ಉಡುಪಿ, ಜುಲೈ. 20: ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀ ಪಾದರು ಪೂಜೆ, ಧ್ಯಾನ, ಪ್ರವಚನಕ್ಕಿಂತಲೂ ಹೆಚ್ಚಾಗಿ ಭಕ್ತರ ಜೊತೆಗೆ ಒಡನಾಟವಿಟ್ಟುಕೊಂಡಿದ್ದರು. ಜಾತ್ಯತೀತ ನಿಲುವುಗಳಿಂದ ಅಷ್ಠಮಠಗಳ ಇತರ ಯತಿಗಳ ಪೈಕಿ ಶಿರೂರು ಶ್ರೀಗಳು ಭಿನ್ನವಾಗಿದ್ದರು. ಯತಿಗಳು ಹೀಗೆಯೇ ಬದುಕಬೇಕು ಎಂಬ ಧಾರ್ಮಿಕ ಚೌಕಟ್ಟನ್ನು ಮೀರಿದವರಾಗಿದ್ದರು. ಇವರು ಕೇವಲ ಮನುಷ್ಯರಲ್ಲಿ ಮಾತ್ರ ತಮ್ಮ ಮಾನವೀಯತೆ ಮೆರೆಯದೆ, ಪ್ರಾಣಿ ಜೀವಿಗಳಲ್ಲೂ ತಮ್ಮ ಪ್ರೀತಿ ಕಾಳಜಿ ತೋರಿಸಿದವರಾಗಿದ್ದರು.
ಇದಕ್ಕೆ ಸಾಕ್ಷಿ, ಮಠದಲ್ಲಿ ಶ್ರೀಗಳನ್ನು ಕಾಣದೆ ರೋಧಿಸುತ್ತಿರುವ ರೂಬಿ ಹೆಸರಿನ ನಾಯಿ. ಸ್ವಾಮೀಜಿಯ ಅಗಲಿಕೆಯಿಂದ ಈ ನಾಯಿ ಮಠದಲ್ಲಿ ರೋಧಿಸುತ್ತಿದೆ. ದಿನನಿತ್ಯ ಸ್ವಾಮೀಜಿ ಜೊತೆ ಓಡಾಡುತ್ತಿದ್ದ ರೂಬಿ ಮಠದಲ್ಲಿ ಸ್ವಾಮೀಜಿಯಿಲ್ಲದೆ ಕಂಗಾಲಾಗಿದೆ.
ಸುಮಾರು ಎರಡು ವರ್ಷಗಳ ಹಿಂದೆ ಸ್ವಾಮೀಜಿ 10 ಸಾವಿರ ರೂ.ಕೊಟ್ಟು ಈ ನಾಯಿಯನ್ನು ಖರೀದಿಸಿದ್ದರು. ಅಂದಿನಿಂದ ದಿನವಿಡೀ ಈ ನಾಯಿ ಸ್ವಾಮೀಜಿಗಳ ಜೊತೆಯೇ ಓಡಾಡುತ್ತಿತ್ತು. ಸ್ವಾಮೀಜಿಗಳಿಗೂ ಈ ನಾಯಿ ಮೇಲೆ ಅಪಾರ ಪ್ರೀತಿಯಿತ್ತು. ಇದೀಗ ನಾಯಿ ಒಬ್ಬಂಟಿಯಾಗಿದ್ದು, ತಮ್ಮ ಒಡೆಯನಿಗಾಗಿ ರೋಧಿಸುತ್ತಿದೆ. ಮಾತ್ರವಲ್ಲ, ಶ್ರೀಗಳು ಪ್ರೀತಿಯಿಂದ ಬೆಳೆಸಿದ್ದ ಈ ಸಾಕು ನಾಯಿ ಸ್ವಾಮೀಜಿಗಳ ಸಮಾಧಿ ಸುತ್ತಮುತ್ತ ಒಡಾಡುತ್ತಿದೆ. ಶ್ರೀಗಳ ಅಗಲುವಿಕೆಯನ್ನು ಮರೆಯಲು ರೂಬಿ ಕಷ್ಟಪಡುತ್ತಿದ್ದು, ಒಡೆಯನ ಸಾವಿನಿಂದ ಅನಾಥವಾಗಿದೆ.