ಪ್ರಜಾಪ್ರಭುತ್ವದ ಆಧಾರ ಸ್ಥಂಭವೇ ಮಾಧ್ಯಮ ; ಪತ್ರಿಕಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್
ಪುತ್ತೂರು: ಪ್ರಜಾಪ್ರಭುತ್ವದ ಆಧಾರ ಸ್ಥಂಭವೇ ಈ ಮಾಧ್ಯಮ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ತರ ಜವಬ್ದಾರಿ ಪತ್ರಕರ್ತರಿಗಿದೆ. ಭಾರತ ಪತ್ರಿಕೋದ್ಯಮ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ತನ್ನ ಯೋಚನಾಧಾರೆಯನ್ನು ಕೇವಲ ಒಂದೇ ವಿಚಾರಧಾರೆಗೆ ಮೀಸಲಿಡದೇ ಸಮಗ್ರವಾಗಿ ಬೆಳೆಯಲಿ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರು ತಾಲುಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತವಾದ ಪತ್ರಿಕಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಶನಿವಾರ ಮಾತನಾಡಿದರು.
ಪತ್ರಿಕೋದ್ಯಮದ ಭವಿಷ್ಯ ಇಂದಿನ ಯುವತೆಯನ್ನು ಅವಲಂಬಿಸಿದೆ. ಸಮಾಜವನ್ನು ಸದಾ ಎಚ್ಚರವಾಗಿಡುವುದು ಮಾಧ್ಯಮ. ಸಾಮಾಜಿಕ ಜಾಲತಾಣಗಳ ಅಪಬಳಕೆಯಾಗದೆ, ಸಮಾಜದ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಉಪಯೋಗ ಮಾಡಬೇಕು. ಸ್ವಚ್ಚ ಪತ್ರಿಕೋದ್ಯಮ ಬೆಳೆಯಲಿ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಅಳ್ವಾಸ್ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯಾ ಜೀವನ್‍ರಾಂ ವಿದ್ಯಾರ್ಥಿಗಳಿಗೆ ಕನ್ನಡ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ಪರಿಚಯಿಸಿ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪತ್ರಿಕೋದ್ಯಮ ಇತಿಹಾಸದ ಬಗೆಗೆ ಮೊದಲು ತಿಳಿದುಕೊಳ್ಳಬೇಕಾದ ಅವಶ್ಯಕತೆ ತುಂಬಾ ಇದೆ. ಇತಿಹಾಸ ತಿಳಿಯದೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಆ ಮಾರ್ಗವನ್ನು ಅನುಸರಿಸಿ ನಾವು ನಡೆದಾಗ ಮಾತ್ರ ಸ್ವಸ್ಥ್ಯ, ಸ್ವಚ್ಚ ಪತ್ರಿಕೋದ್ಯಮವನ್ನು ಬೆಳೆಸಲು ಸಾಧ್ಯ ಎಂದು ಸಲಹೆ ನೀಡಿದರು.
ಮಾಧ್ಯಮಗಳ ನಡುವೆ ಇರುವ ಸ್ಪರ್ಧೆಯ ಕುರಿತು ಮಾತನಾಡುತ್ತಾ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಸಮಾಜದಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿ ಮತ್ತೆ ಸಮಾಜಕ್ಕೇ ಹಂಚುತ್ತಾರೆ. ಆದರೆ ಕೆಲವೊಮ್ಮೆ ಮಾಹಿತಿಯನ್ನು ಮತ್ತೆ ಸಮಾಜಕ್ಕೆ ಹಂಚುವ ಸಂದರ್ಭದಲ್ಲಿ ಮಸಾಲೆಗಳು ಕೆಲವೊಮ್ಮೆ ಹರಚ್ಚಾಗಿ ಬೆರಕೆಯಾಗಿರುತ್ತದೆ. ಕೆಲವೊಮ್ಮೆ ಪತ್ರಕರ್ತರು ನಿಸ್ಸಹಾಯಕರು. ಮಾಧ್ಯಮ ದೊರೆಗಳು ಹೇಳಿದಂತೆ ನಡೆಯಲೇ ಬೇಕಾಗುತ್ತದೆ. ಬೇರೆ ವಿಧಿಯಿಲ್ಲ. ನಾಗರಿಕ ಪತ್ರಿಕೋದ್ಯಮದಲ್ಲಿ ಯುವತೆ ಸಕ್ರಿಯರಾಗಬೇಕಾಗಿದೆ. ಏನು ಮಾಡಬೇಕು, ಏನು ಮಾಡಬಾರದು ಸಾಧ್ಯಾಸಾಧ್ಯತೆಗಳನ್ನು ಅರಿತು ಮುಂದುವರೆಯಬೇಕು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲೇ ಇದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ನಡೆದಾಗ ಯಾರೂ ಮಾಧ್ಯಮದತ್ತ ಬೊಟ್ಟು ಮಾಡದ ದಿನ ಬಂದೇ ಬರುತ್ತದೆ ಎಂದರು.
ಭಾರತ ಸರಕಾರದ ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಪುತ್ತೂರಿನ ಜಯಪ್ರಕಾಶ್ ರಾವ್ ಬರೆದ ‘ಕಲಾಂ ಜೀವನ ಧರ್ಮ’ ಕೃತಿಯ ಎರಡನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಬಿ.ವಿ. ಅರ್ತಿಕಜೆ ಮಾತನಾಡಿ ನಡೆ ನುಡಿಗಳ ಚೊಕ್ಕಟವೇ ಧರ್ಮ ಎಂದು ಕಲಾಂರ ನೆನಪುಗಳನ್ನು ಹಂಚಿಕೊಂಡರು.
ಈ ಸಂದರ್ಭ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸುದ್ದಿ ಸಮೂಹ ಸಂಸ್ಥೆಗಳ ಮಾಲಿಕ ಡಾ. ಯು.ಪಿ. ಶಿವಾನಂದ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಜಗನ್ನಾಥ ಶೆಟ್ಟಿ ಬಾಳ ಹಾಗೂ ಅಡಿಕೆ ಪತ್ರಿಕೆ ಸಂಪಾದಕ, 17ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಕಾರಂತ ಪೆರಾಜೆ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದ ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ಬಿ. ಪುರಂದರ ಭಟ್ ಮಾತನಾಡಿ ಸನ್ಮಾನ ಎಂಬುವುದು ಪ್ರದರ್ಶನ ಅಲ್ಲ. ಆಗಲೂ ಬಾರದು. ಅದು ಆತ್ಮಕ್ಕೆ ಸಲ್ಲುವಂತದು. ನಿಜವಾದ ಸಾಧನೆಗೆ ಸಲ್ಲಲೇ ಬೇಕಾದ ಬದುಕಿನ ಮೌಲ್ಯ ಅದು. ಘನತೆ ಎನ್ನುವುದು ಗುಣತೆಗೆ ಸಂಬಂಧಿಸಿದ್ದು. ಗುಣತೆ ಇಲ್ಲದ ಅಭಿವ್ಯಕ್ತಿ ಇಲ್ಲ. ನಮ್ಮೊಳಗಿನ ಜ್ಞಾನದ ಗಂಗೆ ನಮಗೆ ಸಂತೋಷವನ್ನು ನೀಡುವಂತಾಗಬೇಕು. ಅದಕ್ಕೆ ನಾವು ಅರ್ಹತೆ ಪಡೆದುಕೊಳ್ಳಬೇಕು. ಅದಕ್ಕಾಗಿ ನಮ್ಮ ವ್ಯಕ್ತಿತ್ವ ಶುದ್ಧಿಯಾಗಬೇಕು. ಅನುಭವ ಅನುಭಾವವಾಗುತ್ತದೆ. ಅದು ತಿಳಿದಾಗ ಪತ್ರಿಕೋದ್ಯಮದ ಘನತೆ ಬೆಳೆಯುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚೆಪ್ಪಾಡಿ ಮಾತನಾಡಿ, ಕನ್ನಡ ಪತ್ರಿಕಾ ರಂಗದ ಹುಟ್ಟುಹಬ್ಬದ ತಿಂಗಳು ಇದು. ಪತ್ರಿಕೆಯೆಂದರೆ ಕೇವಲ ಪತ್ರಕರ್ತರಿಗೆ ಸಂಬಂಧಿಸಿದ್ದಲ್ಲ. ಓದುಗರು ಪತ್ರಿಕೆಯ ಅವಿಭಾಜ್ಯ ಅಂಗ ಎಂಬುವುದರಲ್ಲಿ ಎರಡು ಮಾತಿಲ್ಲ. ಸ್ವಚ್ಚ ಪತ್ರಿಕೋದ್ಯಮ ಹಾಗೂ ಪತ್ರಕರ್ತನ ಬದುಕು ಎರಡೂ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳೇ ಈ ಸಮಾಜವನ್ನು ರೂಪಿಸುವುದು. ಧನಾತ್ಮಕ ಅಂಶಗಳು ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ತಲುಪಬೇಕಾಗುತ್ತದೆ. ಗ್ರಾಮೀಣ ಭಾಗಕ್ಕೆ ತಲುಪುವ ಪ್ರಯತ್ನ ಈ ಸಂಘದ ವತಿಯಿಂದ ನಡೆಯುತ್ತಿದೆ. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪತ್ರಕರ್ತರು ತೊಡಗಿಸಿಕೊಳ್ಳುತ್ತಾ ಇದ್ದಾರೆ ಎನ್ನಲು ಹೆಮ್ಮೆಯಿದೆ.
ಈ ಸಂದರ್ಭ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವಿವಿಧ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಕಿರಣ್ ಪ್ರಸಾದ್ ಕುಂಡಡ್ಕ ಸ್ವಾಗತಿಸಿ, ಉಪಾಧ್ಯಕ್ಷ್ಯ ಸುಧಾಕರ್ ಸುವರ್ಣ ತಿಂಗಳಾಡಿ ಪ್ರಸ್ತಾವನೆಗೈದರು. ಸಂಘದ ಜತೆ ಕಾರ್ಯದರ್ಶಿ ಶ್ರವಣ್ ಕುಮಾರ್ ನಾಳ ವಂದಿಸಿದರು. ಹಿರಿಯ ಪತ್ರಕರ್ತ ಸಂಶುದ್ದೀನ್ ಕಾರ್ಯಕ್ರಮ ನಿರ್ವಹಿಸಿದರು.