ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಆಂಟಿ ಹ್ಯುಮನ್ ಟ್ರಾಫಿಕಿಂಗ್ ಕ್ಲಬ್ ಹಾಗೂ ಇಂಗ್ಲೀಷ್ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ವಿಷಯದ ಮೇಲೆ ಕೊಲ್ಯಾಜ್ ಸ್ಪರ್ಧೆಯನ್ನು ಆಯೋಜಿಸಲಾಯಿತು. ಭಾರತೀಯ ದಂಡಸಂಹಿತೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾದ ಮಾನವ ಕಳ್ಳಸಾಗಣೆ ಹಾಗೂ ಮಾನವ ತನ್ನ ಸಹಜೀವಿಗಳೊಡನೆ ನಡೆಸುವ ಅಮಾನವೀಯ ಕೃತ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸ್ಪರ್ಧೆಯನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂತೊನಿ ಪ್ರಕಾಶ್ ಮೊಂತೆರೊ ರವರು “ಮಾನವ ಕಳ್ಳ ಸಾಗಣೆಯು ಒಂದು ಜ್ವಲಂತ ಸಮಸ್ಯೆಯಾಗಿದೆ. ಇದನ್ನು ತಡೆಗಟ್ಟುವಲ್ಲಿ ವಿದ್ಯಾವಂತರಾದ ನಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ. ನಾವು ಇಂತಹ ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡು ಇತರರಲ್ಲೂ ಅರಿವು ಮೂಡಿಸಿದಲ್ಲಿ ಈ ಸಮಸ್ಯೆಯನ್ನು ತಡೆಗಟ್ಟಬಹುದು“ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ| ಗಣೇಶ್ ಭಟ್ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರೂ ಕಾಲೇಜಿನ ಉಪಪ್ರಾಂಶುಪಾಲರೂ ಆದ ಡಾ| ಎ ಪಿ ರಾಧಾಕೃಷ್ಣ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನುಶ್ರೀ ಪ್ರಾರ್ಥಿಸಿದರು. ಆಂಟಿ ಹ್ಯುಮನ್ ಟ್ರಾಫಿಕಿಂಗ್ ಕ್ಲಬ್‌ನ ಸದಸ್ಯ ಸಂಚಾಲಕರು ಭಾರತಿ ಎಸ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಆಶಿಕ್ ವಂದಿಸಿದರು, ಜತೆಕಾರ್ಯದರ್ಶಿ ಶಿವಾನಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ತಲಾ ಆರು ಮಂದಿ ವಿದ್ಯಾರ್ಥಿಗಳನ್ನೊಳಗೊಂಡ 15 ತಂಡಗಳು ಭಾಗವಹಿಸಿದ್ದವು.