ಗುಜರಾತ್ : ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದು 135 ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಈವರೆಗೆ 185 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವು ಜನರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಮುಳುಗು ತಜ್ಞರು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ದುರಂತದ ಸ್ಥಳದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಚೆಕ್‌ಡ್ಯಾಂ ತೆರೆಯಲಾಗಿದೆ.
ನೀರಿನ ಮಟ್ಟ ಕಡಿಮೆಯಾದರೆ, ಕಾರ್ಯಾಚರಣೆಗೆ ಅನುಕೂಲವಾಗ ಬಹುದು ಎಂದು ರಾಜ್‌ಕೋಟ್ ಜಿಲ್ಲಾಧಿಕಾರಿ ಅರುಣ್ ಮಹೇಶ್ ಬಾಬು ಮಾಹಿತಿ ನೀಡಿದ್ದಾರೆ.
230 ಮೀಟರ್ ಉದ್ದದ ಈ ಸೇತುವೆಯನ್ನು 19ನೇ ಶತಮಾನದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದು, ನವೀಕರಣದ ಪ್ರಯುಕ್ತ ಈ ಸೇತುವೆಯಲ್ಲಿ ಕಳೆದ ಆರು ತಿಂಗಳಿನಿಂದ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ನಾಲ್ಕು ದಿನಗಳ ಹಿಂದೆಯಷ್ಟೇ ಅಂದರೆ ಅಕ್ಟೋಬರ್ 26 ರಂದು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.
ರಾಜ್ಯದ ರಾಜಧಾನಿ ಅಹಮದಾಬಾದ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ತೂಗು ಸೇತುವೆಯು ಭಾನುವಾರ ಸಂಜೆ 6.42 ಕ್ಕೆ ಕುಸಿದು ಬಿದ್ದಿದೆ, ಸುಮಾರು 500 ಜನರು ಛತ್ ಪೂಜೆಯ ಕೆಲವು ಆಚರಣೆಗಳನ್ನು ಮಾಡಲು ಸೇತುವೆಯ ಮೇಲೆ ಜಮಾಯಿಸಿದ್ದರು ಎನ್ನಲಾಗಿದೆ.
ಜನರ ಭಾರ ಹೆಚ್ಚಾಗಿ ಸೇತುವೆ ಕುಸಿದಿದೆ ಎನ್ನಲಾಗಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ