ಉಡುಪಿ, ಜು21: ಆಷಾಢ ಮಾಸ ಹಾಗೂ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಬಳಿಕವಷ್ಟೇ ಶಿರೂರು ಮಠಕ್ಕೆ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭ ಸಾಧ್ಯ ಎಂದು ದ್ವಂದ್ವ ಮಠ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಚರಾಸ್ತಿ, ಸ್ಥಿರಾಸ್ತಿ ಉಸ್ತುವಾರಿ ನಿರ್ವಹಣೆಗೆ ಐದು ಮಂದಿಯ ಸಮಿತಿ ನೇಮಿಸಲಾಗುವುದು. ಜೊತೆಗೆ ಶಿರೂರು ಮಠದ ಆಸ್ತಿ ಪಾಸ್ತಿ ಎಲ್ಲಿ, ಎಷ್ಟಿದೆ ಎನ್ನುವುದರ ದಾಖಲೆ ಕ್ರೋಡೀಕರಿಸಿ, ಪರಿಶೀಲಿಸಿ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.
18 ತುಂಬಿದ, ವಿದ್ಯಾವಂತ, ಪ್ರಾಥಮಿಕ ಶಾಸ್ತ್ರಾಭ್ಯಾಸ ಮಾಡಿದ ಅರ್ಹ ವ್ಯಕ್ತಿಯ ಜಾತಕ ಪರಿಶೀಲಿಸಿ ಆಯ್ಕೆಗೆ ಆದ್ಯತೆ. ಯೋಗ್ಯತೆ ಅರಿತು ಹಿರಿಯ ಯತಿಗಳ ಸಲಹೆ ಮಾರ್ಗದರ್ಶನ ಪಡೆದು ಸನ್ಯಾಸ ದೀಕ್ಷೆ, ಪೀಠ ನೀಡಲಾಗುವುದು. ವ್ಯಕ್ತಿತ್ವ ಗೊತ್ತಿಲ್ಲದ ವ್ಯಕ್ತಿಯನ್ನು ಏಕಾಏಕಿ ಆಯ್ಕೆ ಮಾಡಲಾಗದು. ದ್ವಂದ್ವ ಮಠದ ನೆಲೆಯಲ್ಲಿ ಮುಂದಿನ ಯತಿ ಶಿರೂರು ಮಠವನ್ನು ವ್ಯವಸ್ಥಿತವಾಗಿ, ಚೆನ್ನಾಗಿ ಆರ್ಥಿಕ ಋುಣ ಭಾರವಿಲ್ಲದಂತೆ ನಡೆಸುವಂತಾಗಬೇಕು ಎಂದು ಹೇಳಿದ್ದಾರೆ.