದು ಆಗ್ರಹಿಸಿದ್ದರು.
ಈ ನಡುವೆ ಪೊಲೀಸರು ರಾತೋರಾತ್ರಿ ಪ್ರತಿಭಟನಾಕಾರರ ಮನೆಗೆ ನುಗ್ಗಿ ನೊಟೀಸ್ ನೀಡಿ ಹೋರಾಟ ಹತ್ತಿಕ್ಕಲು ಯತ್ನಿಸಿದ್ದರು. ಇದರಿಂದ ಪ್ರತಿಭಟನಾಕಾರರ ಆಕ್ರೋಶ ಇನ್ನುಷ್ಟ ಹೆಚ್ಚಾಗಿತ್ತು.
ಇಂದು ಬೆಳಿಗ್ಗೆಯಿಂದಲೇ ಟೋಲ್‌ಗೇಟ್ ಬಳಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರೂ ಕ್ಯಾರೇ ಅನ್ನದೇ ಪ್ರತಿಭಟನಾಕಾರರು ಜಮಾಯಿಸಿ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸತೊಡಗಿದ್ದರು. ಸರಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಧಿಕ್ಕಾರ ಕೂಗುತ್ತಾ ಶಾಂತಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರು.
ಈ ನಡುವೆ ಏಕಾಏಕಿ ಟೋಲ್‌ಗೇಟ್ ಬಳಿಗೆ ಹೊರಟ ಪ್ರತಿಭಟನಾಕಾರರಿಗೆ ಪೊಲೀಸರು ತಡೆಯೊಡ್ಡಿ ಅವರನ್ನು ದರದರನೇ ಎಳೆದೊಯ್ದು ವಶಕ್ಕೆ ಪಡೆದಿದ್ದಾರೆ.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಐವನ್ ಡಿ ಸೋಜಾ, ಮಿಥುನ್ ರೈ, ವಿನಯಕುಮಾರ್ ಸೊರಕೆ, ಜೆ ಆರ್ ಲೋಬೋ, ಯಶವಂತ ಮರೋಳಿ, ಅಕ್ಷಿತ್ ಸುವರ್ಣ, ದಿನೇಶ್ ಹೆಗ್ಡೆ ಉಳೇಪಾಡಿ, ಆರ್ ಪದ್ಮರಾಜ್ ಸಹಿತ ಹಲವು ಮಂದಿ ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲದೇ, ಉಡುಪಿ ಭಾಗದಿಂದಲೂ ಆಗಮಿಸಿದ್ದ ಹೋರಾಟಗಾರರು ಟೋಲ್‌ಹೆಸರಿನಲ್ಲಿ ವಸೂಲಿ ಮಾಡುತ್ತಿರುವ ಸರಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಕೂಡಾ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ವಾಗ್ದಾಳಿ ನಡೆಸಿದರು.
ಪೊಲೀಸರು ಬಿಗು ಬಂದೋಬಸ್ತ್ ಕ್ರಮ ಕೈಗೊಂಡಿದ್ದು, ಬಳಿಕ ಹೆದ್ದಾರಿಯನ್ನು ತೆರವುಗೊಳಿಸಿದರು.
ಸುರತ್ಕಲ್ ಟೋಲ್‌ಗೇಟ್‌ನ್ನು ತೆರವುಗೊಳಿಸಲು ಇಂದು ಮುಂಜಾನೆಯಿಂದಲೇ ಹೋರಾಟಗಾರರು ಸ್ಥಳಕ್ಕೆ ಆಗಮಿಸಿದ್ದು ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿಯನ್ನು ನಿಯಂತ್ರಿಸಲಾಗದೆ ಪೊಲೀಸರು ಎತ್ತಿಕೊಂಡು ಹೋಗುವ ದೃಶ್ಯ ಕೂಡಾ ಕಂಡುಬಂದಿತ್ತು.
ಇನ್ನು ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಟೋಲ್‌ಗೇಟ್ ಮೇಲೇರಿ ಘೋಷಣೆ ಕೂಗಿದರು, ಏಕಾಏಕಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೋರಾಟಗಾರರನ್ನು ಎಳೆದುಕೊಂಡು ಹೋಗುವ ಪರಿಸ್ಥಿತಿಯೂ ನಿರ್ಮಾಣವಾಯಿತು.
ಈ ಸಂದರ್ಭ ಓರ್ವ ಮಹಿಳೆಯೂ ಸೇರಿದಂತೆ ಅನೇಕರು ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿದರು. ‘ಇದೇನಾ ಹೆಣ್ಣು ಮಕ್ಕಳಿಗೆ ಬಿಜೆಪಿ ಸರ್ಕಾರ ಕೊಡುವ ಗೌರವ’ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿಯಿಂದ ಹೊಡೆದಿದ್ದು, ಅಬ್ದುಲ್ ಖಾದರ್ ಎಂಬವರು ಗಾಯಗೊಂಡಿದ್ದು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸುರತ್ಕಲ್ ಟೋಲ್‌ಗೇಟ್ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು , ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಕಾರ್ಯಾಚರಣೆ ತಡೆಯಲು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಾಗೂ ಜಿಲ್ಲೆಯ ಹೆಚ್ಚುವರಿ ಪೊಲೀಸರನ್ನು ಸೋಮವಾರದ ಸಂಜೆಯಿಂದಲೇ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಸುಮಾರು 400ಕ್ಕೂ ಅಧಿಕ ಹೆಚ್ಚು ಪೊಲೀಸರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.