ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ಇತ್ತೀಚೆಗೆ ಆಪ್ತರಾಗಿದ್ದ ಕಾರ್ಕಳದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಹಿಳೆಯ ಜತೆಗೆ ಆಕೆಯ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಕಾರನ್ನು ಸ್ವಾಮೀಜಿ ಅವರೇ ನೀಡಿದ್ದರು. ಆಕೆ ಶಿರೂರು ಶ್ರೀಗಳಿಗೆ ಇದೇ ಕಾರಿನಲ್ಲಿ ಆಹಾರ ಕಳುಹಿಸಿಕೊಡುತ್ತಿದ್ದಳು ಅಥವಾ ತಾನೇ ಡ್ರೈವ್ ಮಾಡಿಕೊಂಡು ಆಹಾರ ತಂದುಕೊಡುತ್ತಿದ್ದಳು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲೇ ಪೊಲೀಸರು ಆಕೆಯ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸರು ಮಾತ್ರ ಈ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ.
ಶಿರೂರು ಶ್ರೀಗೆ ಹೆಂಗಸರ ಸಹವಾಸ, ಮದ್ಯ ಸೇವನೆ ವ್ಯಸನ, ಪುಂಡಾಟಿಕೆ – ಪೇಜಾವರ ಶ್ರೀ
ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಮೊದಲಿನಿಂದಲೂ ಅನಾರೋಗ್ಯವಿತ್ತು. ಅವರು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಪುಂಡಾಟಿಕೆ ನಡೆಸಿ ಬೆದರಿಕೆ ಒಡ್ಡಿದ ಪ್ರಕರಣಗಳೂ ಅವರ ವಿರುದ್ಧ ಇದ್ದವು. ಅವರಿಗೆ ಮೊದಲೇ ಒಬ್ಬರು ಮಹಿಳೆಯೊಂದಿಗೆ ಸಂಬಂಧ ಇತ್ತು. ಇತ್ತೀಚೆಗೆ ಇನ್ನೊಬ್ಬ ಮಹಿಳೆಯೊಂದಿಗೂ ಸಂಬಂಧ ಬೆಳೆದಿತ್ತು. ಈ ಇಬ್ಬರು ಮಹಿಳೆಯರ ಮಧ್ಯೆ ಜಗಳವಾಗಿದ್ದು, ಇವು ಅವರ ಸಾವಿಗೆ ಕಾರಣವಾಗಿರಬಹುದು. ಇದು ಕೊಲೆ ಎಂಬುದನ್ನು ನಾನು ಒಪ್ಪಲಾರೆ. ಅಷ್ಟಮಠಾಧೀಶರು ವಿಷಪ್ರಾಶನ ಮಾಡಿಸಿದ್ದಾರೆ ಎಂಬ ಆರೋಪವೇ ದೊಡ್ಡ ಅಪರಾಧ. ಆದರೂ, ಅಗತ್ಯವಿದ್ದರೆ ಯಾವುದೇ ರೀತಿಯ ತನಿಖೆಗೆ ನಾನು ಮತ್ತು ಅಷ್ಟಮಠಗಳು ಮುಕ್ತವಾಗಿದ್ದೇವೆ.