Sunday, January 19, 2025
ರಾಷ್ಟ್ರೀಯಸುದ್ದಿ

ವಂಚನೆ, ಆಮಿಷ ಮತ್ತು ಬಲವಂತದ ಮತಾಂತರ ಡೇಂಜರ್ : ಸುಪ್ರೀಂ ಕಳವಳ ; ರಾಷ್ಟ್ರೀಯ ಭದ್ರತೆಗೆ ಅಪಾಯ, ಕೇಂದ್ರದ ಕ್ರಮಗಳ ಬಗ್ಗೆ ಪ್ರಶ್ನೆ – ಕಹಳೆ ನ್ಯೂಸ್

ನವದೆಹಲಿ: ವಂಚನೆ, ಆಮಿಷ ಮತ್ತು ಬಲವಂತದ ಧಾರ್ವಿುಕ ಮತಾಂತರ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದಕ್ಕೆ ಕಡಿವಾಣ ಹಾಕದಿದ್ದರೆ ದೇಶದ ಭದ್ರತೆಗೆ ಅಪಾಯವಿದೆ ಮತ್ತು ನಾಗರಿಕರ ಸ್ವಾತಂತ್ರ್ಯ, ಮೂಲಭೂತ ಹಕ್ಕಿಗೆ ಹಾನಿ ಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಲವಂತದ ಧಾರ್ವಿುಕ ಮತಾಂತರ ಬಹಳ ಗಂಭೀರ ವಿಷಯ ಎಂದಿರುವ ನ್ಯಾ.ಎಂ.ಆರ್. ಶಾ ಮತ್ತು ನ್ಯಾ. ಹಿಮಾ ಕೊಹ್ಲಿ ಒಳಗೊಂಡ ದ್ವಿಸದಸ್ಯ ಪೀಠ, ಬಲವಂತದ ಧಾರ್ವಿುಕ ಮತಾಂತರಗಳನ್ನು ನಿಲ್ಲಿಸದಿದ್ದರೆ ಅತ್ಯಂತ ಕಠಿಣ ಪರಿಸ್ಥಿತಿ ಉದ್ಭವಿಸಲಿದೆ. ಹೀಗಾಗಿ ಇದನ್ನು ತಡೆಯಲು ಕೇಂದ್ರ ಏನು ಮಾಡಿದೆ ಎನ್ನುವುದು ಗೊತ್ತಾಗಬೇಕಿದೆ ಎಂದು ಅಭಿಪ್ರಾಯ ಪಟ್ಟಿದೆ. ಒತ್ತಾಯದ ಮತಾಂತರದಂತಹ ಆಚರಣೆಗಳನ್ನು ತಡೆಯಲು ಕೇಂದ್ರ ಕೈಗೊಂಡಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ.

ಆಮಿಷ, ಬೆದರಿಕೆ, ಗಿಫ್ಟ್ ಹಾಗೂ ಹಣಕಾಸು ಪ್ರಯೋಜನಗಳನ್ನು ನೀಡಿ ಧಾರ್ವಿುಕ ಮತಾಂತರ ದೇಶದಲ್ಲಿ ವ್ಯಾಪಕಗೊಂಡಿದ್ದು, ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ಕೈಗೆತ್ತಿಕೊಂಡ ವೇಳೆ ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಇಂಥ ಮತಾಂತರಗಳು ಹೆಚ್ಚಿರುವುದು ನಿಜ. ಅನೇಕ ಬಾರಿ ಸಂತ್ರಸ್ತರಿಗೆ ತಮ್ಮನ್ನು ಕ್ರಿಮಿನಲ್ ಅಪರಾಧಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದಿರುವುದಿಲ್ಲ. ಬದಲಿಗೆ, ಅವರು ನಮ್ಮ ನೆರವಿಗೆ ಬಂದಿದ್ದಾರೆ ಎಂದೇ ಸಮರ್ಥಿಸಿಕೊಳ್ಳುತ್ತಾರೆ ಎಂದರು. ಹಾಗಾದರೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ನ.22ರೊಳಗೆ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿತು.

ರಾಷ್ಟ್ರದ ಭದ್ರತೆ, ಧರ್ಮ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಈ ಮತಾಂತರ. ಬಲವಂತದ ಮತಾಂತರವನ್ನು ತಡೆಯಲು ಸರ್ಕಾರ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಒತ್ತಾಯದ ಮತಾಂತರ ತಡೆಯಲು ಹೆಚ್ಚುವರಿಯಾಗಿ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ತಿಳಿಸಬೇಕು. ದೇಶದಲ್ಲಿ ಧರ್ಮದ ಸ್ವಾತಂತ್ರ್ಯವಿದೆ. ಆದರೆ, ಇದರಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಒತ್ತಾಯದ ಮತಾಂತರ ಸಂವಿಧಾನ ರಚನಾ ಸಭೆಯಲ್ಲೂ ಚರ್ಚೆಯಾಗಿತ್ತು ಎಂದ ತುಷಾರ್ ಮೆಹ್ತಾ, ಹಿಂದೆ ಒಡಿಶಾ ಮತ್ತು ಮಧ್ಯಪ್ರದೇಶ ಸರ್ಕಾರಗಳು ಜಾರಿಗೆ ತಂದಿದ್ದ ಎರಡು ಮತಾಂತರ ವಿರೋಧಿ ಕಾಯ್ದೆಗಳಿದ್ದವು. ಅದರಲ್ಲಿ ವಂಚನೆ, ಸುಳ್ಳು ಅಥವಾ ಹಣದ ಮೂಲಕ ನಡೆಸುವ ಬಲವಂತದ ಮತಾಂತರ ನಿಯಂತ್ರಿಸುವ ಅಂಶಗಳಿವೆ. ಈ ವಿಷಯಗಳು ಸುಪ್ರೀಂಕೋರ್ಟ್ ಮುಂದೆ ಪರಿಗಣನೆಗೆ ಬಂದಿದ್ದಾಗ, ನ್ಯಾಯಾಲಯ ಕೂಡ ಕಾಯ್ದೆಗಳ ಸಿಂಧುತ್ವವನ್ನು ಎತ್ತಿಹಿಡಿದಿತ್ತು ಎಂದು ವಿವರಿಸಿದರು.

ಕಾನೂನಿನ ಉದ್ದೇಶವಿಲ್ಲ: ಮತಾಂತರ ತಡೆಗೆ ಕಾನೂನು ತರುವ ಉದ್ದೇಶ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ 2021ರಲ್ಲಿ ಲೋಕಸಭೆಯಲ್ಲಿ ತಿಳಿಸಿತ್ತು. ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಮತಾಂತರ ತಡೆ ಕಾನೂನು ಜಾರಿಗೆ ತರಲಾಗಿದೆ. ಬಲವಂತದ ಮತಾಂತರಗಳಿಂದಾಗಿ ಅಂತರ್​ಧರ್ವಿುಯ ವಿವಾಹಗಳು ನಡೆಯುತ್ತಿವೆ ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆಯೇ ಮತ್ತು ಅದಕ್ಕೆ ಪೂರಕ ಸಾಕ್ಷ್ಯಗಳಿವೆ ಎಂದು ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಗೃಹ ಇಲಾಖೆ, ಸಂವಿಧಾನದ ಏಳನೇ ಶೆಡ್ಯೂಲ್ ಪ್ರಕಾರ ‘ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್’ ರಾಜ್ಯದ ವಿಷಯಗಳಾಗಿವೆ. ಆದ್ದರಿಂದ ಧಾರ್ವಿುಕ ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ನೋಂದಣಿ, ತನಿಖೆ ಮತ್ತು ಕಾನೂನು ಕ್ರಮಗಳು ಪ್ರಾಥಮಿಕವಾಗಿ ರಾಜ್ಯಗಳಿಗೆ ಸಂಬಂಧಪಟ್ಟದ್ದಾಗಿವೆ. ಕಾನೂನು ವಿರೋಧಿ ಕೃತ್ಯಗಳು ಬೆಳಕಿಗೆ ಬಂದಾಗ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿತ್ತು.

ಕೇಂದ್ರ ಸರ್ಕಾರದ ನಡೆಗೆ ಕುತೂಹಲ: ಒಡಿಶಾ, ಮಧ್ಯಪ್ರದೇಶ, ಗುಜರಾತ್, ಹಿಮಾಚಲಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಮತಾಂತರ ತಡೆ ಕಾನೂನುಗಳಿವೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಈಗಿನ ಅಥವಾ ಹಿಂದಿನ ಕೇಂದ್ರ ಸರ್ಕಾರಗಳು ಕಾನೂನು ಜಾರಿಗೊಳಿಸುವ ಯತ್ನ ಮಾಡಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಜಾರಿಗೊಳ್ಳುವಂತೆ ನೋಡಿಕೊಳ್ಳುತ್ತಿದೆ. ಆದರೆ, ಈ ಬಾರಿ ಸುಪ್ರೀಂಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿರುವುದಲ್ಲದೆ, ಕೇಂದ್ರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿರುವುದು ಮಹತ್ವ ಪಡೆದುಕೊಂಡಿದೆ. ಹೀಗಾಗಿ, ತನ್ನ ಅಫಿಡವಿಟ್​ನಲ್ಲಿ ಏನಾದರೂ ಹೊಸ ಕ್ರಮಗಳ ಬಗ್ಗೆ ಕೇಂದ್ರ ಪ್ರಸ್ತಾಪಿಸುವುದೇ ಎಂಬ ಕುತೂಹಲ ಮೂಡಿದೆ.

ಹಸ್ತಕ್ಷೇಪ ಸಾಧ್ಯವೇ?: ಕೇಂದ್ರ ಸರ್ಕಾರ ಮತಾಂತರ ತಡೆ ಕಾನೂನು ತರುವ ಬಗ್ಗೆ ಸ್ಪಷ್ಟತೆ ಇಲ್ಲ. ಈಗಲೇ ಈ ಬಗ್ಗೆ ಹೇಳುವುದು ಕಷ್ಟ. ಮುಖ್ಯವಾಗಿ, ಕಾನೂನು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಕೇಂದ್ರದ ಹಸ್ತಕ್ಷೇಪ ಸಾಧ್ಯ ಇದೆಯೇ ಎಂಬುದನ್ನು ಕಾದು ನೋಡಬೇಕು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಅರ್ಜಿಯಲ್ಲೇನಿದೆ?; ಬಲವಂತದ ಧಾರ್ವಿುಕ ಮತಾಂತರ ರಾಷ್ಟ್ರವ್ಯಾಪಿ ಸಮಸ್ಯೆ. ಇದನ್ನು ತಡೆಯಲೇಬೇಕು. ದೇಶದಲ್ಲಿ ಧಾರ್ವಿುಕ ಮತಾಂತರದಿಂದ ಮುಕ್ತವಾದ ಒಂದು ಜಿಲ್ಲೆಯೂ ಇಲ್ಲ. ನಾಗರಿಕ ಸಮಾಜ ಇದರಿಂದ ಭಾರಿ ತೊಂದರೆಗೀಡಾಗಿದೆ ಎಂದು ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಅರ್ಜಿಯಲ್ಲಿ ವಿವರಿಸಿದ್ದಾರೆ. ಉಡುಗೊರೆ ಮತ್ತು ವಿತ್ತೀಯ ಪ್ರಯೋಜನ, ಬೆದರಿಕೆ, ವಂಚನೆ, ಮಾಟಮಂತ್ರ, ಮೂಢನಂಬಿಕೆ, ಪವಾಡಗಳನ್ನು ಬಳಸಿಕೊಂಡು ಮತಾಂತರಗೊಳ್ಳುವ ಘಟನೆಗಳು ಪ್ರತಿವಾರ ವರದಿಯಾಗುತ್ತಿವೆ. ಆದರೆ, ಕೇಂದ್ರ ಮತ್ತು ರಾಜ್ಯಗಳು ಇದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಉಪಾಧ್ಯಾಯ, ಧಾರ್ವಿುಕ ಮತಾಂತರವನ್ನು ನಿಯಂತ್ರಿಸುವ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಿ, ವಿಧೇಯಕ ರೂಪಿಸಲು ರಾಷ್ಟ್ರೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.