Friday, September 20, 2024
ಸುದ್ದಿ

Big News : ಕ್ಯಾಂಡಲ್ ಸಂತು ಕೊಲೆ ಪ್ರಕರಣ ಇಕ್ಬಾಲ್ ಹಾಗೂ ಫಾರೂಕ್ ಗೆ ಜೀವಾವಧಿ ಶಿಕ್ಷೆ – ಕಹಳೆ ನ್ಯೂಸ್

ಬಂಟ್ವಾಳ : ಪೊಳಲಿ ಬಡಕಬೈಲು ನಿವಾಸಿ ಕ್ಯಾಂಡಲ್ ಸಂತು ಯಾನೆ ಸಂತೋಷ್ ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಬಂದರು ಅನ್ಸಾರ್ ರಸ್ತೆ ನಿವಾಸಿ ಇಕ್ಬಾಲ್(39) ಹಾಗೂ ಕಾರ್ಕಳ ಕುಕ್ಕುಂದೂರು ಬಂಗ್ಲೆಗುಡ್ಡೆ ನಿವಾಸಿ ಾರೂಕ್(30) ಶಿಕ್ಷೆಗೊಳಗಾದ ಅಪರಾಧಿಗಳು. ಪರಿಹಾರದ 2 ಲಕ್ಷ ರೂ. ಹಣದಲ್ಲಿ 1.80 ಲಕ್ಷ ರೂ. ಕೊಲೆಯಾದ ಕ್ಯಾಂಡಲ್ ಸಂತು ಪೋಷಕರಿಗೆ, 20 ಸಾವಿರ ರೂ. ಸರ್ಕಾರಕ್ಕೆ ಸಲ್ಲಿಕೆಯಾಗಬೇಕೆಂದು ತೀರ್ಪಿನಲ್ಲಿ ತಿಳಿಸಿದೆ.
ಈ ಕೊಲೆ ಪ್ರಕರಣದಲ್ಲಿ ಒಟ್ಟು 22 ಮಂದಿ ಆರೋಪಿಗಳಿದ್ದು, 13 ಮಂದಿ ಖುಲಾಸೆಗೊಂಡು, 3 ಮಂದಿ ತಲೆ ಮರೆಸಿಕೊಂಡಿದ್ದಾರೆ. 4 ಮಂದಿ ವಿವಿಧ ಕಾರಣಗಳಲ್ಲಿ ಮೃತರಾಗಿದ್ದಾರೆ. ಶಿಕ್ಷೆಗೊಳಗಾದ ಇಕ್ಬಾಲ್ ಪ್ರಕರಣದ ಪ್ರಮುಖ ಆರೋಪಿ. ಫಾರೂಕ್ 6ನೇ ಆರೋಪಿ.

ಪ್ರಕರಣ ವಿವರ: 2009 ೆ.18ರಂದು ಬೆಳಗ್ಗೆ 9.30ರ ವೇಳೆಗೆ ಕ್ಯಾಂಡಲ್ ಸಂತು ಬಂಟ್ವಾಳ ತಾಲೂಕಿನ ಬಡಕಬೈಲು ಬಸ್ ನಿಲ್ದಾಣ ಬಳಿ ಮೋರಿಯಲ್ಲಿ ಕುಳಿತುಕೊಂಡಿದ್ದ ವೇಳೆ ಸ್ಕಾರ್ಪಿಯೋ ಹಾಗೂ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರ್‌ನಿಂದ ದಾಳಿ ಮಾಡಿತ್ತು. ವಾಹನಗಳು ಬಂದು ನಿಲ್ಲುತ್ತಿದ್ದಂತೆ ಗಮನಿಸಿದ ಕ್ಯಾಂಡಲ್ ಸಂತು ಅಪಾಯ ಅರಿತು ಅಲ್ಲಿಂದ ಓಡಲು ಯತ್ನಿಸಿದ್ದ. ಆದರೆ ಸಂತುವಿನ ಕಾಲು ಮತ್ತು ಕೈ ಮೊದಲೇ ಘಟನೆಯೊಂದರಲ್ಲಿ ಗಾಯಗೊಂಡ ಕಾರಣ ಓಡಲು ಸಾಧ್ಯವಾಗಲಿಲ್ಲ. ಈ ಸಂದರ್ಭ ಆರೋಪಿಗಳು ಬೆನ್ನಟ್ಟಿ ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದರು. ಸ್ಥಳೀಯರು ಕೂಡಲೇ ಸಂತೋಷ್‌ನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ 25 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿ, ಶಿಕ್ಷೆ ಪ್ರಕಟಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಹಿಂದಿನ ಇನ್‌ಸ್ಪೆಕ್ಟರ್ ನಂಜುಂಡೇಗೌಡ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಸರ್ಕಾರದ ಪರವಾಗಿ ವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುಮಾನ ಘೋಷಣೆ: ಪ್ರಕರಣದ ತನಿಖೆ ನಡೆಸಿದ ಆಗಿನ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ನಂಜುಂಡೇಗೌಡ ಮತ್ತು ಸಿಬ್ಬಂದಿಯ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಶ್ಲಾಘಿಸಿದ್ದು, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಜಾಹೀರಾತು

ಕೊಲೆಗೆ ವಿದೇಶದಲ್ಲಿ ಸ್ಕೆಚ್: ಆರೋಪಿಗಳು ವಿದೇಶದಲ್ಲಿದ್ದುಕೊಂಡೇ ಕ್ಯಾಂಡಲ್ ಸಂತು ಕೊಲೆಗೆ ಸ್ಕೆಚ್ ಹಾಕಿದ್ದರು. ಆರೋಪಿಗಳಿಗೆ ಸುಪಾರಿ ನೀಡಿದ್ದ ಪ್ರಕರಣದ ಆರೋಪಿ ಮಾಡೂರು ಇಸುಬು 2015 ನ.2ರಂದು ನಗರದ ಜೈಲ್‌ನಲ್ಲಿ ಕೊಲೆಯಾಗಿದ್ದ. ಆರೋಪಿಗಳ ಬಂಧನ ಸಂದರ್ಭ 2 ಲಕ್ಷ ರೂ. ಸುಪಾರಿ ಹವಾಲ ಹಣವನ್ನು ಮುಟ್ಟುಗೋಲು ಹಾಕಲಾಗಿತ್ತು. ಸಂತು ಕೊಲೆ ಪ್ರಕರಣದ ಇನ್ನುಳಿದ ಆರೋಪಿಗಳಾದ ಮಾಡೂರು ಇಸ್ಮಾಯಿಲ್ ಹೃದಾಯಘಾತಗೊಂಡು ಸಾವನ್ನಪ್ಪಿದ್ದರೆ, ಕುಕ್ಕುಂದೂರು ನಿವಾಸಿ ಸುಲೈಮಾನ್ ಯಾನೆ ಖಾದರ್ ಕಾರ್ಕಳದಲ್ಲಿ ಕೊಲೆಯಾಗಿದ್ದ.

ಕೊಲೆಗೆ ಕಾರಣ ಏನು?:  2006ರ ಏ.9ರಂದು ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ದ್ವಾರದ ಬಳಿ ಗುಜರಿ ಅಂಗಡಿ ಹೊಂದಿದ್ದ ಮಲ್ಲೂರು ಹಮೀದ್ ಎಂಬುವನನ್ನು ಕೊಲೆಗೈದ ಪ್ರಕರಣ ಮತ್ತು 2000 ಡಿ.23ರಂದು ಮಂಗಳೂರು ಗುರುಪುರ ಕೈಕಂಬದ ರಫೀಕ್ ಎಂಬುವರನ್ನು ಕೊಲೆಗೈದ ಪ್ರಕರಣದಲ್ಲಿ ಕ್ಯಾಂಡಲ್ ಸಂತು ಆರೋಪಿಯಾಗಿದ್ದ. ಈ ಸೇಡಿನಿಂದ ಮಾಡೂರು ಇಸುಬು ಸಂತುವಿನ ಕೊಲೆಗೆ ಸ್ಕೆಚ್ ರೂಪಿಸಿದ್ದ ಎಂಬುವುದನ್ನು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದರು.