ಪುತ್ತೂರು : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಜನಸಾಮಾನ್ಯರು ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಆದುದರಿಂದ ಜನಸಾಮಾನ್ಯರು ತುಂಬಾ ಜಾಗರೂಕತೆಯಿಂದ ಇರಬೇಕಾದ ಅಗತ್ಯವಿದೆ. ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಆ ಮೂಲಕ ರಾಷ್ಟ್ರ ರಕ್ಷಣೆಯನ್ನು ಮಾಡಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಸುಬ್ರಮಣ್ಯ ನಟ್ಟೋಜ ಅವರು ಕರೆಕೊಟ್ಟರು.
ಅವರು ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಆರ್. ಪಿ. ಗೌಡ, ಗೌರವಾನ್ವಿತ ಪ್ರಧಾನ ಹಿರಿಯ ನ್ಯಾಯಾಧೀಶರು, ಎ. ಸಿ. ಜೆ. ಎಮ್ಹಾಗೂ ಅಧ್ಯಕ್ಷರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಇವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಕಾನೂನು ಎಂಬುದು ನಮ್ಮ ಜೀವನದುದ್ದಕ್ಕೂ ಹಿಂಬಾಲಿಸುತ್ತದೆ. ಇಂತಹ ಮಾಹಿತಿ ಕಾರ್ಯಾಗಾರವು ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಸಹಾಯಕವೆಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್. ಕೆ. ವಿ ಮಾತನಾಡಿ ವಿದ್ಯಾರ್ಥಿಗಳು ತುಂಬಾ ಜಾಗರೂಕತೆಯಿಂದ ಸಾಮಾಜಿಕ ಜಾಲತಾಣ ಗಳನ್ನು ಬಳಸುವಂತೆ ಕಿವಿ ಮಾತು ಹೇಳಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿದ್ದ ಶ್ರೀ ಶ್ಯಾಮ್ ಪ್ರಸಾದ್ ಕೈಲಾರ್ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು. ಕೆಲವೊಮ್ಮೆ ನಮಗರಿವಿಲ್ಲದೆಯೇ ಅಪರಾಧಗಳು ಆಗುವ ಸಾಧ್ಯತೆಗಳಿವೆ. ಆದರೆ ಕಾನೂನು ಅಜ್ಞಾನಕ್ಕೆ ಕ್ಷಮೆ ಇಲ್ಲ. ಸೈಬರ್ ಅಪರಾಧಗಳಲ್ಲಿ ಇಲೆಕ್ಟ್ರಾನಿಕ್ ದಾಖಲೆಗಳು ಸಹಿತ ಸಾಕ್ಷಿ ಸಿಗುವುದರಿಂದ ಮಕ್ಕಳು ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಪುತ್ತೂರು ವಕೀಲರ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಸೀಮಾ ನಾಗರಾಜ್ ಉಪಸ್ಥಿತರಿದ್ದರು.