ಉಪ್ಪಿನಂಗಡಿ : ಹೋಬಳಿ ಮಟ್ಟದ ನಾಡಕಚೇರಿ ನೂತನ ಕಟ್ಟಡಕ್ಕೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಪುತ್ತೂರು ತಾಲೂಕಿನ ಹಲವು ಗ್ರಾಮ ವ್ಯಾಪ್ತಿಯ ಈ ನಾಡಕಚೇರಿಯ ಕಟ್ಟಡ ನಾದುರಸ್ತಿಯಲ್ಲಿರುವ ಬಗ್ಗೆ ಮನವರಿಕೆಯಾಗಿದೆ. ಕಂದಾಯ ಇಲಾಖೆ ಬೇಡಿಕೆಯಂತೆ ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ಕಾದಿರಿಸಲಾಗಿದೆ. ನಾಡಕಚೇರಿ ಕಟ್ಟಡಕ್ಕೆ ಮುಕ್ತಿ ನಿಚ್ಚಳಗೊಂಡಿದೆ.
ಮಳೆಗಾಲ ಮುಗಿದ ಬಳಿಕ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. ಛಾವಣಿ ಸೋರಿಕೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಾಂತರಕ್ಕೆ ಬದಲಿ ಸರಕಾರಿ ಕಟ್ಟಡ ಹುಡುಕಾಟದಲ್ಲಿ ತೊಡಗಿದ್ದಾರೆ. ನೂತನ ಕಟ್ಟಡದ ಕಾಮಗಾರಿಯು 20 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ಗ್ರಾ.ಪಂ.ನಿಂದ ನಿರ್ಣಯ : ಗ್ರಾ.ಪಂ. ಕಚೇರಿಯ ಕಟ್ಟಡದಲ್ಲಿ ನಾಡಕಚೇರಿಗೆ ಸ್ಥಳಾವಕಾಶ ಕೋರಲಾಗಿತ್ತು. ಗ್ರಾ.ಪಂ. ಆಡಳಿತ ಹಳೆಯ ನಾಡ ಕಚೇರಿಯ ನೆಲ ಅಂತಸ್ತನ್ನು ಪಂಚಾಯತ್ ವಾಣಿಜ್ಯ ಸಂಕೀರ್ಣ ರಚಿಸಲು ಒದಗಿಸಿದರೆ ಮಾತ್ರ ಮೇಲಂತಸ್ತಿನಲ್ಲಿ ನಾಡಕಚೇರಿಗೆ ಸ್ಥಳ ನೀಡಲಾಗುವುದು ಎನ್ನುವ ನಿರ್ಣಯ ಮಾಡಿದೆ. ಜಿಲ್ಲಾಧಿಕಾರಿ ಜತೆ ಒಪ್ಪಂದದ ಚರ್ಚೆಗೆ ದಿನ ಕಾಯಲಾಗುತ್ತಿದೆ.