Sunday, January 19, 2025
ಸುದ್ದಿ

ಹರಿಪಾದ ಸೇರಿದ ಶಿರೂರು ಶ್ರೀ ; ವಿಷಪ್ರಾಶನ ಶಂಕೆ – ಕಹಳೆ ನ್ಯೂಸ್

ಉಡುಪಿ: ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಯತಿ ಪರಂಪರೆಯಲ್ಲಿ 30ನೆಯವರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು (55) ಹರಿಪಾದ ಸೇರಿದ್ದಾರೆ. ತೀವ್ರ ಅಸ್ವಸ್ಥಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದು, ವಿಷಪ್ರಾಶನ ಶಂಕೆ ವ್ಯಕ್ತವಾಗಿದೆ.

ಚುನಾವಣೆ ಸ್ಪರ್ಧೆ, ವಿವಾದಾತ್ಮಕ ಹೇಳಿಕೆ, ಅಷ್ಟಮಠದ ಇತರ ಸ್ವಾಮೀಜಿಗಳ ಜತೆಗಿನ ಭಿನ್ನಾಭಿಪ್ರಾಯದಿಂದ ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಸಿದ್ದ ಶ್ರೀಗಳ ಆರೋಗ್ಯ ಕೆಲ ಸಮಯದಿಂದ ಆಗಾಗ ಕೈಕೊಡುತ್ತಿತ್ತು. ಹೀಗಿದ್ದರೂ ಜುಲೈ 17ರಂದು ಆರೋಗ್ಯವಾಗಿ ಉತ್ಸಾಹದಿಂದಲೇ ಇದ್ದರು. ಅದೇ ದಿನ ಮಧ್ಯಾಹ್ನ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಅವರನ್ನು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆ ಮತ್ತು ರಕ್ತಸ್ರಾವ ಅಧಿಕಗೊಂಡ ಕಾರಣ ಅಲ್ಲಿಂದ ಜುಲೈ 18ರಂದು ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದರೂ ಸ್ಪಂದಿಸಿಲ್ಲ. ಗುರುವಾರ ಬೆಳಗ್ಗೆ 8.30ರ ವೇಳೆಗೆ ಬಹುಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಗಳ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ವಿಷಪ್ರಾಶನ ಆಗಿರುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಅಧೀಕ್ಷಕರೇ ಹೇಳಿದ್ದಾರೆ. ಇದರೊಂದಿಗೆ ಪ್ರಕರಣ ತಿರುವು ಪಡೆದಿದ್ದು, ಪೊಲೀಸರ ಮಧ್ಯಪ್ರವೇಶದೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇತ್ತ ಪೂರ್ವಾಶ್ರಮದ ಕುಟುಂಬವೂ ಪೊಲೀಸರಿಗೆ ದೂರು ನೀಡಿದ್ದು, ವಿಷಪ್ರಾಶನ ಶಂಕೆ ಹಿನ್ನೆಲೆಯಲ್ಲಿ ತನಿಖೆಗೆ ಒತ್ತಾಯಿಸಿದೆ. ಮರಣೋತ್ತರ ಪರೀಕ್ಷೆಯನ್ನು ಆಧರಿಸಿ ಮುಂದಿನ ತನಿಖೆ ನಡೆಯಲಿದೆ. ಶಿರೂರು ಮೂಲ ಮಠಕ್ಕೆ ಈಗ ಪೊಲೀಸ್ ಕಾವಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಥಬೀದಿಯಲ್ಲಿ ಮೆರವಣಿಗೆ

ಶಿರೂರು ಶ್ರೀಗಳ ದೇಹಾಂತ್ಯ ಘೊಷಣೆಯಾಗಿದ್ದು ಗುರುವಾರ ಬೆಳಗ್ಗೆ 8.30ಕ್ಕೆ. ಆದರೆ ಬುಧವಾರ ರಾತ್ರಿಯೇ ಶ್ರೀಗಳ ದೇಹಾರೋಗ್ಯ ವಿಷಮ ಸ್ಥಿತಿ ತಲುಪಿದ್ದರಿಂದ ಮುಂಜಾನೆಯೇ ಆಸ್ಪತ್ರೆ ಆವರಣದಲ್ಲಿ ಭಕ್ತಸಾಗರ ನೆರೆದಿತ್ತು. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಅಪರಾಹ್ನ 3.30ಕ್ಕೆ ರಥಬೀದಿಯಲ್ಲಿರುವ ಶಿರೂರು ಮಠಕ್ಕೆ ಪಾರ್ಥಿವ ಶರೀರ ಕೊಂಡೊಯ್ದು ವಿಧಿವಿಧಾನ ಪೂರೈಸಲಾಯಿತು. ಕನಕ ಮಂಟಪದಿಂದ ಕನಕನ ಕಿಂಡಿಯ ಮೂಲಕ ಶ್ರೀಗಳಿಗೆ ಅಂತಿಮ ಶ್ರೀಕೃಷ್ಣ ದರ್ಶನ ಮಾಡಿಸುವ ಸಂದರ್ಭ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ತುಳಸಿ ಮಾಲಾರ್ಪಣೆ ಮಾಡಿ, ಆರತಿ ಬೆಳಗಿದರು. ರಾತ್ರಿ ಹಿರಿಯಡ್ಕ ಸಮೀಪದ ಮೂಲಮಠದಲ್ಲಿ ಧಾರ್ವಿುಕ ವಿಧಿಗಳ ಬಳಿಕ ಸಮಾಧಿ ಮಾಡಲಾಗಿದೆ. ಇದೇ ಜಾಗದಲ್ಲಿ ವೃಂದಾವನ ನಿರ್ವಣಗೊಳ್ಳಲಿದೆ.

ಶಿರೂರು ಶ್ರೀಗಳಿಗೆ ವಿಷಪ್ರಾಶನವಾದ ಬಗ್ಗೆ ಮಾಹಿತಿ ಇಲ್ಲ. ಫುಡ್ ಪಾಯ್ಸನ್ ಆಗಿದೆ ಎಂದು ಅವರ (ಪೂರ್ವಾಶ್ರಮದ) ಅಣ್ಣ ನನಗೆ ಫೋನ್ ಮಾಡಿ ಹೇಳಿದ್ದರು. ಅವರು ಎಲ್ಲಿ ಆಹಾರ ಸ್ವೀಕಾರ ಮಾಡಿದ್ದರೋ ಗೊತ್ತಿಲ್ಲ. ಅವರ ಲಿವರ್, ಕಿಡ್ನಿ ಫೇಲ್ ಆಗಿತ್ತು ಎಂಬ ಮಾಹಿತಿಯನ್ನು ನೀಡಲಾಗಿತ್ತು.

| ಶ್ರೀ ವಿಶ್ವೇಶತೀರ್ಥರು ಪೇಜಾವರ ಮಠಾಧೀಶ

ಜೀವನಯಾತ್ರೆ..

ಜನನ: 08-06-1964

ಸನ್ಯಾಸ: 02-07-1971

ಪ್ರಥಮ ಪರ್ಯಾಯ: 1978-80

ದ್ವಿತೀಯ ಪರ್ಯಾಯ: 1996-98

ತೃತೀಯ ಪರ್ಯಾಯ: 2012-14

ನಿಧನ: 19-07-2018

ವೈವಿಧ್ಯಮಯ ವ್ಯಕ್ತಿತ್ವ

# ಸಂಗೀತ, ಸಾಹಿತ್ಯದ ಜತೆಗೆ ಶ್ರೀಗಳು ಉತ್ತಮ ಈಜುಪಟು

# ಶಿವಮಣಿ ಜತೆ ಡ್ರಮ್ ವಾದನದಲ್ಲಿ ಭಾಗಿಯಾದ ಖ್ಯಾತಿ

# ಹುಲಿವೇಷದಲ್ಲಿ ಹೆಚ್ಚಿನ ಆಸಕ್ತಿ, ವೇಷಧಾರಿಗಳಿಗೆ ಪ್ರೋತ್ಸಾಹ

# 2ನೇ ಪರ್ಯಾಯದಲ್ಲಿ ಕೃಷ್ಣ ದೇವರಿಗೆ 365 ಬಗೆಯ ಅಲಂಕಾರ ಮಾಡಿದ್ದರು

ಅನುಮಾನಕ್ಕೆ ಕಾರಣಗಳು?

# ಶ್ರೀಗಳ ಸಾವಿಗೆ ವಿಷದ ಅಂಶ ಕಾರಣ ಎಂಬ ವೈದ್ಯರ ವರದಿ

# ಅಷ್ಟಮಠಗಳ ನಡುವಿನ ತಿಕ್ಕಾಟದ ಸಂದರ್ಭದಲ್ಲೇ ಸಾವನ್ನಪ್ಪಿರುವುದು

# ಆರೋಗ್ಯವಾಗಿಯೇ ಇದ್ದ ಶ್ರೀಗಳು ದಿಢೀರ್ ಅನಾರೋಗ್ಯಕ್ಕೀಡಾಗಿದ್ದು

# ತಮಗೆ ಜೀವಭದ್ರತೆ ಇದ್ದು, ಗನ್ ಮ್ಯಾನ್ ಬೇಕೆಂದು ಶ್ರೀಗಳು ಕೋರಿಕೆ ಇಟ್ಟಿದ್ದು

# ಶ್ರೀಗಳ ಅನುಯಾಯಿಗಳೇ ಸಾವಿಗೆ ಅನುಮಾನ ಸೂಚಿಸಿ ತನಿಖೆಗೆ ಆಗ್ರಹಿಸಿರುವುದು

ಸ್ನೇಹಜೀವಿ, ಜನಾನುರಾಗಿ

# ಎಂಆರ್​ಪಿಎಲ್ ವಿರೋಧಿ ಆಂದೋಲನದ ವೇಳೆ ಮಠದಲ್ಲಿ 8-10 ಸಾವಿರ ಜನರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು.

# ಮಠಕ್ಕೆ ಬರುವ ಬಡವರಿಗೆ ಊಟದ ಜತೆಗೆ ಹಣಕಾಸು ನೆರವನ್ನೂ ನೀಡುತ್ತಿದ್ದರು

# ಉಡುಪಿ ನಗರಕ್ಕೆ ನೀರಿನ ಸಮಸ್ಯೆ ಎದುರಾದಾಗ ಖುದ್ದು ನಿಂತು ಸಮಸ್ಯೆ ಬಗೆಹರಿಸಿದ್ದರು

ಶಿರೂರು ಶ್ರೀಗಳ ಅಕಾಲಿಕ ನಿಧನ ಧಾರ್ವಿುಕ ಕ್ಷೇತ್ರಕ್ಕೆ ಅಪಾರ ನಷ್ಟ ತಂದಿದೆ. ಅಗತ್ಯಬಿದ್ದರೆ ಅವರ ಸಾವಿನ ಅನುಮಾನಗಳಿಗೆ ತನಿಖೆ ನಡೆಸಲಾಗುವುದು.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ