ಮೂಡುಬಿದಿರೆ : ಕ್ರೀಡೆ ದೇಹಶಕ್ತಿಯ ಕೇವಲ ಪ್ರದರ್ಶನವಲ್ಲ. ಅದು ಗೂಢವಾದ ಆತ್ಮಶಕ್ತಿಯ ದರ್ಶನ. ಇಲ್ಲಿ ಕಾಯ, ವಾಚ ಮಾನಸವೆಂಬ ಕರಣತ್ರಯಗಳ ಏಕೀಕರಣವಿದೆ. ಕ್ರೀಡೆಯಲ್ಲಿ ಕಾಯಕ್ಕೆ ವ್ಯಾಯಾಮ, ಮನದ ಏಕಾಗ್ರತೆಗೊಂದು ಆಯಾಮ, ವಚನ ವಿಶ್ವಾಸಕ್ಕೊಂದು ಸ್ಪೂರ್ತಿಧಾಮ. ಸಂಘಟಿತ ಸ್ಪರ್ಧಾತ್ಮಕ ಮತ್ತು ಕೌಶಲ್ಯದಿಂದ ಕೂಡಿದ ಕ್ರೀಡೆಯಲ್ಲಿ ಬದ್ಧತೆ ಮತ್ತು ನ್ಯಾಯಪರನಡೆಗಳಿವೆ ನಿಯಮಗಳ ಪಾಲನೆಯಿದೆ. ತತ್ವಗಳ ಸಮ್ಮೇಲನ ಇದೆ. ಬೌದ್ಧಿಕ ಉತ್ಕರ್ಷವಿದೆ. ಸಿದ್ಧಿಗೆ ಪ್ರಸಿದ್ಧಿಗೆ ಅವಕಾಶವಿದೆ ಎಂದು ಮಂಗಳೂರು ಪೋಲೀಸ್ ಮಹಾ ಆಯುಕ್ತರಾದ ಶ್ರೀ ಶಶಿಕುಮಾರ್ ಹೇಳಿದರು.
ಅವರು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟಗಳನ್ನು ಉದ್ಘಾಟಿಸುತ್ತಾ ಹೇಳಿದರು. ಶಿಕ್ಷಣಕಾಶಿ ಮೂಡುಬಿದಿರೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಶ್ರೇಷ್ಠಮಟ್ಟದ ಶಿಕ್ಷಣ ನೀಡಿ ಬದ್ಧತೆಗೆ ಉದಾಹರಣೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತಾಡಿದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಜೀವನ ಸ್ಫೂರ್ತಿಗೆ ಕ್ರೀಡೆಯ ತೊಡಗಿಸಿಕೊಳ್ಳುವಿಕೆ ಅನಿವಾರ್ಯ. ರಾಷ್ಟ್ರ ರಕ್ಷಣೆಗೆ ನಮ್ಮ ಮೈಮನಸ್ಸುಗಳು ಗಟ್ಟಿಯಾಗಲು ಈ ಕ್ರೀಡಾಂಗಣ ವೇದಿಕೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಸದೃಢ ಮನಸ್ಸಿಗೆ ಶರೀರ ಮಾಧ್ಯಮವಾಗಿರುತ್ತದೆ. ಆದ್ದರಿಂದ ದೇಹ ಮನಸ್ಸುಗಳು ಸಚಾರಿತ್ರ್ಯದಿಂದ ಮುಂದುವರಿಯಲು ಬೇಕಾದ ಕ್ರೀಡಾಮನೋಭಾವ ಎಲ್ಲರಲ್ಲೂ ತುಂಬಲಿ ಎಂದರು.
ವೇದಿಕೆಯಲ್ಲಿ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ವೆದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪೋಲೀಸ್ ಆಯುಕ್ತರಾದ ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾರಾದ ಶಿವಪ್ರಸಾದ್ ಭಟ್ ವಂದಿಸಿದರು. ಡಾ| ವಾದಿರಾಜ್ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ವಿಕ್ರಮ್ ನಾಯಕ್ ನಿರೂಪಿಸಿದರು. ಸಂಸ್ಥೆಯ 2000 ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಸಂಸ್ಥೆಯ ರಾಷ್ಟ್ರೀಯ ಕ್ರೀಡಾಪಟು ಲಿಖಿತ್ ಕ್ರೀಡಾಜ್ಯೋತಿ ಬೆಳಗಿಸಿದರು.