ಶಿಮ್ಲಾ: ಐವತ್ತು ವರ್ಷಗಳ ಹಿಂದೆ ನಡೆದಿದ್ದ ಭಾರತೀಯ ವಾಯುಪಡೆಯ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಮೃತದೇಹ ಹಿಮಾಚಲ ಪ್ರದೇಶದ ಢಾಕಾ ಗ್ಲೇಷಿಯರ್ ಕ್ಯಾಂಪ್ ಬಳಿ ಹಿಮಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆಲ ಪರ್ವತಾರೋಹಿಗಳ ತಂಡ ಚಂದ್ರಭಾಗದ 13ನೇ ಶೃಂಗದ ಬಳಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದ ವೇಳೆ ಜು.1ರಂದು ಅವರಿಗೆ ಮೃತದೇಹ ಸಿಕ್ಕಿದೆ. ಇದೇ ವೇಳೆ ತಂಡಕ್ಕೆ ವಿಮಾನದ ಮತ್ತಷ್ಟು ಅವಶೇಷಗಳು ಸಿಕ್ಕಿವೆ. ಭಾರತದ ಪರ್ವತಾರೋಹಿಗಳ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು ಎನ್ನಲಾಗಿದೆ.
1968 ಫೆಬ್ರವರಿ 7ರಂದು ಚಂಡೀಗಢದಿಂದ ಲೇಹ್ಗೆ 102 ಜನರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ AN-12 ವಿಮಾನ ಹವಾಮಾನ ವೈಪರೀತ್ಯ ಉಂಟಾದ ಕಾರಣ ತನ್ನ ಸಂಪರ್ಕ ಕಳೆದುಕೊಂಡಿತ್ತು.
ನಂತರ ಹಿಮಾಚಲ್ ಪ್ರದೇಶದ ಲಹೌಲ್ ಕಣಿವೆಯ ಬಳಿ ಅಪಘಾತವಾಗಿರುವುದು ತಿಳಿದಿತ್ತು. 2003ರಲ್ಲಿ ಅಪಘಾತವಾಗಿದ್ದ ವಿಮಾನದ ಕೆಲವು ಅವಶೇಷಗಳು ದೊರೆತಿದ್ದವು.