ಹಳೆ ವಿದ್ಯಾರ್ಥಿ ಈ ವಾಹನದ ಮಾಲೀಕ ದೈಹಿಕ ಶಿಕ್ಷಕನೇ ಇದರ ಸಾರಥಿ
ಆಂಗ್ಲಮಾಧ್ಯಮ ಶಾಲೆಗಳ ದಬ್ಬಾಳಿಕೆಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹಳದಿ ಬಣ್ಣದ ಸ್ಕೂಲ್ ಬಸ್ಸಿನ ಆಕರ್ಷಣೆಗೆ ಒಳಗಾಗಿರುವ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳುಹಿಸುತ್ತಿದ್ದಾರೆ. ಆದ್ರೆ ಈ ನಡುವೆ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಸ್ಕೂಲ್ ಬಸ್ ವ್ಯವಸ್ಥೆ ಮಾಡಲಾಗಿದೆ. ಸ್ವತಃ ಶಾಲಾ ಶಿಕ್ಷಕ ಈ ಬಸ್ಸಿನ ಸಾರಥಿಯಾಗಿದ್ದಾರೆ.
ಒಂದು ಕಡೆ ಸ್ಕೂಲ್ ಬಸ್ಸಿಗಾಗಿ ಕಾಯುತ್ತಿರುವ ಪುಟಾಣಿಗಳು, ಇನ್ನೊಂದು ಕಡೆ ಮಕ್ಕಳನ್ನು ಕರೆದುಕೊಂಡು ಬರಲು ಹೊರಟಿರುವ ಬಸ್ಸಿನ ಸಾರಥಿ. ಅರೇ ಇದ್ಯಾವುದೋ ಕಾನ್ವೆಂಟ್ ಶಾಲೆ ಅಂದ್ಕೊಂಡ್ರ? ನಿಮ್ಮ ಊಹೆ ತಪ್ಪು. ಅಷ್ಟಕ್ಕೂ ಇದು ಯಾವುದೋ ಖಾಸಗಿ ಶಾಲೆಯಲ್ಲ. ಬದಲಾಗಿ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾರ್ಥಿಗಳ ಅನುಕೂಲಕ್ಕೆ ಉಚಿತವಾಗಿ ಸ್ಕೂಲ್ ವ್ಯಾನ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸಿನ ಸಾರಥಿಯೂ ಇದೇ ಶಾಲೆಯ ದೈಹಿಕ ಶಿಕ್ಷಕ ಅನ್ನೋದು ಇನ್ನೊಂದು ವಿಶೇಷ.
ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಸದುದ್ದೇಶದೊಂದಿಗೆ ಈ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸ್ವತಃ ಈ ಶಾಲೆಯ ದೈಹಿಕ ಶಿಕ್ಷಕ ರಾಜರಾಮ್ ಅವರೇ ಈ ಮಿನಿ ಬಸ್ ಡ್ರೈವ್ ಮಾಡಿಕೊಂಡು ಹೋಗಿ ವಿದ್ಯಾರ್ಥಿಗಳನ್ನು ಪಿಕಪ್ ಮಾಡುತ್ತಾರೆ. ಈ ಸೇವೆಯನ್ನು ಉಚಿತವಾಗಿಯೇ ರಾಜಾರಾಮ್ ನೀಡುತ್ತಿದ್ದಾರೆ. ಬೆಳಗ್ಗೆ 7:30ಕ್ಕೆ ರೆಡಿಯಾಗಿ 8 ಗಂಟೆಗೆ ಮಿನಿ ಬಸ್ಸಿನ ಚಾಲಕನ ಸೀಟಿನಲ್ಲಿ ಕುಳಿತರೇ ಎಲ್ಲಾ 87 ಮಕ್ಕಳನ್ನು 9:30ಕ್ಕೆ ಶಾಲೆಗೆ ಕರೆತರುತ್ತಾರೆ.
ಈ ಶಾಲೆಯ ಹಳೆ ವಿದ್ಯಾರ್ಥಿ ವಿಜಯ ಹೆಗ್ಡೆ ಬಾರಾಳಿ ಈ ಬಸ್ಸನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಹಳೆ ವಿದ್ಯಾರ್ಥಿಗಳೇ ಬಸ್ಸಿನ ನಿರ್ವಹಣೆ ನೋಡುತ್ತಿದ್ದಾರೆ. ಇಷ್ಟಾದ್ದರೂ ಕೂಡಾ ಶಿಕ್ಷಕ ರಾಜಾರಾಮ್ ತಮ್ಮ ಜೇಬಿನಿಂದ 65 ಸಾವಿರ ರೂಪಾಯಿ ಬಸ್ಸಿನ ನಿರ್ವಹಣೆಗೆ ವ್ಯಯಿಸಿದ್ದಾರೆ. ದೈಹಿಕ ಶಿಕ್ಷಕರಾಗಿದ್ರು ಈ ಸೇವೆ ನೀಡುತ್ತಾ ಮಕ್ಕಳಿಗೆ ಗಣಿತ, ವಿಜ್ಞಾನವನ್ನು ಬೋಧಿಸುತ್ತಾರೆ. ವಿದ್ಯಾರ್ಥಿಗಳಿಗೆ ಈ ಪಿ.ಟಿ ಮಾಸ್ಟ್ರ ಸೇವೆಯಿಂದ ಖುಷಿಯ ಜೊತೆ, ಭದ್ರತೆಯೂ ಸಿಗುತ್ತಿದೆ.